
ಮೈಸೂರು: ಕಳೆದ ವರ್ಷ ಮೈಸೂರು ದಸರಾ ಮಹೋತ್ಸವದ ವೇಳೆ 9 ವರ್ಷದ ಬಾಲಕಿಯನ್ನು ಅಪಹರಿಸಿ, ಅತ್ಯಾಚಾರ ಎಸಗಿ ಕೊಲೆ ಮಾಡಿದ ಪ್ರಕರಣದಲ್ಲಿ ಅಪರಾಧಿ ಕಾರ್ತಿಕ್ಗೆ ನ್ಯಾಯಾಲಯ ಮರಣದಂಡನೆ ವಿಧಿಸಿದೆ.
ಮೈಸೂರಿನ ತ್ವರಿತ ವಿಚಾರಣಾ ವಿಶೇಷ ನ್ಯಾಯಾಲಯದ ನ್ಯಾಯಾಧೀಶ ಅನಿಲ್ ಪಿ. ವಘಾಢೆ ಅವರು ಅಪರಾಧ ಸಾಬೀತಾದ ಹಿನ್ನೆಲೆಯಲ್ಲಿ ಈ ತೀರ್ಪು ಪ್ರಕಟಿಸಿದ್ದಾರೆ.
ದಸರಾ ಸಂದರ್ಭದಲ್ಲಿ ಬಲೂನ್ ಮಾರಾಟ ಮಾಡಲು ಕಲಬುರಗಿಯಿಂದ ಬಂದಿದ್ದ ಕುಟುಂಬವೊಂದು ದಸರಾ ವಸ್ತುಪ್ರದರ್ಶನದ ಸಮೀಪ ಟೆಂಟ್ನಲ್ಲಿ ವಾಸವಿತ್ತು. ಕುಟುಂಬದವರು ಮಲಗಿದ್ದ ವೇಳೆ ಬಾಲಕಿಯನ್ನು ಕರೆದೊಯ್ದ ಕಾರ್ತಿಕ್, ಅತ್ಯಾಚಾರ ಎಸಗಿ ಕೊಲೆ ಮಾಡಿದ್ದ.
ಈ ಸಂಬಂಧ ನಜರಬಾದ್ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿ ಪೊಲೀಸರು ತನಿಖೆ ನಡೆಸಿ, ಘಟನೆ ನಡೆದ 24 ಗಂಟೆಗಳೊಳಗೆ ಆರೋಪಿಯನ್ನು ಬಂಧಿಸಿದ್ದರು.
ಪ್ರಕರಣದ ವಿಚಾರಣೆ ಪೂರ್ಣಗೊಳಿಸಿದ ನ್ಯಾಯಾಲಯವು ಕಾರ್ತಿಕ್ ಅಪರಾಧಿ ಎಂದು ಸಾಬೀತುಪಡಿಸಿ, ಇದೀಗ ಮರಣದಂಡನೆ ಶಿಕ್ಷೆ ಪ್ರಕಟಿಸಿದೆ.






















