25 C
Udupi
Friday, July 17, 2026
spot_img
spot_img
HomeBlogಮಹಾಭಾರತ

ಮಹಾಭಾರತ

ಭಾಗ 583

ಭರತೇಶ ಶೆಟ್ಟಿ,ಎಕ್ಕಾರು

ಮಯೂರಧ್ವಜನ ಪ್ರಾಮಾಣಿಕತೆ, ಭಕ್ತಿ ಪಾರಮ್ಯವನ್ನು ಕಂಡು ಮನಸಾರೆ ಮೆಚ್ಚಿದ ವೃದ್ಧ ಬ್ರಾಹ್ಮಣನು ಎದ್ದು ದಾನ ಮಂಟಪಕ್ಕೆ ಹೋಗಿ ಶರೀರವನ್ನು ಸಿಗಿಯಲು ಸಿದ್ಧರಾಗಿ ಗರಗಸವನ್ನೆತ್ತಿಕೊಳ್ಳುತ್ತಿದ್ದ ತಾಮ್ರಧ್ವಜ ಮತ್ತು ರಾಣಿ ಕುಮುದ್ವತಿಯನ್ನು ತಡೆದು ನಿಲ್ಲಿಸಿದರು. ಮಯೂರಧ್ವಜನ ಸಮೀಪಕ್ಕೆ ಹೋಗಿ ಅವನ ತಲೆಯನ್ನು ಎರಡೂ ಕೈಗಳಿಂದ ಒತ್ತಿ ನೇವರಿಸಿ ಪೂಸಿದನು. ಸೀಳಲ್ಪಟ್ಟಿದ್ದ ಶೀರ ಮೊದಲಿದ್ದಂತೆ ಸೇರಿಕೊಂಡಿತು. ಆ ಕಂಬಗೆಳೆಡೆಯಿಂದ ರಾಜನನ್ನು ತಾನೇ ಕೈ ಹಿಡಿದು ಹೊರ ಕರೆ ತಂದನು. ಮಯೂರಧ್ವಜನನ್ನು ಬಿಗಿದಪ್ಪಿ “ಮಹಾರಾಜಾ ಮೆಚ್ಚಿದೆನು, ಮೆಚ್ಚಿದೆನು… ಮನಸಾರೆ ಮೆಚ್ಚಿದೆನು” ಎಂದು ಹೇಳುತ್ತಾ ಬೆನ್ನು ತಟ್ಟಿದನು. ವೃದ್ಧ ಬ್ರಾಹ್ಮಣನ ಅಪ್ಪುಗೆಯಲ್ಲಿ ಮಯೂರಧ್ವಜನಿಗೇನೋ ಒಂದು ಅವ್ಯಕ್ತ ಹಿತ, ಸುಖ ಅನುಭವವಾಗತೊಡಗಿತು. ಹಾಗೆಯೇ ಕಣ್ಮುಚ್ಚಿ ವೃದ್ಧ ಬ್ರಾಹ್ಮಣನ ಭುಜದ ಮೇಲೆ ತಲೆಯಿರಿಸಿ ಕಣ್ಮುಚ್ಚಿದರೆ ಕೃಷ್ಣ ಪರಮಾತ್ಮನ ದರುಶನವಾಯಿತು. ಈ ವರೆಗೆ ಗುಡಿಯೊಳಗೆ ಮೂರ್ತಿಯಾಗಿ, ಅಂತರಂಗದ ಆತ್ಮದೇಗುಲದಲ್ಲೂ ಪ್ರತಿಷ್ಠಾಪನೆಗೊಂಡು ನಿತ್ಯ ಪೂಜೆ, ಅನು ಕ್ಷಣದ ಆರಾಧನೆ ಕೈಗೊಳ್ಳುತ್ತಿದ್ದ ದೇವರು ಕಾಣಿಸಿಕೊಂಡಾಗ ಮಯೂರಧ್ವಜನಿಗೆ ಪರಮಾನಂದವೇ ಪರಮಾನಂದ. ಕಣ್ದೆರೆದು ನೋಡಿದರೆ ಎಲ್ಲಿ ಮಾಯವಾಗುವನೋ ಎಂದು ಹಾಗೆಯೇ ಕಣ್ಮುಚ್ಚಿ ಸಚ್ಚಿದಾನಂದನ ಸತ್ಸ್ವರೂಪವನ್ನು ಆಸ್ವಾದಿಸುತ್ತಾ ಮೈಮರೆತನು. ವೃದ್ಧ ಬ್ರಾಹ್ಮಣ ಮಯೂರಧ್ವಜನ ಬೆನ್ನ ಮೇಲಿಂದ ಕೈ ತೆಗೆದು ಭುಜವನ್ನಾವರಿಸಿ ಹಿಡಿದು ತನ್ನೆದುರು ಅಭಿಮುಖವಾಗಿ ನಿಲ್ಲಿಸಿದಾಗ ಮಯೂರಧ್ವಜನ ಕಣ್ಣೊಳಗಿದ್ದ ಕೃಷ್ಣ ಮಾಯವಾದನು. ಗಲಿಬಿಲಿಗೊಂಡು ಎಚ್ಚೆತ್ತು ಕಣ್ತೆರೆದು ನೋಡಿದರೆ ದೇವರು ತನ್ನ ಭುಜವನ್ನು ಹಿಡಿದು ಎದುರಲ್ಲೇ ನಿಂತಿದ್ದಾನೆ. ಕಣ್ಣೆದುರು ತನ್ನನ್ನೇ ಹಿಡಿದು ನಿಂತಿರುವ ಶ್ರೀಕೃಷ್ಣನ ಕಂಗೊಳಿಸುವ ದಿವ್ಯರೂಪವನ್ನು ನೋಡಿದಾಗ ಮಯೂರಧ್ವಜನಿಗಿದು ಕನಸೋ ನನಸೋ ಎಂಬುವುದೇ ಅರಿದಾಯಿತು. ಆ ಸಮಯ ಸುತ್ತ ನೆರೆದಿದ್ದ ಪುರೋಹಿತರು, ತಾಮ್ರಧ್ವಜ, ಕುಮುದ್ವತಿ, ಪ್ರಜಾಪರಿವಾರದವರೆಲ್ಲ “ಜಯ ಜಯಾ! ಹರೇ ಕೃಷ್ಣಾ” ಎಂದು ಜಯಕಾರ ಕೂಗುತ್ತಿದ್ದಾರೆ. ಎಲ್ಲೆಲ್ಲಿ ನಿಂತಿದ್ದಾರೋ ಅಲ್ಲೇ ಭಾವುಕರಾಗಿ ಪ್ರದಕ್ಷಿಣೆಗೈಯುತ್ತಾ, ಅಡ್ಡ ಬಿದ್ದು ಸಾಷ್ಟಾಂಗ ಪ್ರಣಾಮಗಳನ್ನು ಅರ್ಪಿಸುತ್ತಿದ್ದಾರೆ. ಪುರೋಹಿತರು, ಬ್ರಾಹ್ಮಣ ವರ್ಗದವರೆಲ್ಲ ದಿವ್ಯ ಮಂತ್ರಘೋಷಗಳಿಂದ ಸ್ತುತಿ ಮಾಡಿದರೆ, ಉಳಿದವರು ತಮಗೆ ತಿಳಿದಿರುವಂತೆ ಕೃಷ್ಣನನ್ನು ಸ್ತೋತ್ರ ಮಾಡತೊಡಗಿದ್ದಾರೆ. ಎಲ್ಲೆಡೆಯಿಂದಲೂ ಜಯಘೋಷ, ಸ್ತುತಿ ಸ್ತೋತ್ರಗಳು, ಅಲ್ಲಿ ಸೇರಿದವರ ಪ್ರಾರ್ಥನೆ, ಭಕ್ತಿ ಪರವಶತೆಯ ಭಾವಾಭಿವ್ಯಕ್ತಿಯನ್ನು ಕಂಡಾಗ ಮಯೂರಧ್ವಜನಿಗೆ ಇದು ಕನಸಲ್ಲ ನನಸು ಎಂದರ್ಥವಾಯಿತು. ಇಷ್ಟಾಗುವಾಗ ಶಿಷ್ಯನ ರೂಪದಲ್ಲಿದ್ದ ಅರ್ಜುನನೂ ನಿಜರೂಪದಲ್ಲೇ ಕಾಣಿಸಿಕೊಂಡನು. ಕೃಷ್ಣನ ಒತ್ತಿನಲ್ಲೇ ಬಂದು ನಿಂತು ಮಂದಸ್ಮಿತನಾದನು. ಯಾಗಶಾಲೆಗೆ ಬಂದವರು, ದಾನ ಬೇಡಿದವರು ಕೇವಲ ಗುರು ಶಿಷ್ಯರಲ್ಲ. ಅವರೇ ಕೃಷ್ಣಾರ್ಜುನರು ಎಂಬ ಸತ್ಯ ಎಲ್ಲರಿಗೂ ಪ್ರಕಟವಾಯಿತು.

ಮಯೂರಧ್ವಜ ಒಮ್ಮೆ ನಡೆದುದೆಲ್ಲವನ್ನೂ ಸ್ಮರಿಸಿ ಅವಲೋಕಿಸುತ್ತಾ ಬ್ರಾಹ್ಮಣರು ಬಂದು ಹರಸಿದ್ದಲ್ಲಿಂದ, ದಾನ ಬೇಡುವಲ್ಲಿ ಹೇಳಿದ ಕಾರಣ, ನಂತರ ನಡೆದ ಸಕಲ ಘಟನೆಗಳನ್ನೂ ನೆನೆದು, ಕಂಬಗಳೆಡೆಯಿಂದ ನನ್ನನ್ನು ಹೊರತಂದು ಬಿಗಿದಪ್ಪಿ ಆಲಂಗಿಸಿದವರೆಗಿನ ಪೂರ್ಣ ವೃತ್ತಾಂತವನ್ನು ಸೂಕ್ಷ್ಮವಾಗಿ ತರ್ಕಿಸಿದ. ದೇವರು ಭಕ್ತನಾದ ನನ್ನೊಡನೆ ನಾಟಕವಾಡಿ ಪರೀಕ್ಷಿಸಿದನೇ? ಎಂದು ಯೋಚನೆಯಲ್ಲಿ ಮುಳುಗಿ ತೆರೆದ ಕಣ್ಣೆವೆ ಮುಚ್ಚದೆ ಮಗ್ನನಾಗಿ ಕೃಷ್ಣನ ಮುಖವನ್ನೇ ನೋಡುತ್ತಾ ತನ್ಮಯನಾಗಿ ನಿಂತು ಬಿಟ್ಟಿದ್ದಾನೆ.

ತನ್ನನ್ನೇ ತದೇಕ ದೃಷ್ಟಿಯಿಂದ ನೋಡುತ್ತಾ ತಲ್ಲೀನನಾಗಿದ್ದ ಮಯೂರಧ್ವಜನನ್ನು ಎಚ್ಚರಿಸಿ “ಮಹಾರಾಜಾ” ಎಂದು ಶ್ರೀಕೃಷ್ಣ ಕರೆದಾಗ ಆ ಧ್ವನಿ ಕರ್ಣಾನಂದಕರವಾಗಿ ಅಮೃತಸುಧೆಯೇ ಕಿವಿಯೊಳಗೆ ಹೊಕ್ಕಂತಾಯಿತು. “ಸ್ವಾಮೀ! ಏನೆಂದು ಕರೆದೆ! ನಾನು ಮಹಾರಾಜನೇ? ನಿನಗೂ ನಾನು ಮಹಾರಾಜನೇ? ಲೋಕ ಲೋಕಗಳ ಪಾಲಕನಾದ ನಿನ್ನ ಮೇಲೂ ನನ್ನ ಅಧಿಪತ್ಯವಿದೆಯೇ? ಸ್ವಾಮೀ ಓರ್ವ ಕೇವಲ ಭಕ್ತ ಮಾತ್ರನಾದ ನಾನು ಈ ತುಂಡು ಭೂಮಿಯೊಳಗೆ, ಇಲ್ಲಿ ನಿವಾಸಿಗಳಾದ ಜನರ ಸೇವೆಗೈಯುವ ಅವಕಾಶ ಒದಗಿದ್ದರೆ ಅದು ನಿನ್ನ ಅನುಗ್ರಹದಿಂದ. ಆ ಭಾಗ್ಯದಿಂದಲೇ ಈ ರತ್ನಪುರದಲ್ಲಿ ಅರಸ ಎಂಬ ಸ್ಥಾನಮಾನ ನನ್ನ ಪಾಲಿಗೊದಗಿದೆ ಬಿಟ್ಟರೆ, ನಾನು ಯಾವ ರಾಜನು ಸ್ವಾಮೀ? ನಿನ್ನ ಇಚ್ಚೆಯನ್ನು ಮೀರಿ ಏನಾದರು ಆಗುವುದುಂಟೇ? ಎಂದು ಭಾವೋದ್ವೇಗದಿಂದ ಮನಸ್ಸಿನ ಭಾವನೆಗಳನ್ನು ಹೊರಹಾಕಿದ.

ಆಗ ಶ್ರೀಕೃಷ್ಣ ” ಹೌದು ಮಹಾರಾಜ ಮಯೂರಧ್ವಜ. ನೀನು ಮಹಾರಾಜನೇ ಅದೂ ಕೇವಲ ರತ್ನಪುರದ ಈ ಸಾಮ್ರಾಜ್ಯಕ್ಕೆ ಮಾತ್ರ ಸೀಮಿತವಾಗಿ ಅಲ್ಲ‌. ನನ್ನ ಹೃದಯ ಸಾಮ್ರಾಜ್ಯದಲ್ಲೂ ನೀನು ಮಹಾರಾಜನೇ ಆಗಿರುವೆ. ಭಕ್ತವತ್ಸಲನಾಗಿ ಭಕ್ತರಾಧೀನನಾಗುವುದೇ ನನಗೆ ನಿಯಮ. ಈಗ ನಾನು ನಿನ್ನ ಅಧೀನನೇ ಆಗಿದ್ದೇನೆ. ಓರ್ವ ಚಿನಿವಾರ ಸುವರ್ಣ ಲೋಹವನ್ನು ಸ್ಪುಟಕ್ಕಿಟ್ಟು ಸುಟ್ಟು ಕರಗಿಸಿದಾಗ ಹೇಗೆ ಅಪರಂಜಿಯಾಗುತ್ತದೋ ಹಾಗೆಯೇ ನಿನ್ನ ಸತ್ವ ಪರೀಕ್ಷೆಯಲ್ಲಿ ಎಳ್ಳಿನಿತೂ ಲೋಪ ದೋಷವಿರದ, ಸಚ್ಚಾರಿತ್ರ್ಯದ, ನಿರ್ಮಲ ಭಕ್ತಿಯ ಪರಿಶುದ್ಧ ವ್ಯಕ್ತಿತ್ವದ, ಸತ್ಯಸಂಧನೂ, ನಿಸ್ವಾರ್ಥಿಯೂ, ಧರ್ಮನಿಷ್ಠನೂ ಆಗಿ ಲೋಕ ಮುಖಕ್ಕೆ ಆದರ್ಶಪ್ರಾಯನಾಗಿರುವೆ. ನೀನೇನು, ನಿನ್ನ ಸುಗುಣ ವಿಶೇಷಗಳೇನು? ನಿನ್ನ ಸಂಸಾರದ ಸಂಸ್ಕಾರ ಬಲವೆಷ್ಟು ಎಂದು ಪ್ರಕಟಗೊಂಡಿದೆ. ನಿನ್ನ ಮಗನೇನು ಸಾಮಾನ್ಯನೇ? ಪುರುಷ ಸಿಂಹ ಆತ. ರಣಾಂಗಣದಲ್ಲಿ ಧನುರ್ಧರ ಧನಂಜಯ – ಕಲಿ ಪಾರ್ಥನಿಗೆ ಸಮದಂಡಿಯಾಗಿ ಕಾದಾಡಿ, ಸ್ವಯಂ ನನಗೂ ಎದುರಾಗಿ ಪೌರುಷ ಮೆರೆದು ನಮ್ಮೀರ್ವರನ್ನೂ ಹಿಮ್ಮೆಟ್ಟಿಸಿ ಮೆರೆದ ತಾಮ್ರಧ್ವಜ ನಿಜ ವೀರಾಗ್ರಣಿಯೇ ಹೌದು. ಸತ್ಯ, ನ್ಯಾಯ, ಧರ್ಮದ ಪಥದಲ್ಲೇ ಸಾಗುತ್ತಾ ಭಕ್ತಿಯನ್ನೇ ಶಕ್ತಿಯನ್ನಾಗಿಸಿ ಅತಿಬಲನಾಗಿರುವ ಮಗನನ್ನು ಪಡೆದ ನೀನೇ ಧನ್ಯ ಮಯೂರಧ್ವಜ. ಅಷ್ಟೆಯೋ? ಸ್ವಂತ ಪತಿಯ ಶರೀರವನ್ನೇ ಕೊಯ್ಯುವ ಸ್ಥಿತಿ ಬಂದೊದಗಿದರೂ ಧರ್ಮ ಪಾಲನೆಗಾಗಿ ಒಂದಿನಿತೂ ಅಳುಕದೆ ಧೃಡ ಮನಸ್ಕಳಾಗಿ, ನಿಷ್ಕಾಮ ಕರ್ಮಿಯಾಗಿ ಕ್ರಿಯಾ ಶುದ್ಧಿಯಿಂದ ನಾನು ಮಾಡುತ್ತಿರು ಕರ್ಮ ಭಗವದರ್ಪಣವಾಗಲಿ ಎಂದು ಶುದ್ಧಾಂತಃಕರಣದಿಂದ ಒತ್ತರಿಸಿ ಬರುತ್ತಿದ್ದ ದುಃಖ, ನಿಜ ಪ್ರೀತಿಯ ಸೆಳೆತ, ಪತಿಯೆಂಬ ಮೋಹ, ಸಂಸಾರದ ಬಾಂಧವ್ಯದ ಬಂಧನ ಇವೆಲ್ಲವನ್ನೂ ಮೀರಿ ನಿಂತವಳು ನಿನ್ನ ಪತ್ನಿ. ಪತಿಯ ವಾಕ್ಯ ಪರಿಪಾಲನೆಯಲ್ಲಿ ನಿನ್ನ ಮನದ ಪ್ರತಿರೂಪವೇ ಆದ ಮಹಾರಾಣಿ ಕುಮುದ್ವತಿಯ ಧರ್ಮಬುದ್ಧಿಗೆ, ಭಕ್ತಿಭಾವಕ್ಕೆ ನಾನೇ ಮನಸೋತಿದ್ದೇನೆ ಮಹಾರಾಜ. ಇನ್ನು ನೀನು – ಸರ್ವಾಧಿಕಾರವಿದ್ದರೂ, ಶಾಸನ ವಿಧಿಸುವ ಶಾಸಕನೇ ಆಗಿದ್ದರೂ ಬಲ, ಸಂಪತ್ತು, ಪದವಿ ಎಲ್ಲವೂ ನಿನ್ನದಾಗಿದ್ದರೂ ಯಾವುದನ್ನೂ ಪರಿಭಾವಿಸದೆ ಸ್ವಯಂ ತನ್ನ ಮರಣವೇ ಆದರೂ ಆಗಲಿ, ಧರ್ಮ ಅಧರ್ಮವಾಗಬಾರದು, ವಚನ ಭ್ರಷ್ಟನಾಗಬಾರದು ಎಂದು ಸ್ವಚ್ಚ ಮನಸ್ಸಿನಿಂದ, ಧೃಡ ಭಕ್ತಿಯಿಂದ ನುಡಿದಂತೆ ನಡೆದುಕೊಂಡ ನಿನ್ನ ಚಾರಿತ್ರ್ಯಕ್ಕೆ ನಾನೇ ಶರಣಾಗಿದ್ದೇನೆ ಮಹಾರಾಜಾ!… ಮಯೂರಧ್ವಜಾ, ನಿನ್ನ ಧೃಡತೆಯನ್ನು ನಾನು ಮೊದಲೇ ಅರಿತಿದ್ದೆ. ಆದರೂ ಅದರ ಪ್ರಮಾಣವೆಷ್ಟಿದೆ ಎಂಬ ಪರೀಕ್ಷೆ ಮಾಡುವ ಮನಸ್ಸು ನನ್ನದಾಯಿತು. ಆದರೆ ನೀನು ಕೊನೆ ಕ್ಷಣದವರೆಗೂ ವಿಚಲಿತನಾಗದೆ, ಎಲ್ಲೂ ಕಿಂಚಿತ್ ಲೋಪದೋಷಕ್ಕೂ ಅವಕಾಶ ನೀಡದೆ ಪರಿಪೂರ್ಣತೆಯಿಂದಲೇ ಗೆದ್ದು ನನ್ನ ಹೃದಯ ಸಾಮ್ರಾಟನಾಗಿಬಿಟ್ಟೆ. ಬ್ರಾಹ್ಮಣ ರೂಪದಿಂದ ಬಂದು ನನ್ನ ಮಗನನ್ನು ಸಿಂಹ ಹಿಡಿದಿದೆ, ಬಂಧ ಮುಕ್ತಿಗಾಗಿ ಅರಸನಾದ ನಿನ್ನ ಅರ್ಧಶರೀರ ಕೇಳಿದೆ, ನಿನ್ನ ದೇಹಾರ್ಧವನ್ನಿತ್ತು ರಕ್ಷಿಸಬೇಕೆಂದು ದಾನ ಬೇಡಿದೆ. ಯಾರೋ ಒಬ್ಬ ನಿರ್ಗತಿಕ ಬ್ರಾಹ್ಮಣ ಏನೋ ಹುಚ್ಚು ಹುಚ್ಚಾಗಿ ಪ್ರಲಾಪ ಮಾಡುತ್ತಿದ್ದಾನೆ ಎಂಬಂತೆ ತಿರಸ್ಕರಿಸಬಹುದಿತ್ತು. ಆದರೆ ಅಂತಹ ಅಚಾತುರ್ಯ ನಿನ್ನಿಂದಾಗಲಿಲ್ಲ. ಬ್ರಾಹ್ಮಣ್ಯಕ್ಕೆ ಗೌರವ ತೋರಿಸಿ ತ್ಯಾಗಶೀಲನಾಗಿ ಬೇಡಿದ ದಾನ ನೀಡಲು ನಿನ್ನ ಶರೀರವನ್ನೇ ಸೀಳಿಸಿಕೊಂಡೆ. ಸಾಕು ಮಹಾರಾಜಾ ಸಾಕು! ಇನ್ನು ನಿನ್ನಲ್ಲಿ ಪರೀಕ್ಷಿಸಲು ನನಗೇನೂ ಉಳಿದಿಲ್ಲ. ಭಕ್ತಾಗ್ರಣಿಯಾದ ನಿನ್ನ ನಿಷ್ಠೆಯನ್ನು ಬಹುವಾಗಿ ಮೆಚ್ಚಿಕೊಂಡಿದ್ದೇನೆ. ಈ ಪರೀಕ್ಷೆಯ ಪರಿಣಾಮವಾಗಿ ನನ್ನ ಭಕ್ತ ಎಷ್ಟು? ಏನು? ಹೇಗೆ? ಎಂಬ ವಿಚಾರ ಜಗದಗಲಕ್ಕೂ ವೇದ್ಯ ವಿಚಾರವಾಯಿತು. ನೀನು ಕೃತಕೃತ್ಯನಾದೆ ಮಯೂರಧ್ವಜಾ… ಭಕ್ತರತ್ನನೇ ಹೌದು. ಅರಸನೇ ಇನ್ನು ತಡ ಮಾಡದಿರು. ನೀನು ಕೈಗೊಂಡಿರುವ ಯಜ್ಞ ಪೂರ್ಣಾಹುತಿಯಾಗಬೇಕು. ವಿಧಿವತ್ತಾಗಿ ಪುಣ್ಯಕಾರ್ಯವನ್ನು ಪೂರೈಸಿ ಪುಣ್ಯಾತ್ಮನಾಗು‌. ನಿನಗೆ, ಸಂಸಾರಕ್ಕೆ ಸಮಗ್ರ ಸಾಮ್ರಾಜ್ಯಕ್ಕೆ ಸರ್ವ ದೇವಾನುದೇವತೆಗಳ ಅನುಗ್ರಹ ಪ್ರಾಪ್ತಿಯಾಗಲಿ” ಎಂದು ಹರಸಿ ಹಾರೈಸಿದನು.

ಮಯೂರಧ್ವಜನು ಶ್ರೀಕೃಷ್ಣ ಪರಮಾತ್ಮ ತನ್ನ ಆರಾಧ್ಯನ ಬಾಯಿಯಿಂದ ಉದುರುತ್ತಿದ್ದ ಒಂದೊಂದು ನುಡಿಮುತ್ತುಗಳ ಅಕ್ಷರ ಅಕ್ಷರಗಳನ್ನೂ ಪೂರ್ಣ ಪ್ರಮಾಣದಲ್ಲಿ ಆಸ್ವಾದಿಸುತ್ತಾ, ತನ್ನ ದೇವರೇ ಒಲಿದು ನನ್ನ ಯಾಗಶಾಲೆಗೆ ಬಂದು ತನ್ನ ಸಂಸಾರ, ಪ್ರಜಾಪರಿವಾರದವರಿಗೆಲ್ಲಾ ದರುಶನವಿತ್ತು ಹರಸಿದನಲ್ಲಾ. ಇದಕ್ಕಿಂತ ಮಿಗಿಲಾದುದು ನನಗಿನ್ನೇನು ಸಿಗಲು ಸಾಧ್ಯ! ಎಂಬಂತೆ ಪುನೀತ ಭಾವಪರವಶನಾದನು. “ವಾಸುದೇವಾ! ನನ್ನ ಜೀವಮಾನವಿಡೀ ನಿನ್ನನ್ನು ಒಮ್ಮೆ ಕಣ್ಣಾರೆ ಕಾಣಬೇಕೆಂಬ ಬಹುದೊಡ್ಡ ಆಸೆ ಹೊತ್ತು ಬದುಕುತ್ತಿದ್ದೆ. ಆ ನನ್ನ ಮಹದಾಸೆ ಈವರೆಗೂ ಕೈಗೂಡಲಿಲ್ಲವಲ್ಲಾ ಎಂಬ ಏಕೈಕ ಕೊರಗು ಬಿಟ್ಟರೆ ಬೇರೆ ಯಾವ ಸಮಸ್ಯೆಗೂ ನಾನು ತಲೆಗೆಡಿಸಿಕೊಂಡವನಲ್ಲ. ನನ್ನ ಈ ಜನ್ಮದ ಪುಣ್ಯದ ಬಲ ಖಂಡಿತಾ ಸಾಲದು. ಜನ್ಮ ಜನ್ಮಾಂತರದ ಪುಣ್ಯದ ಬಲದ ಜೊತೆಗೆ, ಹಿರಿಯ ಪಿತೃಗಳು ಸಂಪಾದಿಸಿದ ಸತ್ಕರ್ಮ ಫಲ, ನಮ್ಮ ಪ್ರಜಾ ಪರಿವಾರದ ನಿಷ್ಠೆಯ ಶಕ್ತಿ ಎಲ್ಲವೂ ಕ್ರೋಢೀಕರಣಗೊಂಡ ಕಾರಣವೇ ದೇವರ ಪರೀಕ್ಷೆಯಲ್ಲಿ ರತ್ನಪುರದ ಪ್ರತಿನಿಧಿಯಾದ ನಾನು ಉತ್ತೀರ್ಣನಾದೆ. ಎಲ್ಲಕ್ಕಿಂತಲೂ ಮಿಗಿಲಾಗಿ ಪರೀಕ್ಷಿಸಲು ಬಂದ ನಿನ್ನ ಸಂರಕ್ಷಣೆಯೇ ನಮ್ಮನ್ನು ಕಾಪಾಡುತ್ತಿರುವುದು ಎಂಬುವುದೇ ಪರಮ ಸತ್ಯ. ದೇವರೇ, ನಾನು ಬಯಸಿದ್ದು ನನಗೊಮ್ಮೆ ನಿನ್ನನ್ನು ಕಾಣಬೇಕೆಂದು. ನೀ‌ನು ಕರುಣಾಸಾಗರನಲ್ಲವೇ ಸ್ವಾಮೀ! ಭಕ್ತವತ್ಸಲನಲ್ಲವೇ ದೇವಾ! ನೀನು ಪರೀಕ್ಷಿಸಿದೆಯೋ ಇಲ್ಲವೋ ಎಲ್ಲಕ್ಕಿಂತ ಮಿಗಿಲಾಗಿ ರತ್ನಪುರದ ಈ ಮಣ್ಣಿನಲ್ಲಿ ಎಲ್ಲೆಡೆ ನಡೆದಾಡಿದೆ. ನಮ್ಮ ಸಾಮ್ರಾಜ್ಯವೇ ಪಾವನವಾಯಿತು. ಪ್ರಜಾಪರಿವಾರದವರಿಗೆಲ್ಲಾ ಪ್ರತ್ಯಕ್ಷ ದರುಶನ ನೀಡಿದೆ. ನನ್ನ ಸಂಸಾರದವರನ್ನೂ ಕೊಂಡಾಡಿ ಅನುಗ್ರಹಿಸಿದೆ. ನಾನು ಬಯಸಿದ್ದು ನನಗೊಬ್ಬನಿಗೆ ನೋಡಬೇಕೆಂದು ಆದರೆ ನೀನೇ ಬಂದು ಸಾರ್ವಜನಿಕ ದಿವ್ಯ ದರುಶನ ಭಾಗ್ಯವನ್ನೇ ಕರುಣಿಸಿದೆ. ಈ ಪರಮ ಸೌಭಾಗ್ಯ ಪಡೆದ ನಾವು ಧನ್ಯರಾದೆವು ದೇವರೇ. ನನಗೀಗ ಯಾವ ಆಸೆಯೂ ಉಳಿದಿಲ್ಲ. ಯಾವ ದೇಶ, ಕೋಶ, ಅಧಿಕಾರ, ಪದವಿ, ಸೇನೆ, ಬೊಕ್ಕಸ ಭಂಡಾರ ಇದ್ಯಾವುದೂ ಬೇಡ. ಯಾಗ ಯಜ್ಞ ಯಾವುದೂ ನನಗಿನ್ನು ಬೇಕಾಗಿಲ್ಲ‌. ನನ್ನ ದೇವರೇ ಬಂದು ನಮ್ಮನ್ನು ಮೆಚ್ಚಿ ಸ್ವೀಕರಿಸಿದ ಮೇಲೆ ಇನ್ಯಾವ ಅನ್ಯ ವಿಚಾರಗಳೂ ನನಗೆ ಬೇಕಾಗಿಲ್ಲ. ಎಲ್ಲವನ್ನೂ ನಿನ್ನ ಪದತಲದಲ್ಲಿ ಸಮರ್ಪಿಸಿದ್ದೇನೆ. ಸರ್ವಸ್ವವೂ ನಿನ್ನದೇ ಕೃಷ್ಣಾ! ನಿನ್ನನ್ನು ಕಾಣುವ, ಕಂಡು ಮಾತಾಡುವ, ಮುಟ್ಟಿ ಆಲಿಂಗಿಸುವ ಯೋಗ ದೊರೆಯಿತಲ್ಲಾ ಸ್ವಾಮಿ ನನ್ನನ್ನು ನಾನೇ ಮಹಾಯೋಗಿ ಎಂದು ತಿಳಿದುಕೊಂಡರೂ ತಪ್ಪಾಗದು‌. ಇದೋ ಅಶ್ವಮೇಧದ ಎರಡೂ ಕುದುರೆಗಳನ್ನು ಬಿಟ್ಟು ಕೊಟ್ಟಿದ್ದೇನೆ. ಧರ್ಮರಾಯನೇ ಅಶ್ವಮೇಧವನ್ನು ಮಾಡಿ ಪೂರೈಸಲಿ. ನಾವು ಪೂರ್ಣ ಸಮರ್ಪಿತರಾದ ಮೇಲೆ ಇನ್ನು ನಿನ್ನ ಸೇವೆಗೈಯುವ ಸೇವಕರಷ್ಟೇ. ನಿನ್ನ ಅಪ್ಪಣೆ ಪಾಲಿಸುತ್ತಾ, ಈ ಧರ್ಮಕಾರ್ಯಕ್ಕೆ ಜೊತೆಯಾಗಿ ಬರುತ್ತೇವೆ. ಶ್ರೀಕೃಷ್ಣ ಪ್ರಸಾದ ನಮ್ಮ ಪಾಲಿಗೊದಗಿದ ಮೇಲೆ ಇನ್ನು ಸಾಧಿಸಬೇಕಾದ ದಿಗ್ವಿಜಯಗಳೇ ನಮಗುಳಿದಿಲ್ಲ‌. ಎಲ್ಲವನ್ನು ಗೆದ್ದಂತಾಗಿದೆ. ನಿನ್ನನ್ನು ನಂಬಿ ಬರುತ್ತಿರುವ ನಮ್ಮ ಕೈ ಹಿಡಿದು ಬಿಡದೆ ರಕ್ಷಿಸುತ್ತಿರು. ನಮಗಷ್ಟೇ ಸಾಕು, ಬೇರೇನೂ ಬೇಕಾಗಿಲ್ಲ‌. ಯಾವ ಆಸೆ ಆಶಯಗಳೂ ಉಳಿದಿಲ್ಲ. ಎಂದು ಪೂರ್ಣ ಶರಣಾಗತನಾಗಿ ಶ್ರೀ ಕೃಷ್ಣನ ಪಾದ ಮೂಲಕ್ಕೆ ಉದ್ದಂಡವಾಗಿ ನಮಸ್ಕರಿಸಿದನು.

ಶ್ರೀ ಕೃಷ್ಣ ಪರಮಾತ್ಮನು ಪ್ರೀತಿಯಿಂದ ಮಯೂರಧ್ವಜನನ್ನು ಎತ್ತಿ ಆಲಿಂಗಿಸಿ “ಹಾಗೆಯೇ ಆಗಲಿ” ಎಂದು ಒಪ್ಪಿ ಸ್ವೀಕರಿಸಿದನು. ಕೆಲದಿನಗಳ ಕಾಲ ರತ್ನ ಪುರದಲ್ಲೇ ಉಳಿದು ಸರ್ವ ಉಪಚಾರ ಸೇವೆಗಳನ್ನು ಸ್ವೀಕರಿಸಿ ಸತ್ಕೃತನಾಗಿ ಸಂಸಾರ, ಪ್ರಜಾಪರಿವಾರವನ್ನೆಲ್ಲ ಹರಸಿ ಹಾರೈಸಿದನು. ರತ್ನಪುರದಲ್ಲಿ ಸಂಭ್ರಮ, ಸಡಗರದಿಂದ ಜಾತ್ರಾ ಮಹೋತ್ಸವವೇ ನಡೆಯಿತು.

ಇದೆಲ್ಲಾ ಆದ ನಂತರ ರತ್ನಪುರದ ಸೇನೆ, ಆಯುಧ ಭಂಡಾರ, ಯಾಗಾಶ್ವ ಸಮೇತ ತಾಮ್ರಧ್ವಜನೂ ಕೃಷ್ಣಾರ್ಜುನರ ಜೊತೆಯಾಗಿ ಅಶ್ವಮೇಧ ದಿಗ್ವಿಜಯಕ್ಕೆ ಹೊರಟನು. ಎರಡೂ ಯಾಗಾಶ್ವಗಳೂ ಜೊತೆಯಾಗಿ ಮುಂದೆ ಸಾಗುತ್ತಿವೆ.

spot_imgspot_img
spot_imgspot_img
spot_imgspot_img
spot_imgspot_img
spot_imgspot_img
spot_imgspot_img
spot_imgspot_img
spot_imgspot_img
spot_imgspot_img
spot_imgspot_img
spot_imgspot_img
spot_imgspot_img
spot_imgspot_img
spot_imgspot_img
spot_imgspot_img
spot_imgspot_img
spot_imgspot_img
spot_imgspot_img
spot_imgspot_img
spot_imgspot_img
spot_imgspot_img
spot_imgspot_img
spot_imgspot_img
spot_imgspot_img
spot_imgspot_img
spot_imgspot_img
spot_imgspot_img
spot_imgspot_img
spot_imgspot_img
spot_imgspot_img
spot_imgspot_img
spot_imgspot_img
spot_imgspot_img
spot_imgspot_img
spot_imgspot_img
spot_imgspot_img
spot_imgspot_img
spot_imgspot_img
spot_imgspot_img
spot_imgspot_img
spot_imgspot_img
spot_imgspot_img
spot_imgspot_img
spot_imgspot_img
RELATED ARTICLES

LEAVE A REPLY

Please enter your comment!
Please enter your name here

- Advertisment -
Google search engine

Most Popular

Recent Comments

You cannot copy content of this page