
ನವದೆಹಲಿ: ನೌಕರರ ಭವಿಷ್ಯ ನಿಧಿ ಸಂಸ್ಥೆ (EPFO) ತನ್ನ ಹೊಸ ಡಿಜಿಟಲ್ ವೇದಿಕೆ EPFO 3.0 ಅಡಿಯಲ್ಲಿ ಸದಸ್ಯರಿಗೆ ಹೊಸ ಸೇವೆಯನ್ನು ಪರಿಚಯಿಸಲು ಮುಂದಾಗಿದೆ. ಇದರ ಮೂಲಕ ಪಿಎಫ್ ಹಣವನ್ನು ಯುಪಿಐ ಹಾಗೂ ಇಪಿಎಫ್ ಲಿಂಕ್ ಮಾಡಲಾದ ಎಟಿಎಂ ಮೂಲಕ ಪಡೆಯುವ ಅವಕಾಶ ಕಲ್ಪಿಸಲಾಗುತ್ತಿದೆ.
ಮೂಲಗಳ ಮಾಹಿತಿ ಪ್ರಕಾರ, ಈ ಸೌಲಭ್ಯ ಜೂನ್ ಅಂತ್ಯದೊಳಗೆ ಜಾರಿಗೆ ಬರಲಿದ್ದು, ಕೇಂದ್ರ ಕಾರ್ಮಿಕ ಸಚಿವ ಮನ್ಸುಖ್ ಮಾಂಡವಿಯಾ ಅಧಿಕೃತ ಘೋಷಣೆ ಮಾಡುವ ಸಾಧ್ಯತೆ ಇದೆ. ಎನ್ಪಿಸಿಐ ಸಹಯೋಗದಲ್ಲಿ ಈ ತಂತ್ರಜ್ಞಾನ ಅಭಿವೃದ್ಧಿಯಾಗಿದ್ದು, ಪರೀಕ್ಷೆಯೂ ಯಶಸ್ವಿಯಾಗಿದೆ.
ಹೊಸ ವ್ಯವಸ್ಥೆಯಲ್ಲಿ ಸದಸ್ಯರು ತಮ್ಮ ಇಪಿಎಫ್ ಮೊತ್ತದ ಶೇ.75ರವರೆಗೆ ಹಣವನ್ನು ತ್ವರಿತವಾಗಿ ಬ್ಯಾಂಕ್ ಖಾತೆಗೆ ವರ್ಗಾಯಿಸಿಕೊಳ್ಳಬಹುದು. ಇದರಿಂದ ಕಾಗದದ ಪ್ರಕ್ರಿಯೆ ಕಡಿಮೆಯಾಗುವ ಜೊತೆಗೆ ಹಣ ಪಡೆಯುವ ವಿಳಂಬವೂ ತಗ್ಗಲಿದೆ.
ಇದರೊಂದಿಗೆ ಪಿಎಫ್ ಕ್ಲೈಮ್ಗಳ ಆಟೋ ಸೆಟಲ್ಮೆಂಟ್ ಮಿತಿಯನ್ನು 1 ಲಕ್ಷದಿಂದ 5 ಲಕ್ಷ ರೂ.ಗೆ ಹೆಚ್ಚಿಸಲಾಗುತ್ತಿದೆ. ಅಲ್ಲದೆ, ಉಮಂಗ್ (UMANG) ಆ್ಯಪ್ ಮೂಲಕ ಫೇಸ್ ಅಥೆಂಟಿಕೇಶನ್ ಬಳಸಿ ಗುರುತು ಪರಿಶೀಲನೆ ಪ್ರಕ್ರಿಯೆ ಸುಲಭವಾಗಲಿದೆ.





















































































