ಪೊಲೀಸರ ಫ್ಯಾಕ್ಟ್ ಚೆಕ್ ಸ್ಪಷ್ಟನೆ

ಬೆಂಗಳೂರು: ಬೆಂಗಳೂರಿನಲ್ಲಿ ನಡೆದ ನೀಟ್ ಮರುಪರೀಕ್ಷೆಗೆ ಮೂವರು ವಿದ್ಯಾರ್ಥಿನಿಯರು ತಡವಾಗಿ ಆಗಮಿಸಿ ಪರೀಕ್ಷೆಯಿಂದ ವಂಚಿತರಾದ ಘಟನೆ ರಾಜಕೀಯ ಚರ್ಚೆಗೆ ಕಾರಣವಾಗಿದ್ದ ಬೆನ್ನಲ್ಲೇ, ಈ ಕುರಿತು ಬೆಂಗಳೂರು ಪೊಲೀಸರು ಪರಿಶೀಲನೆ ನಡೆಸಿ ಸ್ಪಷ್ಟನೆ ನೀಡಿದ್ದಾರೆ.
ಪರೀಕ್ಷಾ ಕೇಂದ್ರಕ್ಕೆ ತಡವಾಗಿ ಬಂದ ಮೂರನೇ ಅಭ್ಯರ್ಥಿಯ ಕುರಿತು ಸಿಸಿಟಿವಿ ದೃಶ್ಯಗಳು, ಕುಟುಂಬದ ಮಾಹಿತಿ ಹಾಗೂ ಪ್ರಯಾಣ ಮಾರ್ಗವನ್ನು ಪರಿಶೀಲಿಸಿದ ಪೊಲೀಸರು, ವಿದ್ಯಾರ್ಥಿನಿ ಮಧ್ಯಾಹ್ನ 12.57ಕ್ಕೆ ಆರ್.ಟಿ ನಗರದಲ್ಲಿರುವ ಮನೆಯಿಂದ ಹೊರಟು 1.33ಕ್ಕೆ ಕೇಂದ್ರ ತಲುಪಿದ್ದಳು ಎಂದು ತಿಳಿಸಿದ್ದಾರೆ. ಪರೀಕ್ಷಾ ಕೇಂದ್ರ ಪ್ರವೇಶಕ್ಕೆ 1.30ರವರೆಗೆ ಮಾತ್ರ ಅವಕಾಶ ಇತ್ತು.
ಪರಿಶೀಲನೆಯಲ್ಲಿ ಸಮೀಪದ ಮಾರ್ಗವಿದ್ದರೂ ದೂರದ ಮಾರ್ಗ ಆಯ್ಕೆ ಮಾಡಿಕೊಂಡಿರುವುದು ಕಂಡುಬಂದಿದ್ದು, ಅಂದು ಸಂಚಾರ ದಟ್ಟಣೆಯೂ ಸಾಮಾನ್ಯವಾಗಿತ್ತು ಎಂದು ಪೊಲೀಸರು ಹೇಳಿದ್ದಾರೆ. ಅಭ್ಯರ್ಥಿಗಳ ಅನುಕೂಲಕ್ಕಾಗಿ ಟ್ರಾಫಿಕ್ ಪೊಲೀಸರನ್ನೂ ನಿಯೋಜಿಸಲಾಗಿತ್ತು ಎಂದು ಮಾಹಿತಿ ನೀಡಿದ್ದಾರೆ.
ಈ ಕುರಿತು ಪ್ರತಿಕ್ರಿಯಿಸಿದ ಗೃಹ ಸಚಿವ ಪ್ರಿಯಾಂಕ್ ಖರ್ಗೆ, ಪರೀಕ್ಷೆ ತಪ್ಪಲು ಸಾರ್ವಜನಿಕ ಕಾರ್ಯಕ್ರಮ ಕಾರಣವಲ್ಲ ಎಂಬ ವರದಿ ಆಧರಿಸಿ ಮಾತನಾಡುತ್ತಿದ್ದೇನೆ ಎಂದು ಹೇಳಿದರು. ಯಾವುದೇ ವಿದ್ಯಾರ್ಥಿ ಪರೀಕ್ಷೆ ತಪ್ಪಬಾರದು ಎಂಬುದು ಸರ್ಕಾರದ ಆಶಯವಾಗಿದ್ದು, ಸಿಸಿಟಿವಿ ಹಾಗೂ ಕುಟುಂಬದ ಮಾಹಿತಿಯ ಆಧಾರದ ಮೇಲೆ ಪರಿಶೀಲನೆ ನಡೆದಿದೆ ಎಂದು ತಿಳಿಸಿದರು.


































