
ಹೊಸದಿಲ್ಲಿ: ಲಕ್ನೋದಲ್ಲಿ ಶನಿವಾರ ನಡೆದ ಕೌಶಲ್ ದೀಕ್ಷಾಂತ್ ಸಮಾರೋಪ ಸಮಾರಂಭದಲ್ಲಿ ಮಾತನಾಡಿದ ಪ್ರಧಾನಿ ನರೇಂದ್ರ ಮೋದಿ ಚಿನ್ನ ಖರೀದಿ ಕಡಿಮೆ ಮಾಡುವಂತೆ ತಾನು ಮಾಡಿದ ಮನವಿಗೆ ದೇಶದ ಜನರು ಸ್ಪಂದಿಸಿದ್ದರಿಂದ ಚಿನ್ನದ ಬೆಲೆಯಲ್ಲಿ ಇಳಿಕೆಯಾಗಿದೆ ಎಂದು ಹೇಳಿದ್ದಾರೆ.
ಮಾಜಿ ಪ್ರಧಾನಿ ಲಾಲ್ ಬಹಾದ್ದೂರ್ ಶಾಸ್ತ್ರಿ ಅವರು ಆಹಾರದ ಕೊರತೆಯ ಸಂದರ್ಭದಲ್ಲಿ ಒಂದು ಹೊತ್ತಿನ ಊಟ ತ್ಯಜಿಸುವಂತೆ ಜನರಿಗೆ ಕರೆ ನೀಡಿದ್ದನ್ನು ಸ್ಮರಿಸಿದರು. ಅಂದು ಜನರು ಶಾಸ್ತ್ರಿ ಅವರ ಮನವಿಗೆ ಸ್ಪಂದಿಸಿದಂತೆಯೇ ಇಂದಿಗೂ ದೇಶದ ಜನರಲ್ಲಿ ಅದೇ ಬದ್ಧತೆ ಇದೆ ಎಂದು ಮೆಚ್ಚುಗೆ ವ್ಯಕ್ತಪಡಿಸಿದರು.
“ಅಗತ್ಯವಿಲ್ಲದಿದ್ದರೆ ಒಂದು ವರ್ಷದವರೆಗೆ ಚಿನ್ನ ಖರೀದಿಸಬೇಡಿ ಎಂದು ದೇಶದ ಜನರಲ್ಲಿ ಮನವಿ ಮಾಡಿದ್ದೆ. ನನ್ನ ಮನವಿಗೆ ಜನರು ಸಕಾರಾತ್ಮಕವಾಗಿ ಸ್ಪಂದಿಸಿ ಚಿನ್ನದ ಖರೀದಿಯನ್ನು ಕಡಿಮೆ ಮಾಡಿದರು. ಇದರಿಂದ ಚಿನ್ನದ ಬೆಲೆಯಲ್ಲಿ ಇಳಿಕೆಯಾಗಿದೆ” ಎಂದು ಮೋದಿ ತಿಳಿಸಿದರು.
ಅಲ್ಲದೆ, “ನಿಮ್ಮ ಮಾತಿನಂತೆ ನಡೆದುಕೊಂಡಿದ್ದರಿಂದ ಇಂದು ನಮ್ಮ ಹಣ ಉಳಿತಾಯವಾಗಿದೆ ಎಂದು ಹಲವರು ನನ್ನ ಬಳಿ ಹೇಳುತ್ತಿದ್ದಾರೆ” ಎಂದು ಪ್ರಧಾನಿ ತಮ್ಮ ಭಾಷಣದಲ್ಲಿ ಹೇಳಿದರು.

























































































