ಫುಡ್ ಪಾಯ್ಸನಿಂಗ್ ಶಂಕೆ

ನೋಯ್ಡಾ: ಉತ್ತರ ಪ್ರದೇಶದ ಗ್ರೇಟರ್ ನೋಯ್ಡಾದಲ್ಲಿ ದಂಪತಿ ಹಾಗೂ ಅವರ ಮೂವರು ಮಕ್ಕಳು ಸೇರಿದಂತೆ ಒಂದೇ ಕುಟುಂಬದ ಐವರು ಶನಿವಾರ (ಅ.17) ಬೆಳಗ್ಗೆ ಅನುಮಾನಾಸ್ಪದವಾಗಿ ಮೃತಪಟ್ಟ ಸ್ಥಿತಿಯಲ್ಲಿ ಪತ್ತೆಯಾಗಿದ್ದಾರೆ.
ಮೃತರ ಕುಟುಂಬವು ಶುಕ್ರವಾರ ರಾತ್ರಿ ಚಹಾ ಮತ್ತು ನೂಡಲ್ಸ್ ಸೇವಿಸಿತ್ತು ಎನ್ನಲಾಗಿದ್ದು, ಆಹಾರ ವಿಷಬಾಧೆಯಿಂದ ಸಾವು ಸಂಭವಿಸಿರಬಹುದು ಎಂಬ ಶಂಕೆ ವ್ಯಕ್ತವಾಗಿದೆ.
ಮೃತರನ್ನು ಮಹೇಶ್ (37), ಪತ್ನಿ ಲಲಿತಾ (35), ಪುತ್ರರಾದ ಲಡ್ಡು (11), ಸಾಕ್ಷತ್ (3) ಮತ್ತು ಪುತ್ರಿ ಮಿಷ್ಟಿ (7) ಎಂದು ಗುರುತಿಸಲಾಗಿದೆ.
ಘಟನೆಯ ಮಾಹಿತಿ ದೊರೆಯುತ್ತಿದ್ದಂತೆ ರಾಬುಪುರ ಪೊಲೀಸರು, ಹಿರಿಯ ಅಧಿಕಾರಿಗಳು, ಆಂಬ್ಯುಲೆನ್ಸ್ ಹಾಗೂ ಆಹಾರ ಸುರಕ್ಷತಾ ಇಲಾಖೆಯ ತಂಡ ಸ್ಥಳಕ್ಕೆ ಧಾವಿಸಿದೆ.
ವಿಧಿವಿಜ್ಞಾನ ತಜ್ಞರು ಸ್ಥಳ ಪರಿಶೀಲನೆ ನಡೆಸಿ ಸಾಕ್ಷ್ಯಗಳನ್ನು ಸಂಗ್ರಹಿಸಿದ್ದು, ಮೃತದೇಹಗಳನ್ನು ಮರಣೋತ್ತರ ಪರೀಕ್ಷೆಗೆ ರವಾನಿಸಲಾಗಿದೆ.
ನಾಗ್ಲಾ ಶ್ರೀ ಪಾದಮ್ ಗ್ರಾಮದಲ್ಲಿ ಈ ಘಟನೆ ನಡೆದಿದ್ದು, ಕುಟುಂಬದವರು ಹಿಂದಿನ ರಾತ್ರಿ ನೂಡಲ್ಸ್ ಸೇವಿಸಿದ್ದರು ಎಂದು ಸ್ಥಳೀಯರು ಹಾಗೂ ಮಹೇಶ್ ಅವರ ತಾಯಿ ತಿಳಿಸಿದ್ದಾರೆ. ಸಾವುಗಳಿಗೆ ನಿಖರ ಕಾರಣ ಮರಣೋತ್ತರ ಪರೀಕ್ಷೆಯ ಬಳಿಕ ತಿಳಿದುಬರಬೇಕಿದೆ.






















