
ನವದೆಹಲಿ: ಲೋಕಸಭೆಯ ವಿಪಕ್ಷ ನಾಯಕ ರಾಹುಲ್ ಗಾಂಧಿ ಭಾನುವಾರ ಸಾಮಾಜಿಕ ಜಾಲತಾಣ ‘ಎಕ್ಸ್’ನಲ್ಲಿ ಮಾಡಿರುವ ನಿಗೂಢ ಪೋಸ್ಟ್‌ವೊಂದು ಕುತೂಹಲ ಮೂಡಿಸಿದೆ.
“ಸಮುದ್ರದ ಅಲೆಗಳು ಪ್ರಕ್ಷುಬ್ಧವಾಗಿದ್ದಾಗ ಈಜಲು ನನಗೆ ಇಷ್ಟ. ಏಕೆಂದರೆ, ಪ್ರಕ್ಷುಬ್ಧತೆಯೂ ಶಾಂತಿಯ ಮತ್ತೊಂದು ರೂಪ ಎಂಬುದನ್ನು ಅದು ಕಲಿಸುತ್ತದೆ” ಎಂದು ಅವರು ಪೋಸ್ಟ್ ಮಾಡಿದ್ದಾರೆ. ಆದರೆ, ಈ ಹೇಳಿಕೆಯ ಹಿನ್ನೆಲೆ ಅಥವಾ ಉದ್ದೇಶದ ಬಗ್ಗೆ ಯಾವುದೇ ವಿವರಣೆ ನೀಡಿಲ್ಲ.
ಸೆಪ್ಟೆಂಬರ್ 23ರಂದು ‘ದಿ ಇಂಡಿಯನ್ ಎಕ್ಸ್‌ಪ್ರೆಸ್’ ಪ್ರಕಟಿಸಿದ ವರದಿಯ ಬಳಿಕ ರಾಜಕೀಯ ವಲಯದಲ್ಲಿ ಚರ್ಚೆ ನಡೆಯುತ್ತಿರುವ ಸಂದರ್ಭದಲ್ಲೇ ರಾಹುಲ್ ಗಾಂಧಿಯವರ ಈ ಪೋಸ್ಟ್ ಬಂದಿದೆ. ಮತದಾರರ ಪಟ್ಟಿಯ ವಿಶೇಷ ತೀವ್ರ ಪರಿಷ್ಕರಣೆ (SIR) ವಿಚಾರದಲ್ಲಿ ಚುನಾವಣಾ ಆಯುಕ್ತರಾದ ಸುಖ್ಬೀರ್ ಸಿಂಗ್ ಸಂಧು ಮತ್ತು ವಿವೇಕ್ ಜೋಶಿ ಅವರು ಪ್ರಶ್ನೆಗಳನ್ನು ಎತ್ತಿದ್ದರು ಎಂದು ವರದಿ ತಿಳಿಸಿತ್ತು.
ವರದಿ ಪ್ರಕಾರ, ಕಳೆದ 10 ತಿಂಗಳಲ್ಲಿ ತಮ್ಮ ಗಮನಕ್ಕೆ ಬಾರದಂತೆ ಅಥವಾ ಶಿಫಾರಸುಗಳನ್ನು ಪರಿಗಣಿಸದೆ ಕೈಗೊಂಡ ನಿರ್ಧಾರಗಳು ಹಾಗೂ ಹೊರಡಿಸಿದ ಆದೇಶಗಳ ಕುರಿತು ಇಬ್ಬರು ಚುನಾವಣಾ ಆಯುಕ್ತರು ಕನಿಷ್ಠ 14 ಬಾರಿ ಅಧಿಕೃತವಾಗಿ ಆಕ್ಷೇಪ ವ್ಯಕ್ತಪಡಿಸಿದ್ದರು.
ಕಳೆದ ವರ್ಷ ರಾಹುಲ್ ಗಾಂಧಿ ಅವರು ಚುನಾವಣೆಯಲ್ಲಿ ಅಕ್ರಮ ನಡೆದಿದೆ ಎಂದು ಆರೋಪಿಸಿ ‘ಮತ ಕಳ್ಳತನ’ದ ವಿಚಾರವನ್ನು ಪ್ರಸ್ತಾಪಿಸಿದ್ದರು. ಇದೀಗ ಪ್ರಕಟವಾಗಿರುವ ವರದಿಯು ತಮ್ಮ ಹಿಂದಿನ ಆರೋಪಗಳಿಗೆ ಪುಷ್ಟಿ ನೀಡಿದೆ ಎಂದು ಅವರು ಹೇಳಿಕೊಂಡಿದ್ದಾರೆ.































































































































