
ಬೆಂಗಳೂರು: ಕಾಲೇಜು ವಿದ್ಯಾರ್ಥಿಗಳ ಸುರಕ್ಷತೆ ಹಾಗೂ ಶಿಸ್ತು ಕಾಪಾಡುವ ಉದ್ದೇಶದಿಂದ ಕರ್ನಾಟಕ ಸರ್ಕಾರ ಶೈಕ್ಷಣಿಕ ಪ್ರವಾಸಗಳಿಗೆ ಹೊಸ ನಿಯಮಗಳನ್ನು ಜಾರಿಗೆ ತಂದಿದೆ. ಸರ್ಕಾರಿ ಪ್ರಥಮ ದರ್ಜೆ ಕಾಲೇಜುಗಳ ಪ್ರವಾಸದಲ್ಲಿ ಸೆಲ್ಫಿ, ವಿಡಿಯೋ ಹಾಗೂ ರೀಲ್ಸ್ ಚಿತ್ರೀಕರಣಕ್ಕೆ ಸಂಪೂರ್ಣ ನಿರ್ಬಂಧ ವಿಧಿಸಲಾಗಿದೆ.
ಸೆಲ್ಫಿ, ರೀಲ್ಸ್‌ಗೆ ನಿಷೇಧ: ಪ್ರವಾಸದ ವೇಳೆ ವಿದ್ಯಾರ್ಥಿಗಳು ಸೆಲ್ಫಿ, ವಿಡಿಯೋ ಅಥವಾ ರೀಲ್ಸ್ ಮಾಡುವಂತಿಲ್ಲ. ಪ್ರವಾಸದ ಉದ್ದೇಶ ಶೈಕ್ಷಣಿಕ ಚಟುವಟಿಕೆಗೆ ಮಾತ್ರ ಸೀಮಿತವಾಗಿರಬೇಕು.
5 ದಿನಗಳ ಮಿತಿ: ಶೈಕ್ಷಣಿಕ ಪ್ರವಾಸದ ಅವಧಿ ಗರಿಷ್ಠ 5 ದಿನಗಳಿಗೆ ಸೀಮಿತವಾಗಿರಬೇಕು.
ಇಲಾಖೆ ಅನುಮತಿ ಕಡ್ಡಾಯ: ಪ್ರವಾಸ ಆಯೋಜಿಸುವ ಮುನ್ನ ಕಾಲೇಜು ಶಿಕ್ಷಣ ಇಲಾಖೆಯಿಂದ ಲಿಖಿತ ಅನುಮತಿ ಪಡೆಯಬೇಕು. ಪ್ರವಾಸದ ಮಾರ್ಗ ಹಾಗೂ ಭೇಟಿ ನೀಡುವ ಸ್ಥಳಗಳ ವಿವರವನ್ನು ಮೊದಲೇ ಸಲ್ಲಿಸಬೇಕು.
ಪೋಷಕರ ಒಪ್ಪಿಗೆ ಅಗತ್ಯ: ವಿದ್ಯಾರ್ಥಿಗಳಿಂದ ಮುಚ್ಚಳಿಕೆ ಪತ್ರ ಪಡೆದು, ಪೋಷಕರ ಸಹಿಯೊಂದಿಗೆ ಇಲಾಖೆಗೆ ಸಲ್ಲಿಸುವುದು ಕಡ್ಡಾಯವಾಗಿದೆ.
ಮಳೆಗಾಲದಲ್ಲಿ ಪ್ರವಾಸವಿಲ್ಲ: ವಿದ್ಯಾರ್ಥಿಗಳ ಸುರಕ್ಷತೆಯ ದೃಷ್ಟಿಯಿಂದ ಮಳೆಗಾಲದಲ್ಲಿ ಶೈಕ್ಷಣಿಕ ಪ್ರವಾಸ ನಡೆಸಲು ಅವಕಾಶ ಇರುವುದಿಲ್ಲ.
ಕಾಯಂ ಉಪನ್ಯಾಸಕರ ಹಾಜರಿ: ಪ್ರವಾಸದ ವೇಳೆ ವಿದ್ಯಾರ್ಥಿಗಳೊಂದಿಗೆ ಕಾಯಂ ಉಪನ್ಯಾಸಕರು ಕಡ್ಡಾಯವಾಗಿ ಇರಬೇಕು. ಅತಿಥಿ ಉಪನ್ಯಾಸಕರನ್ನು ಮಾತ್ರ ಕಳುಹಿಸುವಂತಿಲ್ಲ.
ಸಿಬ್ಬಂದಿ ಸಂಖ್ಯೆಗೆ ಮಿತಿ: ಪ್ರವಾಸದಲ್ಲಿ ಗರಿಷ್ಠ ನಾಲ್ವರು ಬೋಧಕ ಸಿಬ್ಬಂದಿ ಇರಬಹುದು. ಇವರಲ್ಲಿ ಇಬ್ಬರು ಮಹಿಳಾ ಉಪನ್ಯಾಸಕಿಯರು ಹಾಗೂ ಒಬ್ಬ ‘ಡಿ’ ದರ್ಜೆ ನೌಕರರು ಕಡ್ಡಾಯವಾಗಿ ಇರಬೇಕು.
ಪೊಲೀಸರಿಗೆ ಮಾಹಿತಿ: ಪ್ರವಾಸ ಆರಂಭಿಸುವ ಮೊದಲು ಸಂಬಂಧಪಟ್ಟ ಸ್ಥಳೀಯ ಪೊಲೀಸ್ ಠಾಣೆಗೆ ಮಾರ್ಗ ಹಾಗೂ ಪ್ರವಾಸದ ಸಂಪೂರ್ಣ ವಿವರ ನೀಡಬೇಕು.
ಅಪಾಯಕಾರಿ ಸ್ಥಳಗಳಿಗೆ ವಿಶೇಷ ಮುನ್ನೆಚ್ಚರಿಕೆ: ನದಿ, ಸಮುದ್ರ, ಜಲಪಾತ, ಅರಣ್ಯ ಹಾಗೂ ಬೆಟ್ಟ ಪ್ರದೇಶಗಳಿಗೆ ತೆರಳುವಾಗ ಅಗತ್ಯ ಸುರಕ್ಷತಾ ಕ್ರಮ ಕೈಗೊಳ್ಳಬೇಕು. ಟ್ರೆಕ್ಕಿಂಗ್ ಅಥವಾ ಈಜು ಚಟುವಟಿಕೆಗಳಿಗೆ ಪ್ರಮಾಣೀಕೃತ ತಜ್ಞರ ಉಪಸ್ಥಿತಿ ಮತ್ತು ಸ್ಥಳೀಯ ಅನುಮತಿ ಕಡ್ಡಾಯವಾಗಿದೆ.
ಈ ನಿಯಮಗಳು ಸರ್ಕಾರಿ ಕಾಲೇಜುಗಳ ಜೊತೆಗೆ ಖಾಸಗಿ ಹಾಗೂ ಅನುದಾನಿತ ಕಾಲೇಜುಗಳಿಗೂ ಅನ್ವಯಿಸಲಿವೆ. ನಿಯಮ ಉಲ್ಲಂಘಿಸುವ ಶಿಕ್ಷಣ ಸಂಸ್ಥೆಗಳ ವಿರುದ್ಧ ಶಿಸ್ತು ಕ್ರಮ ಕೈಗೊಳ್ಳಲಾಗುವುದು ಎಂದು ಸರ್ಕಾರ ಎಚ್ಚರಿಕೆ ನೀಡಿದೆ.






























































































































