
ಪ್ಯಾರಿಸ್: ಜಾವೆಲಿನ್ ಎಸೆತಗಾರ ಸುಮಿತ್ ಅಂತಿಲ್ ಅವರು ಸೋಮವಾರ ತಡರಾತ್ರಿಯ ಎಫ್-64 ವಿಭಾಗದಲ್ಲಿ ಅವರು ಚಿನ್ನದ ಪದಕವನ್ನೇ ಗೆದ್ದಿದ್ದು ಈ ಮೂಲಕ ಅತ್ಲೆಟಿಕ್ಸ್ ವಿಭಾಗದಲ್ಲಿ ಸತತ 2 ಚಿನ್ನದ ಪದಕ ಗೆದ್ದ ಮೊದಲ ಭಾರತೀಯನೆಂಬ ಹಿರಿಮೆಗೆ ಪಾತ್ರರಾದರು.
ಜಾಗತಿಕ ಮಟ್ಟದಲ್ಲಿ ಸುಮಿತ್ ಅಂತಿಲ್ ಗೆದ್ದ 5ನೇ ಚಿನ್ನ ಇದಾಗಿದ್ದು ಇದಕ್ಕೂ ಮುನ್ನ ಏಷ್ಯನ್ ಗೇಮ್ಸ್, ಕೋಬೆ ವಿಶ್ವ ಚಾಂಪಿಯನ್‌ಶಿಪ್, ಪ್ಯಾರಿಸ್ ವಿಶ್ವ ಚಾಂಪಿಯನ್‌ಶಿಪ್‌ನಲ್ಲೂ ಬಂಗಾರಕ್ಕೆ ಕೊರಳೊಡ್ಡಿದ್ದರು. ಹೀಗೆ ವಿಶ್ವ ಮಟ್ಟದ ಸ್ಪರ್ಧೆಗಳಲ್ಲೆಲ್ಲ ಸುಮಿತ್‌ಗೆ ಸ್ವರ್ಣವೇ ಸಂಗಾತಿ ಆಗುತ್ತಿರುವುದೊಂದು ಗಮನಾರ್ಹವಾಗಿದೆ.
ಪ್ಯಾರಿಸ್ ಫೈನಲ್‌ನಲ್ಲಿ ಸುಮಿತ್ 70.59 ಮೀ. ದೂರ ಎಸೆಯುವ ಮೂಲಕ ನೂತನ ಪ್ಯಾರಾಲಿಂಪಿಕ್ಸ್ ದಾಖಲೆ ನಿರ್ಮಿಸಿದ ಸುಮಿತ್ ತಮ್ಮದೇ ದಾಖಲೆಯನ್ನು 2 ಸಲ ಮುರಿದಿದ್ದು ವಿಶೇಷ. 2ನೇ ಪ್ರಯತ್ನದಲ್ಲೇ ಈ ಸಾಧನೆಗೈದು ಚಿನ್ನವನ್ನು ತಮ್ಮ ಹೆಸರಿಗೆ ಬರೆದುಕೊಂಡರು.
ಸುಮಿತ್ ಅಂತಿಲ್ ಮೊದಲ ಪ್ರಯತ್ನದಲ್ಲೇ 69.11 ಮೀ. ದೂರಕ್ಕೆ ಜಾವೆಲಿನ್ ಎಸೆದು ನೂತನ ಪ್ಯಾರಾಲಿಂಪಿಕ್ಸ್ ದಾಖಲೆ ಸ್ಥಾಪಿಸಿದರು. ಟೋಕಿಯೊದಲ್ಲಿ ನಿರ್ಮಿಸಿದ್ದ ತಮ್ಮ 68.55 ಮೀ. ದಾಖಲೆಯನ್ನು ಮುರಿದರು. 2ನೇ ಸುತ್ತಿನಲ್ಲಿ ಇದು 70.59 ಮೀ.ಗೆ ಏರಿತು. 3ನೇ ಸುತ್ತಿನಲ್ಲಿ 66.66 ಮೀ. ದಾಖಲಾಯಿತು. ನಾಲ್ಕನೆಯದು ಫೌಲ್. ಬಳಿಕ 69.04 ಹಾಗೂ 66.57 ಮೀ. ದಾಖಲಿಸಿದರು.
ವಿಶ್ವದಾಖಲೆಯ ವೀರ
ಪ್ಯಾರಾ ಜಾವೆಲಿನ್ ವಿಶ್ವದಾಖಲೆ ಕೂಡ ಸುಮಿತ್ ಅಂತಿಲ್ ಹೆಸರಿನಲ್ಲಿದೆ. 2022ರಲ್ಲಿ ಹ್ಯಾಂಗ್‌ಝೂನಲ್ಲಿ ನಡೆದ ಏಷ್ಯನ್ ಗೇಮ್ಸ್ ನಲ್ಲಿ 73.29 ಮೀ. ದೂರ ಎಸೆಯುವ ಮೂಲಕ ಈ ದಾಖಲೆ ನಿರ್ಮಿಸಿದ್ದರು. ಹೀಗಾಗಿ ಪ್ಯಾರಿಸ್‌ನಲ್ಲಿ ಇವರು ಚಿನ್ನದ ಭರವಸೆ ಮೂಡಿಸಿದ್ದರು. ಇದನ್ನು ಸಾಕಾರ ಗೊಳಿಸುವಲ್ಲಿ ಯಶಸ್ವಿಯಾಗಿದ್ದಾರೆ.













