
ಹೈದರಾಬಾದ್: ಪ್ರಧಾನಿ ನರೇಂದ್ರ ಮೋದಿ ತೆಲಂಗಾಣದಲ್ಲಿ ₹9,400 ಕೋಟಿ ಮೌಲ್ಯದ ವಿವಿಧ ಅಭಿವೃದ್ಧಿ ಕಾಮಗಾರಿಗಳಿಗೆ ವರ್ಚುವಲ್ ಮೂಲಕ ಶಿಲಾನ್ಯಾಸ ನೆರವೇರಿಸಿ ಮಾತನಾಡಿದ್ದು ಈ ವೇಳೆ ಪಶ್ಚಿಮ ಏಶ್ಯದಲ್ಲಿ ಉದ್ಭವಿಸಿರುವ ಬಿಕ್ಕಟ್ಟಿನ ನಡುವೆ ಪೆಟ್ರೋಲಿಯಂ ಉತ್ಪನ್ನಗಳನ್ನು ಮಿತವಾಗಿ ಬಳಸುವ ಅಗತ್ಯವಿದೆ ಎಂದು ಕರೆ ನೀಡಿದರು.
ವಿದೇಶಗಳಿಂದ ಆಮದು ಆಗುವ ಪೆಟ್ರೋಲ್, ಡೀಸೆಲ್ ಹಾಗೂ ಅನಿಲವನ್ನು ಅಗತ್ಯಕ್ಕೆ ತಕ್ಕಂತೆ ಮಾತ್ರ ಬಳಸಿದರೆ ವಿದೇಶಿ ವಿನಿಮಯ ಉಳಿತಾಯವಾಗುವುದರ ಜೊತೆಗೆ ಯುದ್ಧದ ಪರಿಣಾಮಗಳನ್ನೂ ಕಡಿಮೆ ಮಾಡಬಹುದು ಎಂದು ಮೋದಿ ಹೇಳಿದರು.
ಭಾರತವು ಸೌರಶಕ್ತಿ ಉತ್ಪಾದನೆ ಹಾಗೂ ಎಥನಾಲ್ ಮಿಶ್ರಣ ಕ್ಷೇತ್ರದಲ್ಲಿ ದೊಡ್ಡ ಸಾಧನೆ ಮಾಡಿದೆ ಎಂದು ತಿಳಿಸಿದ ಪ್ರಧಾನಿ, ಅಗ್ಗದ ದರದಲ್ಲಿ ಅನಿಲ ಪೂರೈಕೆಗಾಗಿ ಕೊಳವೆ ಮಾರ್ಗ ವ್ಯವಸ್ಥೆಗೆ ಕೇಂದ್ರ ಸರ್ಕಾರ ಆದ್ಯತೆ ನೀಡುತ್ತಿದೆ. ಸಿಎನ್‌ಜಿ ಬಳಕೆಯನ್ನೂ ಸರ್ಕಾರ ಉತ್ತೇಜಿಸುತ್ತಿದ್ದು, ಇಂಧನ ಬಿಕ್ಕಟ್ಟನ್ನು ಸಮರ್ಥವಾಗಿ ಎದುರಿಸಲು ದೇಶ ಸಿದ್ಧವಾಗಿದೆ ಎಂದು ಹೇಳಿದರು. ಇದೇ ವೇಳೆ ಪೆಟ್ರೋಲಿಯಂ ಉತ್ಪನ್ನಗಳನ್ನು ವಿವೇಚನೆಯಿಂದ ಬಳಸುವಂತೆ ಜನರಿಗೆ ಪ್ರಧಾನಿ ಸಲಹೆ ನೀಡಿದರು.






















