
ಸೂಪರ್ ಹಿಟ್ ಚಿತ್ರಗಳನ್ನು ನೀಡಿರೋ ಅದ್ಭುತ ನಟ ವಿಕ್ರಾಂತ್ ಮಾಸ್ಸಿ ಅವರು ಯಶಸ್ಸು ಕಾಣುತ್ತಿರುವ ಬೆನ್ನಲ್ಲೇ ಏಕಾಏಕಿ ನಿವೃತ್ತಿ ಘೋಷಣೆ ಮಾಡಿದ್ದಾರೆ.
37ನೇ ವಯಸ್ಸಿಗೆ ಅವರು ನಿವೃತ್ತಿ ಘೋಷಣೆ ಮಾಡಿದ್ದು ಏಕೆ ಎಂಬ ಪ್ರಶ್ನೆ ಅನೇಕರಿಗೆ ಮೂಡಿದ್ದು ಅವರ ಈ ನಿರ್ಧಾರಕ್ಕೆ ಅನೇಕರು ಬೇಸರ ವ್ಯಕ್ತಪಡಿಸಿದ್ದಾರೆ.
ಈ ಕುರಿತು ವಿಕ್ರಾಂತ್ ಅವರು ಸೋಶಿಯಲ್ ಮೀಡಿಯಾದಲ್ಲಿ ಪೋಸ್ಟ್ ಮಾಡಿದ್ದು ‘ಕಳೆದ ಕೆಲ ವರ್ಷಗಳು ಉತ್ತಮವಾಗಿತ್ತು. ನಿಮ್ಮ ನಿರಂತರ ಬೆಂಬಲಕ್ಕಾಗಿ ನಾನು ಪ್ರತಿಯೊಬ್ಬರಿಗೂ ಧನ್ಯವಾದ ಹೇಳುತ್ತೇನೆ. ಆದರೆ ನಾನು ಮುಂದೆ ಬಂದಂತೆಲ್ಲ ಮಗನಾಗಿ, ಗಂಡನಾಗಿ, ತಂದೆಯಾಗಿ ಮನೆಗೆ ಹಿಂತಿರುಗಲು ಇದು ಸರಿಯಾದ ಸಮಯ ಎಂದು ನಾನು ಅರಿತುಕೊಂಡೆ’ ಎಂದು ಅವರು ಬರೆದುಕೊಂಡಿದ್ದಾರೆ.
‘2025ರಲ್ಲಿ ನಾವು ಕೊನೆಯ ಬಾರಿಗೆ ಪರಸ್ಪರ ಭೇಟಿಯಾಗೋಣ. ಮುಂದೆ 2 ಸಿನಿಮಾಗಳು ಮಾತ್ರ ಮತ್ತು ಹಲವು ವರ್ಷಗಳ ನೆನಪುಗಳು. ಮತ್ತೊಮ್ಮೆ ಧನ್ಯವಾದಗಳು. ನಾನು ನಿಮಗೆ ಎಂದೆಂದಿಗೂ ಋಣಿ’ ಎಂದು ಹೇಳಿದ್ದಾರೆ.
ವಿಕ್ರಾಂತ್ ಅವರು 2013ರಲ್ಲಿ ರಿಲೀಸ್ ಆದ ‘ಲೂಟೆರಾ’ ಚಿತ್ರದ ಮೂಲಕ ಬಣ್ಣದ ಲೋಕಕ್ಕೆ ಕಾಲಿಟ್ಟಿದ್ದು ಕಳೆದ ವರ್ಷ ರಿಲೀಸ್ ಆದ ‘12th ಫೇಲ್’ ಸಿನಿಮಾ ಅವರ ವೃತ್ತಿ ಬದುಕನ್ನು ಮತ್ತೊಂದು ಹಂತಕ್ಕೆ ಕರೆದುಕೊಂಡು ಹೋಗಿತ್ತು. ಈ ವರ್ಷ ‘ದಿ ಸಾಬ್ರಮತಿ ರಿಪೋರ್ಟ್’ ಚಿತ್ರದಲ್ಲಿ ನಟಿಸಿದ್ದರು. ‘ಮಿರ್ಜಾಪುರ್’ ಸರಣಿಯಲ್ಲಿ ಅವರು ನಟಿಸಿ ಎಲ್ಲರ ಗಮನ ಸೆಳೆದಿದ್ದರು.



















