29 C
Udupi
Wednesday, May 13, 2026
spot_img
spot_img
HomeBlogಮಹಾಭಾರತ

ಮಹಾಭಾರತ

ಭಾಗ – 520

ಭರತೇಶ ಶೆಟ್ಟಿ, ಎಕ್ಕಾರು

ಸುಧನ್ವನು ಸಮರ ಸನ್ನದ್ದ ಯೋಧ ವೇಷಭೂಷಿತನಾಗಿ ತಾಯಿಯ ಅಂತಃಪುರ ಪ್ರವೇಶಿಸಿದನು. ನಿತ್ಯದ ಜೀವನದಲ್ಲಿ ಮಗನ ಭೇಟಿ ರಾಜಕುಮಾರನಿಗೆ ಔಚಿತ್ಯವಾದ ತೊಡುಗೆಗಳಿಂದ ಕಂಗೊಳಿಸುವ ಸುಕುಮಾರನಂತೆ ತಾಯಿ ಇದಿರ್ಗೊಳ್ಳುತ್ತಿದ್ದವಳು. ಇಂದು ಹಾಗಲ್ಲ ಓರ್ವ ಸೇನಾನಿಯಾಗಿ ಮಗನನ್ನು ಕಾಣುತ್ತಿದ್ದಾಳೆ.

ಮಗ ಬಂದೊಡನೆ ಎದ್ದು ನಿಂತಳಾದರೂ, ಆ ಬಳಿಕ ಅಂತಃಪುರದ ಕಂಬಗಳಂತೆ ತಾನೂ ಒಂದು ಸ್ಥಂಭವಾಗಿ ನಿಶ್ಚಲಳಾದಳು. ಆಕೆಯೊಳಗೆ ಮೌನ ಆವರಿಸಿತ್ತಾದರೂ ಅದು ಕೇವಲ ಮಾತೆಯ ಬಾಯಿ ಮತ್ತು ನಾಲಗೆಯ ವ್ಯಾಪ್ತಿಯೊಳಗಿತ್ತು. ಯೋಚನೆ ಬಹುದೂರ ಸಾಗಿ ಸಾವಿರದೊಂದು ಪ್ರಶ್ನೆಗಳ ರಾಶಿಯನ್ನು ಕಲೆ ಹಾಕಿತ್ತು. ಮಗ ಹೋಗುತ್ತಿರುವುದು ಯಾರೊಡನೆ ಸಮರಕ್ಕೆ? ಬಂದಿರುವ ಎದುರಾಳಿಗಳು ಯಾರು? ಗೆಲುವು ಸಾಧ್ಯವೆ? ಯುದ್ಧ ಎಂದ ಮೇಲೆ ತೀಕ್ಷ್ಣ ಗಾಯಗಳಾಗದೆ? ರಕ್ತ ಬಸಿದು ಇಳಿಯದೆ? ಅದೆಷ್ಟು ನೋವಾದೀತು ನನ್ನ ಕಂದನಿಗೆ? ಮಗ ಆ ನೋವಿನಿಂದ ಬಾಯ್ಬಿಟ್ಟು ಅಳದಿರುವನೆ? ಅತ್ತು ಅಮ್ಮಾ ಎಂದು ಕರೆಯದಿರುವನೆ? ಆಗ ಆರೈಕೆ ಮಾಡಲು ನಾನು ಓಡಿ ಹೋಗಲಾದೀತೆ? ಆತನ ಕೋಮಲ ತನು ರಕ್ತದೋಕುಳಿಯಲ್ಲಿ ಮಿಂದಂತೆ ನೆನೆದು ಹೋಗದೆ? ಅದನ್ನು ಹೇಗೆ ಕಲ್ಪಿಸಲಿ? ಹೇಗೆ ಕಾಣಲಿ? ಯುದ್ದ ಗೆದ್ದು ಬದುಕಿ ಮರಳಿ ಬಂದಾನೆ? ಮತ್ತೆ ನೋಡುವ ಭಾಗ್ಯ ಸಿಕ್ಕೀತೆ? ಇಲ್ಲಾ ಇಂದು ಆತನ ಅಂತಿಮ ದರ್ಶನವಾಗಿ ಹೋದೀತೆ? ಹೀಗೆ ತಾಯಿಯಾಗಿ ಮಗನ ಬಗ್ಗೆ ಭಯಭೀತಳಾಗಿ ತರ್ಕಿಸುತ್ತಾ ಅಗಣಿತ ಪ್ರಶ್ನೆಗಳ ಸರಮಾಲೆಯನ್ನು ಹೆಣೆಯ ತೊಡಗಿದಳು‌. ಕೂಡಲೆ ತಾನು ಚಂಪಕಾವತಿಯ ಮಹಾರಾಣಿ, ರಾಜಮಾತೆ, ನನ್ನ ಹೊಣೆಗಾರಿಕೆ ವಿಶಾಲವಾಗಿದೆ. ಕೇವಲ ಓರ್ವ ತಾಯಿಯಾಗಿ ವಿವೇಚಿಸಿದರೆ ಸ್ವಾರ್ಥಿಯಾಗುತ್ತೇನೆ. ಸಮಸ್ತ ಪ್ರಜಾಪರಿವಾರದಲ್ಲಿ ನನ್ನಂತಹ ಅಗಣಿತ ಮಾತೆಯರಿದ್ದಾರೆ. ಅವರ ಮಕ್ಕಳು ಯುದ್ಧಕ್ಕೆ ಸಿದ್ಧರಾಗಿದ್ದಾರೆ. ಮಾತೃವಾತ್ಸಲ್ಯ ಅವರಿಗೂ ಇದೆ. ಅವರೊಳಗೆ ಉಕ್ಕೇರುವ ಮಮಕಾರವನ್ನು ಸಹಿಸಿ ಪುರದ ಮಾನ ಸಮ್ಮಾನಗಳನ್ನು ಉಳಿಸಿ ಬೆಳೆಸುವಲ್ಲಿ ಮಹಾತ್ಯಾಗಕ್ಕೆ ಸನ್ನದ್ಧರಾಗಿರುವಾಗ ಮಹಾರಾಣಿಯಾಗಿ ನಾನು ಒಂದು ಹೆಜ್ಜೆ ಮುಂದಿಟ್ಟು ಸಮರ್ಪಣೆ ಮಾಡಬೇಕಾಗಿ ಬಂದರೆ ಸದಾ ಸಿದ್ಧಳಾಗಿರಬೇಕು ಎಂಬ ಜಾಗೃತಿ ಮೂಡಿತು. ಮನದೊಳಗೆ ಪರ್ವತದಂತೆ ಮೊಳಕೆಯೊಡೆದು ಸಸಿಯಾಗಿ ಹೆಮ್ಮರಗಳಾಗಿ ದಟ್ಟಕಾಡಿನಂತೆ ನಿಂತ ಸಾವಿರದೊಂದು ಪ್ರಶ್ನೆಗಳು ಜಾರಿ ಸಾವು ಇರದ ಒಂದು ಒಂದು ಲಕ್ಷ್ಯ ಕಣ್ಮುಂದೆ ಗೋಚರಿಸತೊಡಗಿತು. ನಮ್ಮ ಆರಾಧ್ಯಮೂರ್ತಿ ಶ್ರೀಕೃಷ್ಣನಿರುವ ಪಕ್ಷ ಪಾಂಡವರದ್ದು. ಹಾಗಾಗಿ ನಮಗೆ ಭಯವಿಲ್ಲ. ದೇವಕೃಷ್ಣನ ಪಕ್ಷದವರೊಡನೆ ಸೆಣಸಿ ಗೆದ್ದರೂ, ಸೋತರೂ, ಸತ್ತರೂ ಅದು ನಮಗೆ ಬೇಕಾದ ಅಮರತ್ವವುಳ್ಳ ಅಜರಾಮರ ಕೀರ್ತಿಯನ್ನು ಒದಗಿಸುತ್ತದೆ. ಕಾಯಕ್ಕೆ ಸಾವು ಬಂದರೂ, ನಾವು ಮಾಡುವ ಕಾರ್ಯಕ್ಕೆ ಸಾವು ಎಂದೆಂದಿಗೂ ಬಾರದು. ಹಾಗಾಗಿ ಯುಕ್ತವಾದುದನ್ನು ನಾನು ಆರಿಸಿ ಮಗನಿಗೆ ಧೈರ್ಯ ತುಂಬಿ ದೇಶಪ್ರೇಮದ ಹೋರಾಟಕ್ಕೆ ಪ್ರೇರಣೆ ನೀಡುತ್ತೇನೆಂದು ಬರಸೆಳೆದು ಬಿಗಿದಪ್ಪಿದಳು. ಮಂಗಳಾರತಿ ಬೆಳಗಿ ವಿಜಯ ತಿಲಕವನ್ನು ಒತ್ತಿ ಪರಮಾತ್ಮ ಕೃಷ್ಣನನ್ನು ಮನಸಾರೆ ಸ್ತುತಿಸಿ ಮಗನ ಹಣೆಗೆ ಹಚ್ಚಿದಳು. ಕಣ್ಮುಚ್ಚಿ ಭಗವಂತಾ, ನೀನು ಸೂತ್ರಧಾರಿ. ನಿನ್ನ ನಿರ್ಣಯವೇನಿದೆಯೊ ಅದರಂತೆಯೆ ಆಗಲಿ. ಆದರೆ ನಿನ್ನೊಲುಮೆ ಮಾತ್ರ ಸದಾ ನಮಗಿರಲಿ. ಹೀಗೆ ಪ್ರಾರ್ಥಿಸಿದ ಮಾತೆ ಭೂಮಿ ತಾಯಿಯಂತಾಗಿದ್ದಾಳೆ. ಭೂಗರ್ಭದೊಳಗೆ ಲಾವಾರಸ, ಜ್ವಾಲಮುಖಿ ಕೊತಕೊತ ಕುದಿಯುತ್ತಿದ್ದರೂ, ಅದರ ಮೇಲಿನ ಬಲಿಷ್ಟ ಶಿಲಾಪದರದಿಂದ ತಡೆದು ಒತ್ತಿ ತನ್ನೊಳಗೆ ಹಿಡಿದುಕೊಂಡು, ಮೇಲೆ ತಂಪು ಸಿಹಿನೀರು ತುಂಬಿ ಫಸಲು ಮಣ್ಣಿಂದ ನಳನಳಿಸುವ ಹಸಿರು ಹೂ ಬಳ್ಳಿ, ಫಲಭರಿತ ಮರಗಳಿಂದ ರಮಣೀಯವಾಗಿ ಗೋಚರಿಸುವ ಪೃಥ್ವಿಯಂತೆ ಆಗಿ ಪರಿವರ್ತನೆಗೊಂಡಿದ್ದಾಳೆ. ಮನದೊಳಗೆ ಕುದಿಯುವ ದುಃಖ, ಆತಂಕಗಳಿದ್ದರೂ ತೋರಗೊಡದೆ, ರಾಜಮಾತೆಯಾಗಿ ಕರ್ತವ್ಯಪ್ರಜ್ಞೆಯ ಶಿಲಾಪದರದಿಂದ ಒತ್ತಿಹಿಡಿದು, ಧರ್ಮಪಾಲನೆಯ ಗುಣವುಳ್ಳ ಜವಾಬ್ದಾರಿಯನ್ನು ಮುಖದಲ್ಲಿ ಧರಿಸಿ ಪ್ರಸನ್ನವದನೆಯಾದಳು. ಮಗನಿಗೆ ನಗುನಗುತ್ತಲೆ ಶುಭಹಾರೈಸಿ ಆಶೀರ್ವಾದ ಮಾಡಿ ಬೀಳ್ಕೊಟ್ಟಳು.

ಮಾತೆಯ ಪಾದಸ್ಪರ್ಶಿಸಿ ಆಶೀರ್ವಾದ ಪಡೆದು ಅಲ್ಲಿಂದ ಸುಧನ್ವ ತನ್ನ ಮಡದಿ ಪ್ರಭಾವತಿಯನ್ನು ಕಾಣಲು ಯುವರಾಣಿಯ ಅರಮನೆಯ ಶಯನಾಗೃಹದತ್ತ ಬಂದನು. ಪ್ರಭಾವತಿ ನವವಧು, ಎಂದಿನಂತೆ ತನ್ನ ಅಂತರಂಗ, ಅಂತಃಪುರ ಸಿಂಗರಿಸಿ ದೇವತಾ ಅಪ್ಸರೆಯನ್ನೂ ಮೀರಿಸುವ ರೂಪ ಲಾವಣ್ಯದಿಂದ ಪತಿಯನ್ನು ಪ್ರೀತಳಾಗಿ ಎದುರ್ಗೊಂಡಳು. ಪ್ರಭಾವತಿ ಎಳೆ ಪ್ರಾಯದ ತರುಣಿಯಾದರೂ ಆಕೆ ಜ್ಞಾನ ಪ್ರಬುದ್ಧೆ. ತನ್ನ ಗಂಡ ತನ್ನನ್ನು ಕಾಣಲು ಬರುವಾಗ ಕಾರ್ಯದೊತ್ತಡ ಮುಗಿಸಿ ವಿರಾಮಕ್ಕಾಗಿ ಬರುವವರು. ಆದರೆ ಇಂದು ಹಾಗಲ್ಲ ಆರಾಮ ವಿರಾಮಗಳ ಅಪೇಕ್ಷೆ ಪತಿಯ ಮೊಗದಲ್ಲಿ ಮಾಯವಾಗಿದೆ. ಪ್ರತಿಶತ ಗಮನ ತನ್ನ ಪತ್ನಿಯ ಕಡೆಗೆ ಕೇಂದ್ರೀಕೃತವಾಗಿ ನಿರಾಳನಾಗಿ ಬರುವ ಪತಿದೇವ ಇಂದು ಅವಸರದಿಂದ ಬೆವತು, ಗಲ್ಲಗಳು ಕೆಂಪಡರಿ ಕಂಪಿಸುತ್ತಿವೆ, ಕಣ್ಣುಗಳು ನಿಂತಲ್ಲಿ ನಿಲ್ಲುತ್ತಿಲ್ಲ. ಸರಸದ ವಾಸನೆಯೂ ಇಲ್ಲ. ಅವಸರದ ಕಾತರವಿದೆ. ಸುಮ ಸೌರಭ ಸೂಸುವ ಪುಷ್ಪಗುಚ್ಚಗಳಿರುವ ಕರಗಳಲ್ಲಿ ಆಯುಧಗಳಿವೆ. ಏಕ ವಸನಧಾರಿಯಾಗಿ ಮೇಲುಡುಪು ಧರಿಸಿ ಬರುವ ತನ್ನ ಇನಿಯನ ಶರೀರ ಜಟ್ಟಿ ಚಲ್ಲನಗಳಿಂದ ಬಿಗಿದು ಕಟ್ಟಲ್ಪಟ್ಟಿದೆ. ಎನ್ನ ಕೋಮಲ ಎದೆಗೊತ್ತುವ ಆತನ ಎದೆ ಲೋಹದ ಕಠಿಣ ಎದೆಗವಚದಿಂದ ಮುಚ್ಚಲ್ಪಟ್ಟಿದೆ. ಪನ್ನೀರ ಸ್ನಾನದಿಂದ ಕಂಪು ಸೂಸುವ ಬಾಚಿದ ಕೇಶರಾಶಿ ಶಿರಸ್ತ್ರಾಣವನ್ನು ಧರಿಸಿದೆ. ರಕ್ಷಾಕವಚಗಳು ದೇಹದೆಲ್ಲೆಡೆ ತುಂಬಿವೆ‌. ನೋಟದಿಂದಲೆ ಅರಿತುಕೊಂಡಳು ಪ್ರಭಾವತಿ ಎನ್ನ ನಲ್ಲ ಎನ್ನೊಡನೆ ರಮಿಸಲು ಬಂದವನಲ್ಲ. ಹಾಗೆಂದು ಕಾಲಹರಣ ಮಾಡುವುದು ಉಚಿತವಲ್ಲ ಎಂದು ಅರಿತಳು. ಸಹಚಾರಿಣಿಯೂ, ಸಹಕಾರಿಣಿಯೂ ಆಗಿ ಬಂದವನನ್ನು ಸ್ವಾಗತಿಸಿ ಒಳ ಕರೆದು ಕುಳ್ಳಿರಿಸಿ ಸೇವೆಗೆ ಮುಂದಾದಳು.

ಸುಧನ್ವ ತನ್ನ ಪ್ರೀತಿಯ ಮಡದಿಯನ್ನು ಕರೆದು ಸೆಳೆದು ಬದಿಯಲ್ಲಿ ಕುಳ್ಳಿರಿಸಿದನು. ಭುಜವನ್ನಾರಿಸಿ ಹಿಡಿದು, ಮುಖವನ್ನು ನೋಡುತ್ತಾ, ಬೆರಳ ತುದಿಗಳಿಂದ ಗಲ್ಲವನ್ನೆತ್ತಿ ಕಣ್ಣುಗಳಿಗೆ ಕಣ್ಣು ಸೇರಿಸಿ ನೋಡತೊಡಗಿದನು. ಆತನ ಕಂಗಳಲ್ಲಿ ಯುದ್ದ ಸಿದ್ಧನಾಗಿ ಬಂದಿರುವ ರೋಷದ ಕಿಚ್ಚು, ಮಡದಿಯ ಪ್ರೀತಿಯ ಪರದೆಯೊಳಗೆ ಅವಿತು ಕೊಂಡಿದ್ದರೂ ಇಣುಕಿ ನೋಡುವಂತಿದೆ. ಆದರೆ ಪ್ರಭಾವತಿಯ ಮೋಹಕ ಕಂಗಳು ತನ್ನ ಇನಿಯ ಹೀಗೂ ಎಷ್ಟು ಚೆಲುವನಾಗಿ ಶೋಭಿಸುತ್ತಿದ್ದಾನೆ ಎಂದು ಮೈಮರೆತು ಆಸ್ವಾದಿಸುತ್ತಿವೆ ಎಂಬಂತಿದೆ.

ಚಂಪಕಾವತಿಯ ಯುವರಾಣಿಯ ಮುಂಗುರುಳು ಹಾಲುಗೆನ್ನೆಯ ಮೇಲೆ ಇಳಿದೇರುತ್ತಾ ಆಕೆಯ ಉಸಿರಿನ ಜೊತೆ ಚೆಲ್ಲಾಟವಾಡುತ್ತಿವೆ. ತನ್ನ ಬೆರಳ ತುದಿಯಲ್ಲಿ ಮೃದುವಾಗಿ ಆ ಕೇಶ ಸುರುಳಿಯನ್ನು ತೀಡಿ ಎತ್ತಿ ಕಿವಿಯ ಸಂದಿಗೆ ಸೇರಿಸಿ ತನಗೆ ತೊಂದರೆ ನೀಡದಿರು ಎಂಬಂತೆ ಸುಧನ್ವ ಸರಿಸಿ ನಿಲ್ಲಿಸಿದನು. ಮನದನ್ನೆಯನ್ನು ಪ್ರೀತಿಯಿಂದ ಮೈದಡವುತ್ತಾ, “ಪ್ರಭಾವತೀ! ನಮ್ಮ ಚಂಪಕಾವತಿಗೆ ಹಸ್ತಿನೆಯ ಚಂದ್ರವಂಶದ ದೊರೆ ಧರ್ಮರಾಯನ ಅಶ್ವಮೇಧದ ತುರಗ ಬಂದಿದೆ. ಮಹಾರಾಜರಾಗಿರುವ ನನ್ನ ಪಿತಾಶ್ರೀಯವರು ಕ್ಷತ್ರಿಯೋಚಿತ ಧರ್ಮದಂತೆ ಅದನ್ನು ಬಂಧಿಸಿದ್ದಾರೆ. ನಾವೆಲ್ಲರೂ ಯುದ್ಧ ಸಿದ್ಧರಾಗಿದ್ದೇವೆ. ಪಾಂಡವರ ಸೇನೆಯ ಜೊತೆ ಅರ್ಜುನ ಸೇನಾಧಿಪನಾಗಿ ಬಂದಿದ್ದಾನೆ. ನಮ್ಮ ದೇವರು ಶ್ರೀಕೃಷ್ಣ ಪರಮಾತ್ಮನಿಗೆ ಆ ಅರ್ಜುನ ಪರಮಾಪ್ತನಂತೆ. ನಾಳೆಯ ಸೂರ್ಯೋದಯಕ್ಕೆ ಯುದ್ಧಾರಂಭವಾಗಲಿದೆ. ಈ ವಿಚಾರ ನಿನಗೆ ತಿಳಿಸಲು ಬಂದವನಿದ್ದೇನೆ” ಎಂದು ಮಧುರವಾದ ದನಿಯಲ್ಲಿ, ಅದುರುವ ಅಧರಗಳಿಂದ ನುಡಿಯುತ್ತಾ, ಕಠೋರವಾದ ಸತ್ಯವನ್ನು ವಿನೀತನಾಗಿ ಸವಿಮಾತುಗಳಿಂದ ವಿವರಿಸಿ ಹೇಳತೊಡಗಿದನು. ನನ್ನನ್ನು ಸಂಪ್ರೀತಿಯಿಂದ ಯುದ್ಧದಲ್ಲಿ ಗೆದ್ದು ಬರುವಂತೆ ಹರಸಿ ಬೀಳ್ಗೊಡು ಎಂದು ಕೇಳುತ್ತಿದ್ದಾನೆ ಧೀರನಾದ ರಾಜಕುಮಾರ ಸುಧನ್ವ.

ಮುಂದುವರಿಯುವುದು…

spot_imgspot_img
spot_imgspot_img
spot_imgspot_img
spot_imgspot_img
spot_imgspot_img
spot_imgspot_img
spot_imgspot_img
spot_imgspot_img
spot_imgspot_img
spot_imgspot_img
spot_imgspot_img
spot_imgspot_img
spot_imgspot_img
spot_imgspot_img
spot_imgspot_img
spot_imgspot_img
spot_imgspot_img
spot_imgspot_img
spot_imgspot_img
spot_imgspot_img
RELATED ARTICLES

LEAVE A REPLY

Please enter your comment!
Please enter your name here

- Advertisment -
Google search engine

Most Popular

Recent Comments

You cannot copy content of this page