
ಮಣಿಪಾಲ: ಕಂಬಳ ಕ್ಷೇತ್ರದಲ್ಲಿ ಹಲವು ಸಾಧನೆಗಳ ಮೂಲಕ ಲೆಜೆಂಡ್ ಆಗಿ ಗುರುತಿಸಿಕೊಂಡಿದ್ದ ನಂದಳಿಕೆ ಪಾಂಡು (23 ವಿ) ಕೋಣವು ಸೋಮವಾರ (ಸೆ.28) ಮುಂಜಾನೆ ವಯೋಸಹಜ ಅನಾರೋಗ್ಯದಿಂದ ನಿಧನವಾಗಿದೆ.
ಅಪಾರ ಅಭಿಮಾನಿಗಳನ್ನು ಹೊಂದಿದ್ದ ಪಾಂಡು ತನ್ನ ವೇಗದ ಓಟ ಹಾಗೂ ವಿಶಿಷ್ಟ ಸ್ವಭಾವದಿಂದ ಕಂಬಳ ಪ್ರೇಮಿಗಳ ಮನ ಗೆದ್ದಿತ್ತು. ವಿಶೇಷವಾಗಿ ಹಗ್ಗ ವಿಭಾಗದಲ್ಲಿ ಹಲವು ಪದಕಗಳನ್ನು ಗೆದ್ದು ತನ್ನದೇ ಛಾಪು ಮೂಡಿಸಿತ್ತು.
ಕಾರ್ಕಳದ ಜೀವನದಾಸ್ ಅಡ್ಯಂತಾಯರ ಅವರ ಮನೆಯಲ್ಲಿದ್ದ ಪಾಂಡು ಅಲ್ಲಿಂದಲೇ ಕಂಬಳದ ಓಟ ಆರಂಭಿಸಿತ್ತು. ಬಳಿಕ ಅತ್ತೂರು ಮನ್ಮಥ ಶೆಟ್ಟಿ ಅವರು ಪಾಂಡುವನ್ನು ಕರೆತಂದು ಜೂನಿಯರ್ ಹಗ್ಗ ವಿಭಾಗದಲ್ಲಿ ಸ್ಪರ್ಧಿಸಿದ್ದರು. ಸತತ ಎರಡು ವರ್ಷ ಸರಣಿ ಶ್ರೇಷ್ಠ ಪ್ರಶಸ್ತಿ ಗೆದ್ದು ಗಮನ ಸೆಳೆದಿತ್ತು.
ಸುಮಾರು 2009ರಲ್ಲಿ ಪಾಂಡು ಸೀನಿಯರ್ ವಿಭಾಗಕ್ಕೆ ಕಾಲಿಟ್ಟಿತು. ಬಳಿಕ ಕರಿಂಜೆ ವಿನು ವಿಶ್ವನಾಥ ಶೆಟ್ಟಿ ಅವರೊಂದಿಗೆ ಕಂಬಳದಲ್ಲಿ ಮುಂದುವರಿದ ಪಾಂಡು, ಅಲ್ಲಿಯೂ ಹಲವು ಸಾಧನೆಗಳನ್ನು ಮಾಡಿತು. ನಂತರ ನಂದಳಿಕೆ ಶ್ರೀಕಾಂತ್ ಭಟ್ ಅವರ ಹಟ್ಟಿಗೆ ಬಂದಾಗ ಅದು ಈಗಾಗಲೇ ಕಂಬಳದ ಲೆಜೆಂಡ್ ಆಗಿತ್ತು.
ಕಂಬಳದ ದಿಗ್ಗಜ ಕೋಣಗಳಾದ ಚೆನ್ನ, ಮೋಡೆ ಕೋಣಗಳೊಂದಿಗೆ ಜೊತೆಯಾಗಿ ಓಡಿ ಹೆಸರು ಮಾಡಿತ್ತು. ಖ್ಯಾತ ಮಾಜಿ ಓಟಗಾರ ನಕ್ರೆ ಜಯಕರ ಮಡಿವಾಳ ಅವರು ಪಾಂಡುವಿನೊಂದಿಗೆ ಹಲವು ಪದಕಗಳನ್ನು ಗೆದ್ದಿದ್ದರು. ಓಟದ ಕರೆಯಲ್ಲಿ ಜಯಕರ ಮಡಿವಾಳರ ಕೂಗಿಗೆ ಪಾಂಡು ನೀಡುತ್ತಿದ್ದ ವೇಗದ ಪ್ರತಿಕ್ರಿಯೆ ಇಂದಿಗೂ ಅಭಿಮಾನಿಗಳ ನೆನಪಿನಲ್ಲಿ ಉಳಿದಿದೆ.
ಹುಟ್ಟಿನಿಂದಲೇ ಪಾಂಡುವಿನ ಮುಂದಿನ ಬಲಗಾಲಿನ ಪಾದ ಸುಮಾರು 70 ಡಿಗ್ರಿಯಷ್ಟು ತಿರುಗಿತ್ತು. ಕಾಲಿನ ಎಲ್ಬೋ ಡಿಸ್ಲೊಕೇಶನ್ ಸಮಸ್ಯೆಯೂ ಇತ್ತು. ಇಂತಹ ದೈಹಿಕ ನ್ಯೂನತೆಗಳ ನಡುವೆಯೂ ಅದರ ಓಟದ ವೇಗ ಮಾತ್ರ ಎಂದಿಗೂ ಕುಗ್ಗಿರಲಿಲ್ಲ.
ಪಾಂಡುವಿನ ಓಟವನ್ನು ಕಂಡವರು ಅದನ್ನು ಚೇಸ್ ಮಾಡುವುದು ಕಷ್ಟ ಎನ್ನುತ್ತಿದ್ದರು. ಫೋರ್ಸ್ನಲ್ಲಿ ಮಂಜೊಟ್ಟಿಗೆ ಹಾರುವ ರೀತಿ ಓಡುತ್ತಿದ್ದ ಅದರ ಶೈಲಿ ಕಂಬಳ ಅಭಿಮಾನಿಗಳಿಗೆ ವಿಶೇಷವಾಗಿತ್ತು.
ಸುಮಾರು ಮೂರು ವರ್ಷಗಳ ಹಿಂದೆ ಹೊಕ್ಕಾಡಿಗೋಳಿ ಕಂಬಳದಲ್ಲಿ ಕೊನೆಯ ಬಾರಿ ಪದಕ ಗೆದ್ದಿದ್ದ ಪಾಂಡು, ಬಳಿಕ ಶ್ರೀಕಾಂತ್ ಭಟ್ ಅವರ ಹಟ್ಟಿಯಲ್ಲಿ ನಿವೃತ್ತ ಜೀವನ ನಡೆಸುತ್ತಿತ್ತು. ಇದೀಗ ವಯೋಸಹಜ ಅನಾರೋಗ್ಯದಿಂದ ಕೊನೆಯುಸಿರೆಳೆದಿದ್ದು, ಕಂಬಳ ಲೋಕದಲ್ಲಿ ತನ್ನದೇ ಆದ ನೆನಪು ಬಿಟ್ಟು ಹೋಗಿದೆ.































































































































