ಅಕ್ರಮ ನಿಲ್ಲದಿದ್ದರೆ ರಾಜ್ಯದಲ್ಲಿ ಪಾನ್ ಮಸಾಲಾ-ಗುಟ್ಕಾ ನಿಷೇಧ

ಬೆಂಗಳೂರು: ಪಾನ್ ಮಸಾಲಾ, ಗುಟ್ಕಾ ಹಾಗೂ ಅಡಿಕೆ ಉತ್ಪನ್ನಗಳಲ್ಲಿ ಮಾದಕ ವಸ್ತುಗಳನ್ನು ಬೆರೆಸಿ ಮಾರಾಟ ಮಾಡುತ್ತಿರುವ ಬಗ್ಗೆ ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ತೀವ್ರ ಕಳವಳ ವ್ಯಕ್ತಪಡಿಸಿದ್ದಾರೆ. ಇಂತಹ ಅಕ್ರಮ ಚಟುವಟಿಕೆಗಳು ಮುಂದುವರಿದರೆ ರಾಜ್ಯದಲ್ಲಿ ಎಲ್ಲಾ ರೀತಿಯ ಪಾನ್ ಮಸಾಲಾ ಮತ್ತು ಗುಟ್ಕಾ ಉತ್ಪನ್ನಗಳನ್ನು ಸಂಪೂರ್ಣ ನಿಷೇಧಿಸುವುದಾಗಿ ಎಚ್ಚರಿಕೆ ನೀಡಿದ್ದಾರೆ.
ಬೆಂಗಳೂರಿನ ಕಂಠೀರವ ಕ್ರೀಡಾಂಗಣದಲ್ಲಿ ನಡೆದ ರಾಜ್ಯ ಆರೋಗ್ಯ ವಿಜ್ಞಾನಗಳ ವಿಶ್ವವಿದ್ಯಾಲಯದ 31ನೇ ಸಂಸ್ಥಾಪನಾ ದಿನ ಹಾಗೂ ‘ಅಂತರರಾಷ್ಟ್ರೀಯ ಮಾದಕ ದ್ರವ್ಯ ವಿರೋಧಿ ದಿನ’ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ಮಾದಕ ದ್ರವ್ಯ ಮುಕ್ತ ಕರ್ನಾಟಕ ನಿರ್ಮಾಣ ಸರ್ಕಾರದ ಆದ್ಯತೆಯಾಗಿದ್ದು ಈ ನಿಟ್ಟಿನಲ್ಲಿ ನಿರಂತರ ಕಠಿಣ ಕ್ರಮಗಳನ್ನು ಕೈಗೊಳ್ಳಲಾಗುತ್ತಿದೆ ಎಂದರು.
‘ನಶಾ ಮುಕ್ತ ಭಾರತ ಅಭಿಯಾನ’ದಲ್ಲಿ ಭಾಗವಹಿಸಿದವರನ್ನು ರಾಯಭಾರಿಗಳೆಂದು ಕರೆದು ಮಾತನಾಡಿದ ಸಿಎಂ, ಯುವ ಪೀಳಿಗೆ ವ್ಯಸನದ ದಾರಿಗೆ ಹೋಗದಂತೆ ತಡೆಯುವುದು ಎಲ್ಲರ ಜವಾಬ್ದಾರಿ ಎಂದರು. ಶಿಕ್ಷಣ ಸಂಸ್ಥೆಗಳು, ಪೋಷಕರು ಹಾಗೂ ಸಮಾಜ ಒಟ್ಟಾಗಿ ಕೆಲಸ ಮಾಡಿದರೆ ವ್ಯಸನಮುಕ್ತ ಭವಿಷ್ಯ ನಿರ್ಮಾಣ ಸಾಧ್ಯ ಎಂದು ತಿಳಿಸಿದರು.


































