
ಬೆಂಗಳೂರು: ಕ್ಯಾಪ್ಟನ್ ಅಭಿಮನ್ಯು ದಸರಾ ಮಾತ್ರವಲ್ಲದೆ ಅರಣ್ಯ ಇಲಾಖೆಯ ಸೇವೆಯಲ್ಲೂ ಯಾವುದೇ ಕಳಂಕವಿಲ್ಲದೆ ಕಾರ್ಯನಿರ್ವಹಿಸಿದ್ದಾನೆ. ಅಂಬಾರಿ ಹೊರುವ ಜವಾಬ್ದಾರಿಯಿಂದ ನಿವೃತ್ತಿಗೊಳಿಸಿದರೂ ಆತನನ್ನು ದಸರಾ ಆನೆಗಳ ತಂಡದಲ್ಲಿ ಮುಂದುವರಿಸಬೇಕು ಎಂಬ ಒತ್ತಾಯ ಕೇಳಿಬರುತ್ತಿದೆ.
ಈ ನಡುವೆ ಆನೆ ತಜ್ಞ ಡಾ. ನಾಗರಾಜು ಕೂಡ ಅಭಿಮನ್ಯುವಿಗೆ ಮೈಸೂರು ದಸರಾ ಜಂಬೂ ಸವಾರಿ ತಂಡದಲ್ಲಿ ಸ್ಥಾನ ನೀಡುವುದು ಸೂಕ್ತ ಎಂದು ಅಭಿಪ್ರಾಯಪಟ್ಟಿದ್ದಾರೆ.
ಮೂರು ದಶಕಗಳಿಂದ ಮೈಸೂರು ದಸರಾ ಭಾಗವಾಗಿರುವ ಅಭಿಮನ್ಯು, ಅಂಬಾರಿ ಹೊತ್ತು ಹಾಗೂ ಆನೆ-ಹುಲಿ ಸೆರೆ ಕಾರ್ಯಾಚರಣೆಯಲ್ಲಿ ಯಶಸ್ವಿಯಾಗಿ ಸೇವೆ ಸಲ್ಲಿಸಿದ್ದಾನೆ. ಈ ಬಾರಿ ಆತನನ್ನು ದಸರಾ ತಂಡದಿಂದ ಕೈಬಿಡಲಾಗಿದೆ. ಸಚಿವ ಈಶ್ವರ ಖಂಡ್ರೆ ಅವರ ಪತ್ರದ ಬಳಿಕ ಅರಣ್ಯ ಇಲಾಖೆ ಅಭಿಮನ್ಯುವಿಗೆ ಗಜಪಯಣದ ಉದ್ಘಾಟನಾ ಸಮಾರಂಭದಲ್ಲಿ ಆತ್ಮೀಯ ಬೀಳ್ಕೊಡುಗೆ ನೀಡಿದೆ.
ಅಂಬಾರಿ ಹೊರುವ ಜವಾಬ್ದಾರಿ ನೀಡದಿದ್ದರೂ ಜಂಬೂ ಸವಾರಿ ವೇಳೆ ನಿಶಾನೆ ಆನೆಯಾಗಿ ಅಭಿಮನ್ಯುವನ್ನು ಬಳಸಿಕೊಳ್ಳಬೇಕು ಎಂಬ ಬೇಡಿಕೆಯೂ ವ್ಯಕ್ತವಾಗಿದೆ.
“2000ರಿಂದ ದಸರಾ ಆನೆಗಳ ಉಸ್ತುವಾರಿ ನೋಡಿಕೊಂಡಿದ್ದೇನೆ. ಸುಮಾರು ಮೂರು ದಶಕಗಳಿಂದ ಅಭಿಮನ್ಯು ದಸರಾ ತಂಡದ ಭಾಗವಾಗಿದ್ದಾನೆ. ಸಂಗೀತ ಗಾಡಿ ಎಳೆದಿರುವುದಲ್ಲದೆ ಅಂಬಾರಿ ಹೊತ್ತಿದ್ದಾನೆ. ಆನೆ-ಹುಲಿ ಸೆರೆ ಕಾರ್ಯಾಚರಣೆಯಲ್ಲೂ ಆತನ ಸೇವೆ ಮಹತ್ವದ್ದಾಗಿದೆ. ವಯಸ್ಸಿನ ಕಾರಣ ಅಂಬಾರಿ ಜವಾಬ್ದಾರಿಯಿಂದ ದೂರವಿಟ್ಟಿರುವುದು ಒಪ್ಪಬಹುದು. ಆದರೆ ಇನ್ನೂ ನಾಲ್ಕೈದು ವರ್ಷ ದಸರಾ ಗಜಪಡೆ ತಂಡದಲ್ಲಿ ಆತನನ್ನು ಉಳಿಸಿಕೊಳ್ಳಬಹುದಿತ್ತು. ಈಗಲೂ ಆತನನ್ನು ತಂಡಕ್ಕೆ ಕರೆತರುವ ಅವಕಾಶವಿದೆ” ಎಂದು ಡಾ. ನಾಗರಾಜು ಹೇಳಿದ್ದಾರೆ.





















































































