
ಹೊಸದಿಲ್ಲಿ: ಪಾಸ್‌ಪೋರ್ಟ್ ಅರ್ಜಿ ಶುಲ್ಕವನ್ನು ಕೇಂದ್ರ ಸರ್ಕಾರ ಪರಿಷ್ಕರಿಸಿದ್ದು, ಮಕ್ಕಳ ಪಾಸ್‌ಪೋರ್ಟ್‌ನ ಮಾನ್ಯತೆ ಅವಧಿಯಲ್ಲೂ ಹೊಸ ನಿಯಮ ಜಾರಿಗೆ ಬಂದಿದೆ. ಈ ಕುರಿತು ವಿದೇಶಾಂಗ ವ್ಯವಹಾರಗಳ ಸಚಿವಾಲಯವು ಪಾಸ್‌ಪೋರ್ಟ್ (ತಿದ್ದುಪಡಿ) ನಿಯಮಗಳು-2026 ಅಡಿಯಲ್ಲಿ ಅಧಿಸೂಚನೆ ಹೊರಡಿಸಿದೆ. ಸೆಪ್ಟೆಂಬರ್ 15ರಂದು ಅಧಿಕೃತ ಗೆಝೆಟ್‌ನಲ್ಲಿ ಪ್ರಕಟವಾದ ಬೆನ್ನಲ್ಲೇ ನಿಯಮಗಳು ಜಾರಿಗೆ ಬಂದಿವೆ.
ಹೊಸ ನಿಯಮದಂತೆ, 15 ವರ್ಷಕ್ಕಿಂತ ಕಡಿಮೆ ವಯಸ್ಸಿನ ಮಕ್ಕಳಿಗೆ ನೀಡುವ 36 ಪುಟಗಳ ಸಾಮಾನ್ಯ ಪಾಸ್‌ಪೋರ್ಟ್ 5 ವರ್ಷಗಳವರೆಗೆ ಅಥವಾ ಮಗು 18 ವರ್ಷ ತಲುಪುವವರೆಗೆ ಮಾನ್ಯವಾಗಿರಲಿದೆ. ಈ ಎರಡರಲ್ಲಿ ಯಾವುದು ಮೊದಲು ಆಗುತ್ತದೆಯೋ ಅದನ್ನೇ ಮಾನ್ಯತಾ ಅವಧಿಯಾಗಿ ಪರಿಗಣಿಸಲಾಗುತ್ತದೆ.
ಪಾಸ್‌ಪೋರ್ಟ್ ಸೇವೆಗಳಿಗೆ ಪರಿಷ್ಕೃತ ಶುಲ್ಕಗಳು ಜುಲೈ 1ರಿಂದಲೇ ಜಾರಿಗೆ ಬಂದಿವೆ. ಹೊಸ ಪಾಸ್‌ಪೋರ್ಟ್, ನವೀಕರಣ, ತತ್ಕಾಲ್ ಸೇವೆ, ಕಳೆದುಹೋದ ಅಥವಾ ಹಾನಿಗೀಡಾದ ಪಾಸ್‌ಪೋರ್ಟ್ ಬದಲಾವಣೆ ಹಾಗೂ ಪೊಲೀಸ್ ಕ್ಲಿಯರೆನ್ಸ್ ಸರ್ಟಿಫಿಕೇಟ್ ಸೇರಿದಂತೆ ವಿವಿಧ ಸೇವೆಗಳ ಶುಲ್ಕ ಪರಿಷ್ಕರಿಸಲಾಗಿದೆ.
ವಯಸ್ಕರ 36 ಪುಟಗಳ ಸಾಮಾನ್ಯ ಪಾಸ್‌ಪೋರ್ಟ್ ಶುಲ್ಕವನ್ನು ₹1,500ರಿಂದ ₹2,500ಕ್ಕೆ ಹಾಗೂ 60 ಪುಟಗಳ ಪಾಸ್‌ಪೋರ್ಟ್ ಶುಲ್ಕವನ್ನು ₹2,000ರಿಂದ ₹3,500ಕ್ಕೆ ಹೆಚ್ಚಿಸಲಾಗಿದೆ. ತತ್ಕಾಲ್ ಸೇವೆಯಲ್ಲೂ ಶುಲ್ಕ ಏರಿಕೆಯಾಗಿದ್ದು, 36 ಪುಟಗಳ ಪಾಸ್‌ಪೋರ್ಟ್‌ಗೆ ₹5,000 ಹಾಗೂ 60 ಪುಟಗಳ ಪಾಸ್‌ಪೋರ್ಟ್‌ಗೆ ₹6,000 ನಿಗದಿಪಡಿಸಲಾಗಿದೆ.
ಅಪ್ರಾಪ್ತ ವಯಸ್ಕರಿಗೆ 36 ಪುಟಗಳ ಸಾಮಾನ್ಯ ಪಾಸ್‌ಪೋರ್ಟ್ ಶುಲ್ಕ ₹1,000ರಿಂದ ₹1,750ಕ್ಕೆ ಏರಿಕೆಯಾಗಿದೆ. ತತ್ಕಾಲ್ ಸೇವೆಗೆ ₹3,000 ಶುಲ್ಕ ನಿಗದಿಯಾಗಿದೆ. ಇದೇ ವೇಳೆ, 8 ವರ್ಷಕ್ಕಿಂತ ಕಡಿಮೆ ವಯಸ್ಸಿನ ಮಕ್ಕಳು ಮತ್ತು 60 ವರ್ಷ ಮೇಲ್ಪಟ್ಟ ಹಿರಿಯ ನಾಗರಿಕರಿಗೆ ಹೊಸ ಪಾಸ್‌ಪೋರ್ಟ್ ಅರ್ಜಿ ಶುಲ್ಕದಲ್ಲಿ ಶೇ.10ರಷ್ಟು ರಿಯಾಯಿತಿ ಮುಂದುವರಿಯಲಿದೆ.






























































































































