
ನವದೆಹಲಿ: ತ್ರಿಭಾಷಾ ಸೂತ್ರ ಜಾರಿಗೆ ಸಂಬಂಧಿಸಿದಂತೆ ಕೇಂದ್ರ ಮಾಧ್ಯಮಿಕ ಶಿಕ್ಷಣ ಮಂಡಳಿ (ಸಿಬಿಎಸ್‌ಇ) ಹೊಸ ಮಾರ್ಗಸೂಚಿ ಪ್ರಕಟಿಸಿದ್ದು, ಪ್ರಸಕ್ತ 10ನೇ ತರಗತಿಯಲ್ಲಿ ಓದುತ್ತಿರುವ ವಿದ್ಯಾರ್ಥಿಗಳಿಗೆ ತ್ರಿಭಾಷಾ ಕಲಿಕೆಯಿಂದ ವಿನಾಯಿತಿ ನೀಡಿದೆ.
2026–27 ಶೈಕ್ಷಣಿಕ ವರ್ಷದ 9ನೇ ತರಗತಿ ವಿದ್ಯಾರ್ಥಿಗಳಿಗೆ ಮಾತ್ರ ವಿಶೇಷ ಸಡಿಲಿಕೆ ಘೋಷಿಸಲಾಗಿದೆ. ಮೂರು ಭಾಷೆಗಳ ಅಧ್ಯಯನ ಕಡ್ಡಾಯವಾಗಿದ್ದರೂ, 2 ಭಾಷಾ ವಿಷಯಗಳ ಜೊತೆಗೆ ಒಂದು ಭಾರತೀಯ ಭಾಷೆಯನ್ನು ಆಯ್ಕೆ ಮಾಡಲು ಅವಕಾಶ ನೀಡಲಾಗಿದೆ.
ಈ ಹಿಂದೆ ಜುಲೈ 1ರಿಂದ 9ನೇ ತರಗತಿಯಲ್ಲಿ ಕನಿಷ್ಠ ಎರಡು ಭಾರತೀಯ ಭಾಷೆಗಳೊಂದಿಗೆ ಮೂರು ಭಾಷೆಗಳನ್ನು ಕಲಿಯುವುದು ಕಡ್ಡಾಯ ಎಂದು ಸಿಬಿಎಸ್‌ಇ ಸೂಚಿಸಿತ್ತು. ಆದರೆ ಈ ನಿರ್ಧಾರಕ್ಕೆ ವಿದ್ಯಾರ್ಥಿಗಳು ಮತ್ತು ಪೋಷಕರಿಂದ ವಿರೋಧ ವ್ಯಕ್ತವಾದ ಹಿನ್ನೆಲೆ ಹೊಸ ಮಾರ್ಗಸೂಚಿ ಜಾರಿಗೊಂಡಿದೆ.
ಇದೇ ವೇಳೆ, ಪ್ರಸ್ತುತ 7ರಿಂದ 9ನೇ ತರಗತಿಯ ವಿದ್ಯಾರ್ಥಿಗಳು ಮುಂದಿನ ದಿನಗಳಲ್ಲಿ 10ನೇ ತರಗತಿಗೆ ಬಂದಾಗ 3ನೇ ಭಾಷೆಗೆ ಬೋರ್ಡ್ ಪರೀಕ್ಷೆ ಬರೆಯುವ ಅಗತ್ಯ ಇರುವುದಿಲ್ಲ ಎಂದು ಸಿಬಿಎಸ್‌ಇ ಅಕಾಡೆಮಿಕ್ಸ್ ನಿರ್ದೇಶಕಿ ಪ್ರಜ್ಞಾ ಎಂ. ಸಿಂಗ್ ತಿಳಿಸಿದ್ದಾರೆ.


































