
ಚೆನ್ನೈ: ತಮಿಳುನಾಡಿನ ನೂತನ ಮುಖ್ಯಮಂತ್ರಿ ಸಿ. ಜೋಸೆಫ್ ವಿಜಯ್ ಅಧಿಕಾರ ಸ್ವೀಕರಿಸಿದ ತಕ್ಷಣವೇ ಮಹತ್ವದ ನಿರ್ಧಾರ ಕೈಗೊಂಡಿದ್ದಾರೆ. ಪೂಜಾ ಸ್ಥಳಗಳು, ಶಾಲೆಗಳು ಹಾಗೂ ಬಸ್ ನಿಲ್ದಾಣಗಳ 500 ಮೀಟರ್ ವ್ಯಾಪ್ತಿಯಲ್ಲಿರುವ 717 ಟಾಸ್ಮಾಕ್ ಮದ್ಯದಂಗಡಿಗಳನ್ನು ಎರಡು ವಾರಗಳೊಳಗೆ ಮುಚ್ಚುವಂತೆ ಆದೇಶಿಸಲಾಗಿದೆ.
ಈ ಕ್ರಮದಡಿ ದೇವಾಲಯ, ಮಸೀದಿ, ಚರ್ಚ್, ಶಾಲೆ ಮತ್ತು ಕಾಲೇಜುಗಳ ಸಮೀಪದಲ್ಲಿರುವ ಮದ್ಯದಂಗಡಿಗಳನ್ನು ತೆರವುಗೊಳಿಸಲು ಅಧಿಕಾರಿಗಳಿಗೆ ಸೂಚನೆ ನೀಡಲಾಗಿದೆ. ಸಾರ್ವಜನಿಕ ಸ್ಥಳಗಳ ಸುತ್ತಮುತ್ತ ಮದ್ಯದ ಲಭ್ಯತೆಯನ್ನು ಕಡಿಮೆ ಮಾಡುವ ಉದ್ದೇಶ ಸರ್ಕಾರದ್ದಾಗಿದೆ.
ರಾಜ್ಯದಲ್ಲಿ ಒಟ್ಟು 4,765 ಟಾಸ್ಮಾಕ್ ಮಳಿಗೆಗಳಿದ್ದು, ಮುಚ್ಚಲಾಗುತ್ತಿರುವ 717 ಮಳಿಗೆಗಳಲ್ಲಿ 276 ಪೂಜಾ ಸ್ಥಳಗಳ ಬಳಿ, 186 ಶಿಕ್ಷಣ ಸಂಸ್ಥೆಗಳ ಬಳಿ ಹಾಗೂ 255 ಬಸ್ ನಿಲ್ದಾಣಗಳ ಸಮೀಪ ಕಾರ್ಯನಿರ್ವಹಿಸುತ್ತಿವೆ.
ಈ ಆದೇಶ ವಿಜಯ್ ಸರ್ಕಾರದ ಮೊದಲ ಪ್ರಮುಖ ಸಾಮಾಜಿಕ ಸುಧಾರಣಾ ಕ್ರಮವಾಗಿದೆ.






















