
ಚೆನ್ನೈ: ತಮಿಳುನಾಡಿನಲ್ಲಿ ಸ್ಪಷ್ಟ ಬಹುಮತ ಸಿಗದ ಹಿನ್ನೆಲೆ ಸರ್ಕಾರ ರಚನೆಗೆ ಟಿವಿಕೆ ನಾಯಕ ದಳಪತಿ ವಿಜಯ್ ಪ್ರಯತ್ನ ನಡೆಸುತ್ತಿದ್ದು ಈ ನಡುವೆ, ಡಿಎಂಕೆ ಮುಖ್ಯಸ್ಥ ಎಂ.ಕೆ. ಸ್ಟಾಲಿನ್, ಟಿವಿಕೆ ಅತಿ ದೊಡ್ಡ ಪಕ್ಷವಾಗಿ ಹೊರಹೊಮ್ಮಿರುವುದರಿಂದ ಅವರು ಸರ್ಕಾರ ರಚಿಸಲಿ, ನಮಗೆ ವಿರೋಧ ಇಲ್ಲ ಎಂದು ಹೇಳಿರುವುದಾಗಿ ವರದಿಯಾಗಿದೆ.
ಟಿವಿಕೆ ಚುನಾವಣೆಯಲ್ಲಿ ನೀಡಿದ ಎಲ್ಲ ಭರವಸೆಗಳನ್ನು ಜಾರಿಗೆ ತರುವುದು ಕಷ್ಟ ಎಂದು ಅಭಿಪ್ರಾಯ ವ್ಯಕ್ತಪಡಿಸಿದ ಸ್ಟಾಲಿನ್ ವಿಜಯ್ ಅವರ ಆಡಳಿತವನ್ನು ಕೆಲ ತಿಂಗಳು ಗಮನಿಸಿದ ಬಳಿಕ ಪ್ರತಿಕ್ರಿಯೆ ನೀಡುವುದಾಗಿ ಹೇಳಿದ್ದು, ಮತ್ತೆ ಚುನಾವಣೆಗೆ ಹೋಗುವ ಯೋಚನೆ ಡಿಎಂಕೆಗೆ ಇಲ್ಲ ಎಂದಿದ್ದಾರೆ.
ಮಹಿಳೆಯರಿಗೆ ₹2,500 ನೆರವು ನೀಡುವ ಭರವಸೆ ಅಸಾಧ್ಯ ಎಂದು ಹೇಳಿದ ಅವರು, ಡಿಎಂಕೆ ಆರಂಭಿಸಿದ ಕಲ್ಯಾಣ ಯೋಜನೆಗಳನ್ನು ಮುಂದುವರಿಸಿ ₹1,000 ಸಹಾಯಧನ ನೀಡುವಂತೆ ಸಲಹೆ ನೀಡಿದ್ದಾರೆ.
ಇದೀಗ ಸರ್ಕಾರ ರಚನೆಗೆ ಬೇಕಾದ ಮ್ಯಾಜಿಕ್ ಸಂಖ್ಯೆ 118 ಆಗಿದ್ದು, ಟಿವಿಕೆ ಬಳಿ 108 ಸ್ಥಾನಗಳಿವೆ. ವಿಜಯ್ ಎರಡು ಕ್ಷೇತ್ರಗಳಲ್ಲಿ ಗೆದ್ದಿರುವುದರಿಂದ ಒಂದು ಸ್ಥಾನ ತ್ಯಜಿಸಬೇಕಿದ್ದು, ಪಕ್ಷದ ಬಲ 107ಕ್ಕೆ ಇಳಿಯಲಿದೆ. ಕಾಂಗ್ರೆಸ್ನ ಐವರು ಶಾಸಕರ ಬೆಂಬಲದಿಂದ ಸಂಖ್ಯೆ 112ಕ್ಕೆ ಏರಿದರೂ, ಇನ್ನೂ 6 ಶಾಸಕರ ಬೆಂಬಲ ಅಗತ್ಯವಿದೆ.
ಸರ್ಕಾರ ರಚನೆಗೆ ವಿಜಯ್ ಹಕ್ಕು ಮಂಡಿಸಿದ್ದರೂ, ಪೂರ್ಣ ಬಹುಮತ ಸಾಬೀತಾದ ಬಳಿಕವೇ ಅವಕಾಶ ನೀಡುವುದಾಗಿ ರಾಜ್ಯಪಾಲರು ತಿಳಿಸಿದ್ದಾರೆ. ಈ ಹಿನ್ನೆಲೆ ಇಂದು ನಡೆಯಬೇಕಿದ್ದ ಪ್ರಮಾಣವಚನ ಕಾರ್ಯಕ್ರಮವನ್ನು ಮುಂದೂಡಲಾಗಿದೆ.





















