
ಬೆಂಗಳೂರು: ರಾಜ್ಯ ಸರ್ಕಾರಿ ನೌಕರರಿಗೆ ಸರ್ಕಾರ ಮಹತ್ವದ ಸೌಲಭ್ಯ ಘೋಷಿಸಿದ್ದು, ಅದೇನೆಂದರೆ 40 ವರ್ಷ ಮೇಲ್ಪಟ್ಟ ನೌಕರರಿಗೆ ಕರ್ನಾಟಕ ಆರೋಗ್ಯ ಸಂಜೀವಿನಿ ಯೋಜನೆ (KASS) ಅಡಿಯಲ್ಲಿ ಪ್ರತಿ ವರ್ಷಕ್ಕೊಮ್ಮೆ ಉಚಿತ ವೈದ್ಯಕೀಯ ತಪಾಸಣೆ ನಡೆಸಲು ಅಧಿಕೃತ ಆದೇಶ ಹೊರಡಿಸಿದೆ.
ಈ ಸೌಲಭ್ಯ ಕೇವಲ ಸರ್ಕಾರಿ ನೌಕರರಿಗೆ ಮಾತ್ರ ಲಭ್ಯವಾಗಲಿದ್ದು, ಕುಟುಂಬ ಸದಸ್ಯರಿಗೆ ಅನ್ವಯಿಸುವುದಿಲ್ಲ. ತಪಾಸಣೆಯನ್ನು ಸರ್ಕಾರಿ ಆಸ್ಪತ್ರೆ ಅಥವಾ ಸ್ವಾಯತ್ತ ವೈದ್ಯಕೀಯ ಸಂಸ್ಥೆಗಳಲ್ಲಿ ಒಂದೇ ಸ್ಥಳದಲ್ಲಿ ಪೂರ್ಣಗೊಳಿಸಬೇಕು.
ತಪಾಸಣೆಗೆ ಪುರುಷರಿಗೆ ಗರಿಷ್ಠ ₹2,000 ಹಾಗೂ ಮಹಿಳೆಯರಿಗೆ ₹2,200 ವೆಚ್ಚವನ್ನು ಸರ್ಕಾರ ಭರಿಸಲಿದೆ. ದೈಹಿಕ ಪರೀಕ್ಷೆ, ರಕ್ತದೊತ್ತಡ, ಹೃದಯ, ಕಣ್ಣು, ಕಿವಿ ಸೇರಿದಂತೆ ವಿವಿಧ ಆರೋಗ್ಯ ತಪಾಸಣೆಗಳು ಒಳಗೊಂಡಿದ್ದು, ಮಹಿಳೆಯರಿಗೆ ಸ್ತನ ಮತ್ತು ಸ್ತ್ರೀರೋಗ ಸಂಬಂಧಿತ ವಿಶೇಷ ಪರೀಕ್ಷೆಗಳಿಗೂ ಅವಕಾಶ ಕಲ್ಪಿಸಲಾಗಿದೆ.


































