
ಕಾರ್ಕಳ: ಜುಲೈ 12ರ ಭಾನುವಾರದಂದು ರಾತ್ರಿ ನಗರದ ಶಿವತಿಕರೆ ಸಮೀಪ ಸಂಭವಿಸಿದ ರಸ್ತೆ ಅಪಘಾತದಲ್ಲಿ ಗಂಭೀರವಾಗಿ ಗಾಯಗೊಂಡಿದ್ದ ಕಾರ್ಕಳ ತಾಲೂಕು ಕಚೇರಿಯ ಕಂದಾಯ ನಿರೀಕ್ಷಕರಾದ ಶಿವಪ್ರಸಾದ್ ರಾವ್ (ನಂದಳಿಕೆ) ಅವರು ಚಿಕಿತ್ಸೆ ಫಲಿಸದೆ ಮೃತಪಟ್ಟಿದ್ದಾರೆ.
ಭಾನುವಾರ ಸಂಜೆ ಸುಮಾರು 7.30ರ ವೇಳೆಗೆ ಕಾರ್ಕಳದಿಂದ ಸ್ಕೂಟಿಯಲ್ಲಿ ನಂದಳಿಕೆಯಲ್ಲಿರುವ ತಮ್ಮ ನಿವಾಸದತ್ತ ತೆರಳುತ್ತಿದ್ದ ಶಿವಪ್ರಸಾದ್ ರಾವ್ ಅವರು, ಶಿವತಿಕರೆ ಬಳಿಯ ಪೆಟ್ರೋಲ್ ಬಂಕ್ ಸಮೀಪ ಯೂ-ಟರ್ನ್ ಪಡೆಯಲು ಸೂಚನೆ ನೀಡಿ ವಾಹನ ತಿರುಗಿಸುವ ವೇಳೆ ಹಿಂದಿನಿಂದ ವೇಗವಾಗಿ ಬಂದ ಬೈಕ್ ಸ್ಕೂಟಿಗೆ ಡಿಕ್ಕಿ ಹೊಡೆದಿದೆ. ಡಿಕ್ಕಿಯ ರಭಸಕ್ಕೆ ಅವರು ರಸ್ತೆಗೆ ಬಿದ್ದು ತೀವ್ರ ಗಾಯಗೊಂಡಿದ್ದರು.
ಅಪಘಾತದ ತಕ್ಷಣ ಅವರನ್ನು ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ಕೊಡಿಸಿದ್ದರು. ಆದರೆ ಗಂಭೀರ ಗಾಯಗಳಿಂದಾಗಿ ಚಿಕಿತ್ಸೆ ಫಲಕಾರಿಯಾಗದೆ ಅವರು ಕೊನೆಯುಸಿರೆಳೆದಿದ್ದಾರೆ ಎಂದು ತಿಳಿದುಬಂದಿದೆ.
ಕರ್ತವ್ಯನಿಷ್ಠ ಅಧಿಕಾರಿಯಾಗಿ ಗುರುತಿಸಿಕೊಂಡಿದ್ದ ಶಿವಪ್ರಸಾದ್ ರಾವ್ ಅವರ ಅಗಲಿಕೆಯಿಂದ ಕಂದಾಯ ಇಲಾಖೆಗೆ ಅಪಾರ ನಷ್ಟ ಉಂಟಾಗಿದೆ. ಅವರ ನಿಧನಕ್ಕೆ ತಾಲೂಕು ಕಚೇರಿಯ ಸಿಬ್ಬಂದಿ, ಸಹೋದ್ಯೋಗಿಗಳು ಹಾಗೂ ಸ್ಥಳೀಯ ನಾಗರಿಕರು ತೀವ್ರ ಸಂತಾಪ ವ್ಯಕ್ತಪಡಿಸಿದ್ದಾರೆ.
ಅಂತಿಮ ದರ್ಶನ
ಸಾರ್ವಜನಿಕರು 12:30ಕ್ಕೆ ತಾಲೂಕು ಕಚೇರಿಯಲ್ಲಿ ಮೃತರ ಪಾರ್ಥಿವ ಶರೀರದ ಅಂತಿಮ ದರ್ಶನ ಪಡೆಯಬಹುದೆಂದು ಕಂದಾಯ ಇಲಾಖೆಯವರು ತಿಳಿಸಿದ್ದಾರೆ.















































