
ಹೈದರಾಬಾದ್: ಸೆಲೆಬ್ರಿಟಿ ಜ್ಯೋತಿಷಿ ವೇಣು ಸ್ವಾಮಿ ಮತ್ತೊಮ್ಮೆ ತಮ್ಮ ಭವಿಷ್ಯವಾಣಿಗಳ ಮೂಲಕ ಸುದ್ದಿಯಲ್ಲಿದ್ದಾರೆ. ಈ ಹಿಂದೆ ನಟಿ ಸಮಂತಾ ಹಾಗೂ ನಾಗ ಚೈತನ್ಯ ಅವರ ವೈಯಕ್ತಿಕ ಜೀವನದ ಬಗ್ಗೆ ಹೇಳಿದ್ದ ಮಾತುಗಳು ಟಾಲಿವುಡ್‌ನಲ್ಲಿ ಭಾರೀ ಚರ್ಚೆಗೆ ಕಾರಣವಾಗಿದ್ದು ಈಗ ವೇಣು ಸ್ವಾಮಿ ತಮಿಳುನಾಡು ರಾಜಕೀಯದ ಕುರಿತು ನೀಡಿರುವ ಹೇಳಿಕೆಗಳು ಹೊಸ ಸಂಚಲನ ಹುಟ್ಟುಹಾಕಿವೆ.
ದಳಪತಿ ವಿಜಯ್ ಮುಖ್ಯಮಂತ್ರಿಯಾಗಿರುವ ಹಿನ್ನೆಲೆಯಲ್ಲಿ ಅವರ ರಾಜಕೀಯ ಭವಿಷ್ಯದ ಬಗ್ಗೆ ವೇಣು ಸ್ವಾಮಿ ಭವಿಷ್ಯ ನುಡಿದಿದ್ದು ಅವರ ಪ್ರಕಾರ, ವಿಜಯ್ ಮತ್ತು ನಟಿ ತ್ರಿಷಾ ಕೃಷ್ಣನ್ ಅವರ ಜಾತಕಗಳ ನಡುವೆ ವಿಶೇಷ ಹೊಂದಾಣಿಕೆ ಇದೆ. ತ್ರಿಷಾ ಅವರ ಪ್ರಭಾವ ವಿಜಯ್ ಅವರ ರಾಜಕೀಯ ಯಶಸ್ಸಿನ ಮೇಲೂ ಪರಿಣಾಮ ಬೀರಿದೆ ಎಂದು ಅವರು ಹೇಳಿದ್ದಾರೆ.
ಇನ್ನೂ ವಿಜಯ್ ನೇತೃತ್ವದ ಸರ್ಕಾರ ಸ್ಥಿರವಾಗಿರುವ ಸಾಧ್ಯತೆ ಕಡಿಮೆ ಎಂದಿರುವ ವೇಣು ಸ್ವಾಮಿ, ಆರು ತಿಂಗಳಿಂದ ಒಂದು ವರ್ಷದೊಳಗೆ ಮತ್ತೆ ಚುನಾವಣೆ ನಡೆಯುವ ಸಾಧ್ಯತೆ ಇದೆ ಎಂದು ಭವಿಷ್ಯ ನುಡಿದಿದ್ದಾರೆ.
ವಿಜಯ್-ತ್ರಿಷಾ ಜಾತಕವನ್ನು ‘ಏಕನಾಡಿ ಕಾಂಬಿನೇಷನ್’ ಎಂದು ಕರೆಯಲಾಗಿದ್ದು, ಇದು ಒಂದೆಡೆ ದೊಡ್ಡ ಯಶಸ್ಸು ನೀಡಿದರೂ ಮತ್ತೊಂದೆಡೆ ಅನಿರೀಕ್ಷಿತ ಸಮಸ್ಯೆಗಳನ್ನೂ ತರಬಹುದು ಎಂದು ಅವರು ವಿಶ್ಲೇಷಿಸಿದ್ದಾರೆ.
ವೇಣು ಸ್ವಾಮಿ ಅವರ ಈ ಹೇಳಿಕೆಗಳು ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದ್ದು, ಕೆಲವರು ಇದನ್ನು ಗಂಭೀರವಾಗಿ ತೆಗೆದುಕೊಂಡರೆ, ಇನ್ನೂ ಕೆಲವರು ಇದನ್ನು ಪ್ರಚಾರದ ಭಾಗವೆಂದು ಟೀಕಿಸಿದ್ದಾರೆ.






















