
ಉಡುಪಿ: ಹಿರಿಯಡ್ಕದ ಪ್ರದೀಪ್ ಪೂಜಾರಿ ಆತ್ಮಹತ್ಯೆ ಪ್ರಕರಣದ ನಿರ್ವಹಣೆಯಲ್ಲಿ ಕರ್ತವ್ಯ ನಿರ್ಲಕ್ಷ್ಯ ತೋರಿದ ಪೊಲೀಸ್ ಅಧಿಕಾರಿಗಳು ಹಾಗೂ ಸಿಬ್ಬಂದಿ ವಿರುದ್ಧ ಜಿಲ್ಲಾ ಪೊಲೀಸ್ ಇಲಾಖೆ ಶಿಸ್ತು ಕ್ರಮ ಕೈಗೊಂಡಿದೆ.
ಪ್ರಕರಣದ ಕುರಿತು ಹೆಚ್ಚುವರಿ ಪೊಲೀಸ್ ವರಿಷ್ಠಾಧಿಕಾರಿಗಳು ನಡೆಸಿದ ವಿಚಾರಣೆಯ ವರದಿಯನ್ನು ಪಶ್ಚಿಮ ವಲಯದ ಡಿಐಜಿಗೆ ಸಲ್ಲಿಸಲಾಗಿದೆ. ಇದರ ಆಧಾರದಲ್ಲಿ ಹಿರಿಯಡ್ಕ ಠಾಣೆಯ ಪಿಎಸ್ಐ ಅವರನ್ನು ಡಿಐಜಿ ಕಚೇರಿಗೆ ಲಗತ್ತಿಸಿ, ಇಲಾಖಾ ವಿಚಾರಣೆ ಆರಂಭಿಸಲಾಗಿದೆ ಎಂದು ಎಸ್ಪಿ ಹರಿರಾಮ್ ಶಂಕರ್ ನ.6ರಂದು ತಿಳಿಸಿದ್ದಾರೆ.
ಇನ್ನು ಅಜ್ಜರಕಾಡು ಜಿಲ್ಲಾಸ್ಪತ್ರೆಯಲ್ಲಿ ಪ್ರದೀಪ್ ಪೂಜಾರಿ ಚಿಕಿತ್ಸೆ ಪಡೆಯುತ್ತಿದ್ದ ವೇಳೆ ಭದ್ರತಾ ಕರ್ತವ್ಯದಲ್ಲಿದ್ದ ಇಬ್ಬರು ಪೊಲೀಸ್ ಸಿಬ್ಬಂದಿಯನ್ನು ಅಮಾನತುಗೊಳಿಸಲಾಗಿದೆ. ಮಹಿಳಾ ಪೊಲೀಸ್ ಠಾಣೆಯ ಇನ್ಸ್ಪೆಕ್ಟರ್ ನೀಡಿದ ವರದಿಯಲ್ಲಿ ಕರ್ತವ್ಯ ಲೋಪ ಕಂಡುಬಂದ ಹಿನ್ನೆಲೆಯಲ್ಲಿ ಈ ಕ್ರಮ ಕೈಗೊಳ್ಳಲಾಗಿದೆ.
ಈ ಹಿಂದೆ ಪ್ರದೀಪ್ ಪೂಜಾರಿ ಮೇಲಿನ ಹಲ್ಲೆ ಪ್ರಕರಣದಲ್ಲಿ ಅವರು ದೂರು ನೀಡಿದ್ದರೂ ಎಫ್ಐಆರ್ ದಾಖಲಿಸುವ ಬದಲು ಎನ್ಸಿ ದಾಖಲಿಸಿಕೊಂಡಿದ್ದ ಹಿರಿಯಡ್ಕ ಠಾಣೆಯ ಪಿಎಸ್ಐ ವಿರುದ್ಧ ಇಲಾಖಾ ವಿಚಾರಣೆ ಆರಂಭಿಸಲಾಗಿತ್ತು. ಇದೀಗ ವಿಚಾರಣಾ ವರದಿಯ ಆಧಾರದಲ್ಲಿ ಮುಂದಿನ ಕ್ರಮ ಕೈಗೊಳ್ಳಲಾಗಿದೆ.
ಪೊಲೀಸ್ ಇಲಾಖೆಯ ಕರ್ತವ್ಯ ಲೋಪದ ವಿರುದ್ಧ ಸಾರ್ವಜನಿಕ ವಲಯದಲ್ಲಿ ತೀವ್ರ ಆಕ್ರೋಶ ವ್ಯಕ್ತವಾಗಿತ್ತು. ವಿವಿಧ ಸಂಘಟನೆಗಳು ಜಿಲ್ಲಾಧಿಕಾರಿ ಕಚೇರಿ ಎದುರು ಪ್ರತಿಭಟನೆ ನಡೆಸಿ, ತಪ್ಪಿತಸ್ಥ ಪೊಲೀಸ್ ಸಿಬ್ಬಂದಿ ವಿರುದ್ಧ ಕ್ರಮಕ್ಕೆ ಒತ್ತಾಯಿಸಿದ್ದವು. ಈ ಹಿನ್ನೆಲೆಯಲ್ಲಿ ಆಂತರಿಕ ವಿಚಾರಣೆ ನಡೆಸಿ ಸಂಬಂಧಪಟ್ಟವರ ವಿರುದ್ಧ ಕ್ರಮ ಕೈಗೊಳ್ಳಲಾಗಿದೆ ಎಂದು ಎಸ್ಪಿ ತಿಳಿಸಿದ್ದಾರೆ.

























