
ಮೈಸೂರು/ಕೊಪ್ಪಳ: ಮೈಸೂರು ದಸರಾ ಮಹೋತ್ಸವ-2026ರ ಉದ್ಘಾಟನಾ ಆಹ್ವಾನವನ್ನು ಕೊಪ್ಪಳದ ಗವಿಮಠದ ಶ್ರೀ ಅಭಿನವ ಗವಿಸಿದ್ಧೇಶ್ವರ ಸ್ವಾಮೀಜಿ ತಿರಸ್ಕರಿಸಿದ್ದಾರೆ ಎಂಬ ವದಂತಿಯನ್ನು ಗವಿಮಠದ ಮೂಲಗಳು ತಳ್ಳಿಹಾಕಿವೆ. ಸ್ವಾಮೀಜಿ ಆಹ್ವಾನವನ್ನು ಸಂತೋಷದಿಂದ ಸ್ವೀಕರಿಸಿದ್ದಾರೆ ಎಂದು ಮಠ ಸ್ಪಷ್ಟಪಡಿಸಿದೆ.
ಕಳೆದ ಒಂದು ವಾರದಿಂದ ಮೌನ ವ್ರತದಲ್ಲಿದ್ದ ಸ್ವಾಮೀಜಿ ಶನಿವಾರ ಮೌನ ವ್ರತ ಅಂತ್ಯಗೊಳಿಸಿದ್ದಾರೆ. ಈ ವೇಳೆ ವಿರೋಧಿಗಳು ಗೊಂದಲ ಸೃಷ್ಟಿಸುವ ಉದ್ದೇಶದಿಂದ ವದಂತಿ ಹರಡುತ್ತಿದ್ದಾರೆ ಎಂದು ಮಠ ತಿಳಿಸಿದೆ.
ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಅವರು ದಸರಾ ಉದ್ಘಾಟನೆಗೆ ಸ್ವಾಮೀಜಿಯನ್ನು ಆಹ್ವಾನಿಸಿದ್ದು, ಅವರು ಆಹ್ವಾನ ಸ್ವೀಕರಿಸಿದ್ದಾರೆ. ಗವಿಶ್ರೀ ಅವರು ದಸರಾ ಉದ್ಘಾಟಿಸುವುದು ಹೆಮ್ಮೆಯ ವಿಷಯ ಎಂದು ಮಠ ಹೇಳಿದೆ.
ಆಹ್ವಾನ ತಿರಸ್ಕರಿಸಿರುವ ಬಗ್ಗೆ ಗವಿಮಠ ಅಥವಾ ಗವಿಶ್ರೀಯವರಿಂದ ಯಾವುದೇ ಅಧಿಕೃತ ಹೇಳಿಕೆ ಬಂದಿಲ್ಲ. ಹೀಗಾಗಿ ಜನರು ಅನಗತ್ಯ ವದಂತಿಗಳಿಗೆ ಕಿವಿಗೊಡಬಾರದು ಎಂದು ಮಠ ಮನವಿ ಮಾಡಿದೆ.
ಇದೇ ವೇಳೆ, ಜಿಲ್ಲಾ ಉಳಿಸಿ ಆಂದೋಲನ ಸಮಿತಿ ಹಾಗೂ ಪರಿಸರ ಹಿತರಕ್ಷಣಾ ವೇದಿಕೆಯ ಜಂಟಿ ಕ್ರಿಯಾ ಸಮಿತಿ ಮುಖ್ಯಮಂತ್ರಿ ಅವರಿಗೆ ಪತ್ರ ಬರೆದಿದೆ. ಬಾಲ್ಡೋಟಾ ಸೇರಿದಂತೆ ವಿವಿಧ ಕೈಗಾರಿಕೆಗಳ ವಿಸ್ತರಣೆ ಹಾಗೂ ಹೊಸ ಕಾರ್ಖಾನೆಗಳಿಗೆ ಅನುಮತಿ ನೀಡದಂತೆ ಒತ್ತಾಯಿಸಿದೆ.































































































































