
ಬೆಂಗಳೂರು: ನೀಟ್ ಮರು ಪರೀಕ್ಷೆ ಜೂನ್ 21ರಂದು ನಡೆಯಲಿರುವ ಹಿನ್ನೆಲೆಯಲ್ಲಿ ಫಲಿತಾಂಶ ಪ್ರಕಟಣೆ ವಿಳಂಬವಾಗುವ ಸಾಧ್ಯತೆ ಇದೆ. ಇದರಿಂದ ಇಂಜಿನಿಯರಿಂಗ್ ಸೇರಿದಂತೆ ಇತರ ಕೋರ್ಸುಗಳ ಪ್ರವೇಶ ಪ್ರಕ್ರಿಯೆಗೆ ತೊಂದರೆಯಾಗದಂತೆ ರಾಜ್ಯ ಸರ್ಕಾರ ಸಿಇಟಿ ಕೌನ್ಸೆಲಿಂಗ್ ಪ್ರಕ್ರಿಯೆಯನ್ನು ಪ್ರತ್ಯೇಕವಾಗಿ ಆರಂಭಿಸಲು ತೀರ್ಮಾನಿಸಿದೆ.
ಉನ್ನತ ಶಿಕ್ಷಣ ಇಲಾಖೆ, ವೈದ್ಯಕೀಯ ಶಿಕ್ಷಣ ಇಲಾಖೆ, ಕೆಇಎ ಹಾಗೂ ಖಾಸಗಿ ಶಿಕ್ಷಣ ಸಂಸ್ಥೆಗಳ ಪ್ರತಿನಿಧಿಗಳೊಂದಿಗೆ ನಡೆದ ಸಭೆಯಲ್ಲಿ ಈ ನಿರ್ಧಾರ ಕೈಗೊಳ್ಳಲಾಗಿದೆ. ಸಾಮಾನ್ಯವಾಗಿ ಸಿಇಟಿ ಮತ್ತು ನೀಟ್ ಕೌನ್ಸೆಲಿಂಗ್ ಏಕಕಾಲದಲ್ಲಿ ನಡೆಯುತ್ತದಾದರೂ, ಈ ಬಾರಿ ವಿಳಂಬ ತಪ್ಪಿಸಲು ಪ್ರತ್ಯೇಕ ಪ್ರಕ್ರಿಯೆ ಅನುಸರಿಸಲಾಗುತ್ತಿದೆ.
ಕೆಇಎ ಕಾರ್ಯನಿರ್ವಾಹಕ ನಿರ್ದೇಶಕ ಎಚ್. ಪ್ರಸನ್ನ ಮಾತನಾಡಿ, ಇಂಜಿನಿಯರಿಂಗ್ ಕೌನ್ಸೆಲಿಂಗ್ ತಕ್ಷಣ ಆರಂಭಿಸಲು ಎಲ್ಲರೂ ಒಪ್ಪಿಗೆ ನೀಡಿದ್ದಾರೆ. ನೀಟ್ ಸೀಟು ಆಯ್ಕೆ ಮಾಡಿಕೊಳ್ಳುವ ಅಭ್ಯರ್ಥಿಗಳಿಂದ ತೆರವಾಗುವ ಸ್ಥಾನಗಳನ್ನು ಬಳಿಕ ಇತರ ಅರ್ಹ ವಿದ್ಯಾರ್ಥಿಗಳಿಗೆ ನೀಡಲಾಗುತ್ತದೆ ಎಂದರು.
ಇನ್ನೊಂದೆಡೆ, ದ್ವಿತೀಯ ಪಿಯುಸಿ ಪರೀಕ್ಷೆ-2 ಫಲಿತಾಂಶ ಪ್ರಕಟವಾಗಿದ್ದು, ವಿಷಯವಾರು ಅಂಕಗಳ ಪರಿಷ್ಕರಣೆ ಮತ್ತು ಕೃಷಿ ಪ್ರಾಯೋಗಿಕ ಪರೀಕ್ಷೆಯ ಮರು ಪರೀಕ್ಷೆ ಪೂರ್ಣಗೊಂಡ ಬಳಿಕವೇ ಸಿಇಟಿ ಫಲಿತಾಂಶ ಪ್ರಕಟಿಸಲಾಗುತ್ತದೆ. ಜೂನ್ ಮೊದಲ ವಾರದಲ್ಲಿ ಸಿಇಟಿ ಫಲಿತಾಂಶ ಹೊರಬರುವ ಸಾಧ್ಯತೆ ಇದೆ ಎಂದು ಕೆಇಎ ತಿಳಿಸಿದೆ.



























