
ವಾಷಿಂಗ್ಟನ್: ಡೆನ್ಮಾರ್ಕ್ ಹಾಗೂ ಗ್ರೀನ್‌ಲ್ಯಾಂಡ್ ಜೊತೆ ಅಮೆರಿಕ ಶಾಶ್ವತ ರಕ್ಷಣಾ ಒಪ್ಪಂದಕ್ಕೆ ಸಹಿ ಹಾಕಿದೆ ಎಂದು ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಘೋಷಿಸಿದ್ದಾರೆ. ಇದರಿಂದ ಗ್ರೀನ್‌ಲ್ಯಾಂಡ್‌ನ ಭದ್ರತೆ ಸೇರಿದಂತೆ ಪ್ರಮುಖ ಅಗತ್ಯತೆಗಳ ಮೇಲೆ ಅಮೆರಿಕಕ್ಕೆ ಹೆಚ್ಚಿನ ನಿಯಂತ್ರಣ ದೊರೆಯಲಿದೆ ಎಂದು ಅವರು ತಿಳಿಸಿದ್ದಾರೆ.
ಒಪ್ಪಂದದಡಿ ಅಮೆರಿಕಕ್ಕೆ ಯಾವುದೇ ಹೆಚ್ಚುವರಿ ವೆಚ್ಚವಿಲ್ಲದೆ ಗ್ರೀನ್‌ಲ್ಯಾಂಡ್‌ನ ಭದ್ರತಾ ವ್ಯವಸ್ಥೆಯಲ್ಲಿ ಪ್ರಮುಖ ಅಧಿಕಾರ ಸಿಗಲಿದೆ ಎಂದು ಟ್ರಂಪ್ ಹೇಳಿದ್ದಾರೆ.
ಅಮೆರಿಕದ ಅನುಮತಿಯಿಲ್ಲದೆ ಯಾವುದೇ ಎದುರಾಳಿ ರಾಷ್ಟ್ರ ಗ್ರೀನ್‌ಲ್ಯಾಂಡ್‌ನಲ್ಲಿ ಸೇನಾ ನೆಲೆ ಸ್ಥಾಪಿಸುವುದು, ಸೈನಿಕರನ್ನು ನಿಯೋಜಿಸುವುದು ಅಥವಾ ಸೂಕ್ಷ್ಮ ಹೂಡಿಕೆ ನಡೆಸುವುದನ್ನು ನಿರ್ಬಂಧಿಸಲಾಗಿದೆ ಎಂದು ತಿಳಿಸಲಾಗಿದೆ.
ಈ ಒಪ್ಪಂದಕ್ಕೆ ಯಾವುದೇ ನಿಗದಿತ ಅಂತಿಮ ಅವಧಿ ಇರುವುದಿಲ್ಲ ಎಂದು ಟ್ರಂಪ್ ಹೇಳಿದ್ದಾರೆ. ಗ್ರೀನ್‌ಲ್ಯಾಂಡ್ ಹಾಗೂ ಅಮೆರಿಕದ ರಕ್ಷಣೆಗೆ ಅಗತ್ಯವಾದ ಕ್ರಮಗಳನ್ನು ಕೈಗೊಳ್ಳಲು ವಾಷಿಂಗ್ಟನ್‌ಗೆ ವ್ಯಾಪಕ ಸ್ವಾತಂತ್ರ್ಯ ಇರಲಿದೆ ಎಂದು ಅವರು ತಿಳಿಸಿದ್ದಾರೆ.
ಇದೇ ವೇಳೆ, ಗ್ರೀನ್‌ಲ್ಯಾಂಡ್‌ನ ಸೂಕ್ತ ಪ್ರದೇಶಗಳಲ್ಲಿ ದೊಡ್ಡ ಪ್ರಮಾಣದ ಅಮೆರಿಕನ್ ಸೇನಾ ನೆಲೆಗಳನ್ನು ನಿರ್ಮಿಸುವ ಯೋಜನೆಯೂ ಇದೆ. ಈ ಕಾರ್ಯದಲ್ಲಿ ಸ್ಥಳೀಯ ಜನರೊಂದಿಗೆ ಸಹಕಾರದಿಂದ ಮುಂದುವರಿಯಲಾಗುವುದು ಎಂದು ಹೇಳಲಾಗಿದೆ…
ಕಳೆದ ಹಲವು ದಶಕಗಳಿಂದ ಅಮೆರಿಕದ ಅಧ್ಯಕ್ಷರಿಗೆ ಗ್ರೀನ್‌ಲ್ಯಾಂಡ್‌ನ ಕಾರ್ಯತಂತ್ರದ ಮಹತ್ವ ತಿಳಿದಿದ್ದರೂ ಒಪ್ಪಂದ ಸಾಧ್ಯವಾಗಿರಲಿಲ್ಲ. ಆದರೆ ಇದೀಗ ಈ ವಿಚಾರವನ್ನು ಶಾಶ್ವತವಾಗಿ ಬಗೆಹರಿಸಿರುವುದಾಗಿ ಟ್ರಂಪ್ ತಮ್ಮ ಅಧಿಕೃತ ಎಕ್ಸ್ ಖಾತೆಯಲ್ಲಿ ತಿಳಿಸಿದ್ದಾರೆ.






























































































































