27.4 C
Udupi
Friday, May 8, 2026
spot_img
spot_img
HomeBlogಮಹಾಭಾರತ

ಮಹಾಭಾರತ

ಭಾಗ – 515

ಭರತೇಶ ಶೆಟ್ಟಿ, ಎಕ್ಕಾರು

ಮಹಾರಾಜ ಹಂಸಧ್ವಜ ಯೋಚಿಸುತ್ತಾ ನ್ಯಾಯ ದಂಡನೆಯ ಬಗ್ಗೆ ತೀರ್ಮಾನ ಹೇಗೆ ಎಂದು ಕ್ಷಣ ಕಾಲ ಮೌನಿಯಾಗಿ ನಿಂತು ಬಿಟ್ಟನು.

ಇದನ್ನು ಗಮನಿಸಿದ ಪುರೋಹಿತರಾದ ಶಂಖ ಮತ್ತು ಲಿಖಿತರು “ಮಹಾರಾಜಾ! ನ್ಯಾಯ ಮತ್ತು ದಂಡನೆ ನಿಷ್ಪಕ್ಷವಾಗಿರಬೇಕು. ರಾಜಾಜ್ಞೆ ಮೀರಿರುವುದು ಅಕ್ಷಮ್ಯ ಅಪರಾಧ. ರಾಜನ ಆಜ್ಞೆ ಉಲ್ಲಂಘಿಸಲು ಅವಕಾಶವಿರದ ಶಾಸನ. ಅದಕ್ಕೆ ಮರ್ಯಾದೆ ನೀಡದಿರುವುದು ಮಹಾಪರಾಧ. ದೇಶ ಮತ್ತು ತಾಯಿ ಇಬ್ಬರೂ ಅನುಕ್ಷಣ ಪೂಜ್ಯರು. ದೇಶಕ್ಕೆ ಆಪತ್ತು ಬಂದಿರುವಾಗ ರಾಜಾಜ್ಞೆ ಮೀರಿ ಅನ್ಯ ಕಾರ್ಯ ವ್ಯಸ್ಥನಾಗಿದ್ದುದು ಸುಧನ್ವನ ಅಕ್ಷಮ್ಯ ಕೃತ್ಯ. ಅದೂ ಕಾಮಾತುರನಾಗಿ ಪತ್ನಿ ಸಂಗ ನಿರತನಾದುದು ನಾಚಿಕೆಗೇಡಿನ ವಿಷಯ. ನಮ್ಮ ರಾಜ್ಯದ ಜನರ ಮನೋಭಾವಕ್ಕೆ ಕುಂದು ತರುವ ನೀಚ ಕೃತಿ. ಆಜ್ಞೆ ಮಾಡುವಾಗಲೆ ತಪ್ಪಿದವರಿಗೆ ಯಾವ ಶಿಕ್ಷೆ ಎಂದೂ ಸೂಚಿಸಲಾಗಿದೆ. ಹಾಗಾಗಿ ಈಗ ಯೋಚಿಸಿ ದಂಡನೆ ನೀಡಬೇಕಾಗಿಲ್ಲ. ಪೂರ್ವ ನಿರ್ಧಾರಿತ ಶಿಕ್ಷೆಯಾದ ಕುದಿ ಎಣ್ಣೆಯ ಕೊಪ್ಪರಿಗೆಗೆ ಹಾಕುವ ವ್ಯವಸ್ಥೆಯಾಗಲಿ.” ಎಂದು ಪುರೋಹಿತ ಶಂಖ ಅಭಿಪ್ರಾಯವನ್ನು ನಿಷ್ಠುರನಾಗಿ ತಿಳಿಸಿದರು.

ಹಂಸಧ್ವಜನಿಗೆ ತನ್ನ ಪುರೋಹಿತರಾದ ಶಂಖ ಹೇಳಿದ ಮಾತುಗಳನ್ನು ಕೇಳುವಾಗ ಹೌದೆನಿಸಿತು. ನನ್ನ ಈ ಜೀವವೆ ನಶ್ವರವಾದುದು. ಸತ್ಯ ನಿಷ್ಠೆ ತೊರೆದು ಅಪಕೀರ್ತಿಗೆ ಗುರಿಯಾಗಬಾರದು. ಹೆಂಡತಿ, ಮಕ್ಕಳು, ಸಂಸಾರ ಇದೆಲ್ಲ ನಾಲ್ಕು ದಿನದ ಬದುಕಿಗೆ ಮಾತ್ರ. ಆದರೆ ಧರ್ಮ ಪಾಲಿಸಿದ ಕೀರ್ತಿ ಅಜರಾಮರವಾದುದು. “ಹಾಗಯೆ ಆಗಲಿ. ಮಂತ್ರಿ ವರೇಣ್ಯರೇ! ಎಲ್ಲಿ ತೈಲ ಕಟಾಹ, ಪ್ರಜ್ವಲಿಸಿ ಅಗ್ನಿಯನ್ನು. ಕೊತಕೊತನೆ ಕುದಿಯುವ ತೈಲಕ್ಕೆ ರಾಜಾಜ್ಞೆಯ ಶಾಸನ ಮೀರಿದ ಅಪರಾಧಿಯನ್ನು ತಳ್ಳಿರಿ. ಇದು ರಾಜಾಜ್ಞೆ” ಎಂದು ಆದೇಶ ನೀಡಿದನು.

ಮಂತ್ರಿಗಳಾದ ಸುಮತಿ ಮತ್ತು ಪ್ರಮತಿ ಇಬ್ಬರಿಗೂ ಬಹಳ ದುಃಖವಾಯಿತು. ಆದರೂ ಸಹಿಸಿಕೊಂಡು “ರಾಜಾಜ್ಞೆ ಮೀರಲಾಗದು. ಆ ಕೂಡಲೆ ವ್ಯವಸ್ಥೆಯ ಸಿದ್ಧತೆಯಾಗಲಿ” ಎಂದು ಪರಿಚಾರಕರಿಗೆ ಸೂಚನೆ ನೀಡಿದರು. ಆದರೆ ಮಂತ್ರಿಗಳಾಗಿ ರಾಜ ತಪ್ಪು ನಿರ್ಧಾರ ಕೈಗೊಂಡಾಗ ಮಂತ್ರಾಲೋಚನೆ ನೀಡುವುದು ಕರ್ತವ್ಯ ಎಂದರಿತು “ಮಹಾರಾಜಾ! ಕುಲರತ್ನ ಸ್ವರೂಪನೂ, ದೇವಭಕ್ತನೂ, ಸನ್ನಡತೆ, ಧರ್ಮಬುದ್ಧಿ, ವಿಕ್ರಮ, ಸಹಿಷ್ಣುತೆ, ಉಚಿತಾನುಚಿತಗಳ ಬಗ್ಗೆ ಅರಿತು ವ್ಯವಹರಿಸುವ ಯುವರಾಜ ಸುಧನ್ವ ಅಪರಾಧ ಮಾಡಿಲ್ಲ. ಸೇನಾಧಿಪತಿಯಾದ ಸುಧನ್ವ ಸೇನಾ ನಿಯೋಜನೆ, ರಣ ತಂತ್ರ, ಆಯುಧ ಸಂಗ್ರಹಾದಿ ಕೆಲಸಗಳನ್ನು ನಿಭಾಯಿಸಿ ಮತ್ತೆ ಮತ್ತೆ ಪರಿಶೀಲಿಸಿದ್ದಾರೆ. ಅದನ್ನೆಲ್ಲಾ ಮಾಡಿ ತನ್ನ ಜವಾಬ್ದಾರಿ ನಿರ್ವಹಿಸಿದ ಬಳಿಕ ಅರಮನೆಯತ್ತ ಹೆತ್ತ ತಾಯಿಯ ನೆನಪಾಗಿ ಆಶೀರ್ವಾದ ಪಡೆಯಲು ತೆರಳಿದ್ದು, ಅದೂ ವಿರಾಮದ ಅವಧಿಯಲ್ಲಿ. ಆ ಬಳಿಕ ಪತ್ನಿಯ ಬೇಡಿಕೆಯೂ ಧರ್ಮ ಸಮ್ಮತವಾಗಿದ್ದ ಕಾರಣ ಧರ್ಮ ಸಂಕಟಕ್ಕೆ ಸಿಲುಕಿ ನಿಷ್ಕಾಮ ಕರ್ಮಿಯಾಗಿ ಆಕೆಗೆ ಋತುದಾನ ಮಾಡಿದ್ದಾನೆ ಹೊರತು ಕಾಮ್ಯ ಕರ್ಮಿಯಾಗಿ ತೊಡಗಿ ಕೊಂಡಿಲ್ಲ ಎಂಬುದು ಆತನ ಮಾತಿನಲ್ಲಿ ಸ್ಪಷ್ಟವಾಗಿದೆ. ಹೀಗಿರಲು ತಾವು ಅವಸರದಿಂದ ನಿರ್ಣಯ ಕೈಗೊಂಡರೆ ಅಪಾಯಕ್ಕೆ ಅಡಿಪಾಯವಾದೀತು. ಪೂರ್ಣವಾಗಿ ಸುಧನ್ವ ಏನು ಹೇಗೆ ಎಂದು ಹೆಜ್ಜೆ ಹೆಜ್ಜೆಗೂ ಅರಿತಿರುವ ನಾವು ನೀವು ದಾರಿ ತಪ್ಪಬಾರದು. ಇಂತಹ ಅಕಳಂಕಿತ ಚರಿತನನ್ನು ವಿವೇಚಿಸದೆ ನಾವುಗಳು ಹೇಗೆ ಕುದಿ ಎಣ್ಣೆಗೆ ಎಸೆಯಲಿ? ಸಾಕಿ ಸಲಹಿರುವ ನಿಮಗೇಕೆ ಇಷ್ಟು ಕಟು ಮನಸ್ಸಾಗಿದೆ? ಶಂಖ ಲಿಖಿತರು ಪೂರ್ವಾಗ್ರಹ ಪೀಡಿತರಾಗಿ, ಧರ್ಮ ಮಂಕುಗಳಾಗಿ, ಅವಕಾಶವಾದಿಗಳೂ ಆಗಿ ನೀಡಿರುವ ಅಭಿಪ್ರಾಯ ನಮ್ಮ ರಾಜ್ಯದ ಭವಿಷ್ಯವನ್ನು ಕರಟಿ ಕಮರಿ ಹೋಗುವಂತೆ ಮಾಡುತ್ತಿದೆ. ವಿವೇಚಿಸಿ ಮತ್ತೊಮ್ಮೆ ಪರಿಶೀಲಿಸಬೇಕು?” ಎಂದು ಬೇಡಿಕೊಂಡರು.

ರಾಜನಿಗೂ ಮಂತ್ರಿಯ ಮಾತುಗಳಲ್ಲಿ ಸತ್ಯ ಅಡಕವಾಗಿರುವುದು ಅರ್ಥವಾಗಿ ಮೌನಕ್ಕೆ ಶರಣಾಗಿ ನಿಲ್ಲಬೇಕಾಯಿತು. ಪಿತ್ತಾಳೆ ಕಿವಿಯವರಂತೆ ಅಥವಾ ಓಲೈಸಿದವರ ಕಡೆ ವಾಲುವ ಸ್ವಭಾವದರಂತೆ ಕ್ಷಣಕ್ಕೊಂದು ಮಾತು ಬದಲಿಸಲಾದೀತೆ? ಶಿಕ್ಷೆಯ ಆಜ್ಞೆ ಮಾಡಿಯಾಗಿದೆ. ಈಗ ಪರಿಷ್ಕರಣೆಯ ವಿಚಾರ ಹೇಗೆ ಮಂಡಿಸಲಾದೀತು ಎಂದು ತರ್ಕಿಸುತ್ತಾ ಸ್ಥಂಭೀಭೂತನಾಗಿ ಹೋದನು ರಾಜರ್ಷಿ ಹಂಸಧ್ವಜ.

ರಾಜನ ಮುಖಭಾವ ಮಂತ್ರಿಗಳ ಮಾತಿಗೆ ಮರುಳಾದಂತೆ ಕಂಡಿತು ಪುರೋಹಿತರಾದ ಲಿಖಿತರಿಗೆ “ರಾಜಾ! ಈ ಮೊದಲು ರುಕ್ಮಾಂಗದ, ಹರಿಶ್ಚಂದ್ರಾದಿ ಮಹಾರಾಜರಿಗೂ ಇಂತಹ ಕಷ್ಟಗಳು ಒದಗಿದ್ದವು. ಅವರು ಸತ್ಯ ಸಂಧರಾಗಿ ಹೆಂಡತಿ, ಮಕ್ಕಳು ಎಂಬ ಮೋಹ ಬಂಧನಕ್ಕೆ ಒಳಗಾಗಿರಲಿಲ್ಲ. ನ್ಯಾಯ ನಿಷ್ಠೆಯನ್ನು ತೋರಿ ನಿಷ್ಠುರವಾದರೂ ಧರ್ಮ ಪ್ರಕಾರ ವ್ಯವಹರಿಸಿ ಇಂದಿಗೂ ಚಿರ ಸ್ಮರಣೀಯರಾಗಿ ಉಳಿದಿದ್ದಾರೆ. ತೀರ ಸನಿಹ ವರ್ತಮಾನ ಕಾಲದಲ್ಲಿ ಆಗಿ ಹೋದ ಹಸ್ತಿನಾವತಿಯ ಮಹಾರಾಜ ಧೃತರಾಷ್ಟ್ರ ಪುತ್ರನಾದ ಕೌರವನ ಬಗ್ಗೆ ವ್ಯಾಮೋಹ ತೋರಿ ಎಂತಹ ಅನರ್ಥಕ್ಕೆ ಮೂಲ ಕಾರಣನಾದ ಎಂದು ಎಲ್ಲರಿಗೂ ತಿಳಿದಿದೆ. ಹಾಗಾಗಿ ನೀನೂ ನಿಷ್ಕಳಂಕನಾಗಿ ಕೀರ್ತಿವಂತನಾಗ ಬೇಕಾದರೆ ನ್ಯಾಯ ಬದ್ಧ ತೀರ್ಪು ನೀಡಬೇಕು. ಒಂದು ವೇಳೆ ಹಾಗೆ ಮಾಡದೆ ಪುತ್ರ ವಾತ್ಸಲ್ಯ ತೋರಿಸಿ ನ್ಯಾಯ ಹೋಗಿ ಅನ್ಯಾಯವಾದರೆ, ಮಾತು ತಪ್ಪಿದ ರಾಜನ ರಾಜ್ಯದಲ್ಲಿ ನೀರೂ ಕುಡಿಯಲಾರೆವು, ಸತ್ಯ ಭ್ರಷ್ಟನಾದ ನಿನ್ನ ಆಸ್ಥಾನದಲ್ಲೂ ಉಳಿಯಲಾರೆವು. ಪುರ ತೊರೆದು ರಾಜ್ಯದಿಂದ ಹೊರ ಹೋಗುತ್ತೇವೆ” ಎಂಬ ಬೆದರಿಕೆಯನ್ನು ಹಾಕಿದರು.

ಆಗ ಮಂತ್ರಿಗಳು ಪುರೋಹಿತರನ್ನು ಆಕ್ಷೇಪಿಸಲು ಎದ್ದು ನಿಂತಾಗ, ಸುಧನ್ವನು ತಡೆದು “ಮಾನ್ಯ ಮಂತ್ರಿವರ್ಯರೇ! ನೀವು ತೋರುತ್ತಿರುವ ಪ್ರೀತಿ, ನೀತಿ, ವಿಶ್ವಾಸಕ್ಕೆ ಕೃತಜ್ಞನಾಗಿದ್ದೇನೆ. ಮಂತ್ರಿಗಳೇ ನೀವು ಅಳುಕದಿರಿ, ಅಂಜದಿರಿ. ಈ ಕಾಯ ನಶ್ವರವಾದುದು. ರಣದಲ್ಲಿ ನರನಾರಾಯಣರ ಅಂಬುಗಳಿಗೆ ಆಹುತಿಯಾಗಿ ನಾಶವಾಗ ಬೇಕಿತ್ತು. ಆದರೆ ಅದಕ್ಕೂ ಮೊದಲು ಇಲ್ಲಿ ನನ್ನನ್ನು ಸಾಕಿ ಸಲಹಿದ ಜನಕನ ಸತ್ಯ ಪ್ರತಿಜ್ಞೆಯ ಪಾಲನೆಗೆ ಸಮರ್ಪಿತವಾಗುವುದಾದರೆ ಧನ್ಯತಾಭಾವ ನನಗಿದೆ. ಸರ್ವಂತರ್ಯಾಮಿ ಶ್ರೀಹರಿ ಸಕಲವನ್ನೂ ಬಲ್ಲವನು. ಆತನ ಇಚ್ಚೆ ಏನಿದೆಯೋ ಅದು ಆಗಲೆ ಬೇಕು. ಹಾಗಾಗಿ ಎಲ್ಲಿ ಏನಾದರೂ ಮುಕ್ತಿ ಪ್ರದಾಯಕನಾದ ದೇವ ಮೆಚ್ಚಿದರೆ ಅದು ನನಗೆ ಪರಮೋಚ್ಚವಾದುದು. ನೀವು ಆಜ್ಞಾಪಾಲಕರಾಗಿ ಮುನ್ನಡೆಯಿರಿ. ಯಾವುದೆ ವ್ಯಥೆಗೊಳಗಾಗಬೇಡಿ. ಸರ್ವವನ್ನೂ ಹರಿಚಿತ್ತಕ್ಕೆ ಸಮರ್ಪಿಸಿದ್ದೇನೆ” ಎಂದು ಬೇಡಿಕೊಂಡನು.

ಮಂತ್ರಿಗಳಿಗೆ ಅನ್ಯ ಮಾರ್ಗವಿಲ್ಲದೆ ಲಯಕರ್ತ ಪರಶಿವನನ್ನು ನೆನೆದು ಕರುಣೆದೋರಿ ಕಾಪಾಡುವಂತೆಯೂ, ಶ್ರೀಹರಿಯನ್ನು ಸ್ಮರಿಸಿ ಪಾಲಿಸಿ ಪೊರೆಯುವಂತೆಯೂ ಮನಸಾರೆ ಬೇಡಿಕೊಂಡರು. ಸುಧನ್ವನ ಬಳಿ ಬಂದು “ಕುಮಾರಾ! ದೇವರು ಯಾರಿಗೂ ಅನ್ಯಾಯ ಮಾಡಿದ್ದಿಲ್ಲ, ನ್ಯಾಯ ಅನ್ಯಾಯದ ತೀರ್ಮಾನ ಜಗದ್ರಕ್ಷಕರಾದ ದೇವರು ಮಾಡುವಂತಾಗಲಿ” ಎಂದು ಹೇಳಿ “ಯಾರಲ್ಲಿ, ಸುಧನ್ವನನ್ನು ಎತ್ತಿ ರಾಜಾಜ್ಞೆಯಂತೆ ತಕಪಕನೆ ಕುದಿಯುತ್ತಿರುವ ತೈಲಕಟಾಹಕ್ಕೆ ಎತ್ತಿ ಹಾಕಿರಿ” ಎಂಬಂತೆ ಅಪ್ಪಣೆ ನೀಡಿದರು.

ರಕ್ಷಾ ಭಟರು ಬಂದು ಸುಧನ್ವನ ರಟ್ಟೆಗಳನ್ನು ಕಟ್ಟಿದ್ದ ಸರಪಳಿ ಬಿಗಿದು, ಕಾಲುಗಳನ್ನೂ ಕಟ್ಟಿ ಹಾಕಿದರು. ಸುಧನ್ವ ಕಟ್ಟಿರುವಲ್ಲಿಂದಲೆ ಕರಗಳೆರಡನ್ನೂ ಜೋಡಿಸಿ ಕೈ ಮುಗಿದು, ಕಣ್ಮುಚ್ಚಿ ನಿಂತನು. ನೋಡ ನೋಡುತ್ತಿದ್ದಂತೆಯೆ ಕಟ್ಟು ಮಸ್ತಾದ ಬಲುಭಟರು ಸುಧನ್ವನನ್ನು ಎತ್ತಿ ಕುದಿಗುಳ್ಳೆಗಳು ಏಳುತ್ತಿದ್ದ ತೈಲ ಕಟಾಹಕ್ಕೆ ಎಸೆದರು.

ಮುಂದುವರಿಯುವುದು…

spot_imgspot_img
spot_imgspot_img
spot_imgspot_img
spot_imgspot_img
spot_imgspot_img
spot_imgspot_img
spot_imgspot_img
spot_imgspot_img
spot_imgspot_img
spot_imgspot_img
spot_imgspot_img
spot_imgspot_img
spot_imgspot_img
spot_imgspot_img
spot_imgspot_img
spot_imgspot_img
spot_imgspot_img
spot_imgspot_img
spot_imgspot_img
RELATED ARTICLES

LEAVE A REPLY

Please enter your comment!
Please enter your name here

- Advertisment -
Google search engine

Most Popular

Recent Comments

You cannot copy content of this page