
ಹೆಬ್ರಿ: ರಾಷ್ಟ್ರೀಯ ಹೆದ್ದಾರಿ 169ಎರ ಹೆಬ್ರಿ-ಪರ್ಕಳ ಹಾಗೂ ಕರಾವಳಿ ಜಂಕ್ಷನ್-ಮಲ್ಪೆ ಮಾರ್ಗದ ರಸ್ತೆ ಅಭಿವೃದ್ಧಿ ಕಾಮಗಾರಿ ಶೇ.90ರಷ್ಟು ಪೂರ್ಣಗೊಂಡಿದ್ದು, ಹೆಬ್ರಿ ಪೇಟೆ ಭಾಗದ ಕಾಮಗಾರಿ ಮುಕ್ತಾಯವಾಗಿದೆ. ಬ್ರಹ್ಮಾವರ-ಹೆಬ್ರಿ ಜಂಕ್ಷನ್‌ನ ಕಾಮಗಾರಿ ಮಾತ್ರ ಬಾಕಿಯಿದೆ ಎಂದು ರಾಷ್ಟ್ರೀಯ ಹೆದ್ದಾರಿ ಅಧಿಕಾರಿಗಳು ತಿಳಿಸಿದ್ದಾರೆ.
ಹೆದ್ದಾರಿ ಕಾಮಗಾರಿ ಸಂಬಂಧ ಹೆಬ್ರಿಯ ಅನಂತ ಪದ್ಮನಾಭ ಸ್ವಾಮಿ ದೇವಸ್ಥಾನದ ಮುಂಭಾಗದಲ್ಲಿರುವ ನಾಲ್ಕು ವಾಣಿಜ್ಯ ಮಳಿಗೆಗಳಿಗೆ ಮಾತ್ರ ಭೂಸ್ವಾಧೀನ ಪ್ರಕ್ರಿಯೆ ಕೈಗೊಳ್ಳಲಾಗಿದ್ದು, ಈ ಕುರಿತು ಈಗಾಗಲೇ ನೋಟಿಸ್ ನೀಡಲಾಗಿದೆ. ದೇವಸ್ಥಾನದ ಕಟ್ಟಡ, ಪರಾಂಗಣ ಅಥವಾ ರಥ ಸಂಚಲನಕ್ಕೆ ಯಾವುದೇ ರೀತಿಯ ಹಾನಿಯಾಗುವುದಿಲ್ಲ ಎಂದು ಅಧಿಕಾರಿಗಳು ಸ್ಪಷ್ಟಪಡಿಸಿದ್ದಾರೆ.
ದೇವಸ್ಥಾನದ ಮುಂಭಾಗದಲ್ಲಿರುವ ವಾಣಿಜ್ಯ ಮಳಿಗೆಗಳಿಗೆ ಸಂಬಂಧಿಸಿದ ಅಗತ್ಯ ದಾಖಲಾತಿಗಳನ್ನು ದೇವಸ್ಥಾನ ಸಮಿತಿ ಸಲ್ಲಿಸಿದ ತಕ್ಷಣ ಭೂ ಪರಿಹಾರವನ್ನು ಪಾವತಿಸಲು ಕ್ರಮ ಕೈಗೊಳ್ಳಲಾಗುವುದು ಎಂದು ರಾಷ್ಟ್ರೀಯ ಹೆದ್ದಾರಿ ಇಲಾಖೆ ತಿಳಿಸಿದೆ.
ರಾಷ್ಟ್ರೀಯ ಹೆದ್ದಾರಿ 169ಎರ ಕಿ.ಮೀ. 51.600ರಿಂದ 76.200ರವರೆಗಿನ ಹೆಬ್ರಿ-ಪರ್ಕಳ ವಿಭಾಗ ಹಾಗೂ ಕಿ.ಮೀ. 85.200ರಿಂದ 88.900ರವರೆಗಿನ ಕರಾವಳಿ ಜಂಕ್ಷನ್-ಮಲ್ಪೆ ವಿಭಾಗದಲ್ಲಿ ರಸ್ತೆ ಅಭಿವೃದ್ಧಿ ಕಾಮಗಾರಿ ಅಂತಿಮ ಹಂತದಲ್ಲಿದ್ದು, ಶೀಘ್ರದಲ್ಲೇ ಉಳಿದ ಕಾಮಗಾರಿಯನ್ನೂ ಪೂರ್ಣಗೊಳಿಸುವ ನಿರೀಕ್ಷೆಯಿದೆ.















































