28 C
Udupi
Tuesday, May 12, 2026
spot_img
spot_img
HomeBlogಮಹಾಭಾರತ

ಮಹಾಭಾರತ

ಭಾಗ – 519

ಭರತೇಶ ಶೆಟ್ಟಿ, ಎಕ್ಕಾರು

ಚಂಪಕಾವತಿಯ ಮಹಾರಾಜ ಹಂಸಧ್ವಜನು ತನ್ನ ಮಂತ್ರಿಗಳಾದ ಸುಮತಿ ಮತ್ತು ಪ್ರಮತಿಯನ್ನು ಕರೆದು ಯಾಗಾಶ್ವ ಬಂಧನದ ಕುರಿತಾಗಿ ಸಮಾಲೋಚನೆ ನಿರತನಾದನು. “ಮಂತ್ರಿವರೇಣ್ಯರೇ, ಪಾಂಡವರ ತುರಗಾಧ್ವರ ಪುಣ್ಯಪ್ರದವಾಗಿದ್ದರೂ, ಬಂದಿರುವ ಅರ್ಜುನ ಅಜೇಯನು ಹೌದೆಂಬ ವಿಚಾರ ತಿಳಿದಿದೆ. ನಾವು ಯಾಗಶ್ವವನ್ನು ಕಟ್ಟಲು ಮನಮಾಡಿದ್ದೇವೆ. ಅನಾವಶ್ಯಕ ಯುದ್ಧ ಬೇಡ ಎಂದು ತೀರ್ಮಾನಿಸಿ ಅರ್ಜುನನಿಗೆ ಶರಣಾಗಿ ಕಪ್ಪ ಒಪ್ಪಿಸಿದರೂ ಸುಖವಿದೆಯೆ? ಅಶ್ವಮೇಧ ಯಾಗ ನಿಯಮಾನುಸಾರ ಶರಣಾಗತನಾಗಿ ಕಪ್ಪ ಕಾಣಿಕೆಯಿತ್ತ ರಾಜ ಸೇನಾಸಮೇತನಾಗಿ ಅಶ್ವಮೇಧಯಾಗದ ಮುಂದಣ ಯಾನವನ್ನು ಅನುಸರಿಸಿ ಹೋಗಬೇಕು. ಅಲ್ಲಿ ಸಂಭವನೀಯ ಯುದ್ಧದಲ್ಲಿ ಸೆಣಸ ಬೇಕು. ಹಾಗಿರುವಾಗ ಕುದುರೆಯನ್ನು ಕಟ್ಟಿದರೆ ಇಲ್ಲಿಯೆ ಅರ್ಜುನನೊಡನೆ ಯುದ್ದ. ಅದು ಬೇಡ ಎಂದು ಕಪ್ಪವಿತ್ತು ತಪ್ಪಿಸಿದರೆ ಮುಂದೆ ಅರ್ಜುನನ ಜೊತೆಯಾಗಿ ಅಶ್ವಮೇಧದ ಕುದುರೆಯ ಜೊತೆ ಹೋಗಬೇಕು. ಯಾವ ರಾಜ್ಯ ಸೇರುತ್ತದೋ ಅಲ್ಲಿಯ ರಾಜನೊಡನೆ ಯುದ್ಧ ಮಾಡಬೇಕು. ಅಂತೂ ಯುದ್ಧ ತಪ್ಪಿದ್ದಲ್ಲ. ಎಲ್ಲೋ ಹೋಗಿ, ಯಾರೊಡನೆಯೊ ಹೋರಾಡುವ ಬದಲು ಹರಿಭಕ್ತನಾಗಿರುವ ಅರ್ಜುನನೊಡನೆ ನಮ್ಮ ಆರಾಧ್ಯ ಶ್ರೀಕೃಷ್ಣನ ಭಕ್ತಿಯನ್ನು ನಮ್ಮ ಶಕ್ತಿಯಾಗಿಸಿ ಹೋರಾಡಿದರೆ, ಒಂದೊಮ್ಮೆಗೆ ನಾವು ಅರ್ಜುನನನ್ನು ಸೋಲಿಸಿದರೆ, ನಮ್ಮ ದೇವರಾದ ಶ್ರೀಕೃಷ್ಣನು ಅರ್ಜುನನ ರಕ್ಷಣೆಗಾಗಿ ಈ ಚಂಪಕಾವತಿಯ ಮಣ್ಣನ್ನು ತುಳಿಯುತ್ತಾ ಬರುವಂತಾಗುತ್ತದೆ. ನಮ್ಮ ಕಲ್ಪನೆಯಂತೆ ಹಾಗೊಮ್ಮೆ ಆಗಿ ಹೋದರೆ ಈ ರಾಜ್ಯದ ಮಣ್ಣ ಕಣಕಣವೂ ಪಾವನವಾದೀತು! ನಮ್ಮ ಈ ತನಕದ ಜೀವನ ಸಾರ್ಥಕವಾದೀತು. ಶ್ರೀಕೃಷ್ಣನು ಬಂದನಾದರೆ, ನಾವು ಯುದ್ಧ ಗೆಲ್ಲಲಾಗದು. ಯಾರಿಗೆ ಬೇಕು ಆಗ ಯುದ್ದದ ವಿಜಯ? ಅಶ್ವಮೇಧಕ್ಕೆ ತೊಡಕು ಮಾಡುವ ಉದ್ದೇಶವೂ ನಮಗಿಲ್ಲವಲ್ಲ. ಸೋಲು ಅಥವಾ ಸಾವು ನಮಗೊದಗಿದರೂ ನಮ್ಮ ದೇವರ ಸಮಕ್ಷದಲ್ಲಿ ಅದು ಪರಮ ಸಾಯುಜ್ಯದ ಸಂಪಾದನೆಗೆ ರಹದಾರಿಯಾಗಿ ಅಂತಿಮ ಜಯ ನಮ್ಮದಾಗಲಿದೆ. ಅದಕ್ಕಿಂತ ಉತ್ಕೃಷ್ಟವಾದ ಸಾಧನೆ, ಸಂಪಾದನೆ ಇನ್ನು ಈ ಜಗದಲ್ಲಿ ಏನಿದೆ? ಅಷ್ಟು ಮಹತ್ತರವಾದ, ಅದ್ವಿತೀಯವಾದ, ಅನನ್ಯವಾದ ಅವಕಾಶ ನಮ್ಮ ಕಾಲಬುಡಕ್ಕೆ ಬಂದಿರುವಾಗ ಪೂರ್ಣ ಸಮರ್ಪಣಾ ಭಾವದಿಂದ ಭಗವಂತನಲ್ಲಿ ಮನದ ಅಭಿಲಾಷೆಯನ್ನು ಅರ್ಪಿಸಿ ಬಂದಿರುವ ಪಾರ್ಥನಿಗೆ ಅಳುಕದೆ ಹೋರಾಡುವುದು ಕ್ಷತ್ರಿಯರಾದ ನಮಗೆ ಭೂಷಣವಲ್ಲವೇ? ಕ್ಷಾತ್ರ ಧರ್ಮ ಪಾಲಿಸಿ, ಧರ್ಮ ಬುದ್ಧಿಯಿಂದ ಪ್ರವರ್ತಿಸಿದೆವು ಎಂದಾದರೆ ಭಕ್ತವತ್ಸಲನಾದ ನಮ್ಮ ಪರಮಾತ್ಮನು ಮೆಚ್ಚದೆ ಉಳಿಯುತ್ತಾನೆಯೆ? ಆ ಚಿನ್ಮಯ ಸ್ವರೂಪನ ಸಾಕಾರ ಮೂರ್ತಿಯ ದರ್ಶನ ನಮಗಾದರೆ, ಆ ಬಳಿಕ ನಮ್ಮ ಗತಿ ಏನೇ ಆಗಲಿ, ಸಾವು ಸೋಲು ಏನು ಪ್ರಾಪ್ತವಾದರೂ ಗೆಲ್ಲುವವರು ನಾವೇ ಅಲ್ಲವೆ? ಸತ್ತೆವೆಂದಾದರೂ ಪರಮೋಚ್ಚ ಪದವಿ ನಮಗೆ ಸಿದ್ಧಿಸುತ್ತದೆ. ಜೀವನ ಸಾರ್ಥಕ್ಯವನ್ನು ಹೊಂದಿ ಪರಿಶುದ್ಧವಾಗುತ್ತದೆ. ಈ ಜನ್ಮವೂ ಪರಿಪೂರ್ಣತೆಯೊಂದಿಗೆ ಸುಖಾಂತ್ಯ ಕಾಣುತ್ತದೆ. ಯಾಗಾಶ್ವ ನಮ್ಮ ಪುರಕ್ಕೆ ಭಾಗ್ಯಲಕ್ಷ್ಮಿಯಾಗಿ ಬಂದಿದೆಯೆಂದು ತಿಳಿದು ಬಂಧಿಸೋಣ. ಭಗವತ್ಸಂಕಲ್ಪದಿಂದ ಹೀಗಾಗುತ್ತಿದೆ ಎಂದು ನಂಬಿ ಯುದ್ಧ ಎಂಬ ಮಹಾಪೂಜೆಗೆ ಸಿದ್ಧರಾಗೋಣ. ಪ್ರಸಾದ ರೂಪದಲ್ಲಿ ಏನು ನಮ್ಮ ಪಾಲಿಗೆ ಒದಗಲಿದೆಯೊ ಅದು ಭಗವಂತನ ಪ್ರಸಾದ, ನಮಗೆ ಪಂಚಾಮೃತವೆಂದು ಸ್ವೀಕರಿಸೋಣ. ನಂಬಿದ ದೇವರು ನಮ್ಮ ಕೈ ಬಿಡಲಾರ ಎಂಬ ಧೃಡ ವಿಶ್ವಾಸದಿಂದ ಸಧೃಡ ಸಂಕಲ್ಪಧರರಾಗಿ ಮುಂದಡಿಯಿಡೋಣ. ಹರ್ಷೋಲ್ಲಾಸದಿಂದ ನಮ್ಮಿಂದ ಸಾಧ್ಯವಾದಷ್ಟು ಮಹಾಬಲ ಸಂಘಟಿಸಿ ಸಿದ್ಧರಾಗೋಣ” ಎಂದು ಹೇಳುತ್ತಾ ಮಂತ್ರಿಗಳ ಸಮ್ಮತಿ ಕೇಳಿದಾಗ ಸುಮತಿ – ಪ್ರಮತಿ ಇಬ್ಬರೂ “ಹಾಗೆಯೆ ಆಗಲಿ ನಮ್ಮ ಭಾಗ್ಯೋದಯದ ಬಾಗಿಲು ತೆರೆಯೋಣ” ಎಂದು ಬೆಂಬಲಿಸಿದರು.

ಹಂಸಧ್ವಜನ ಆಳ್ವಿಕೆಯಲ್ಲಿ ಬಹಳ ವಿಶೇಷವಿತ್ತು. ಓರ್ವ ರಾಜನ ಸಾಮ್ರಾಜ್ಯದಲ್ಲಿ ಇರಬೇಕಾದ ಸಾಂಸ್ಥಿಕ ಆಡಳಿತ ವ್ಯವಸ್ಥೆಗಳು ಇರಲಿಲ್ಲ. ಅಂದರೆ, ಸೇನೆ, ದಂಡಾಧಿಕಾರಿ, ನ್ಯಾಯಾಂಗ, ಗೂಢಾಚಾರರು ಇತ್ಯಾದಿ ಆಡಳಿತಾತ್ಮಕ ಪ್ರತ್ಯೇಕ ವ್ಯವಸ್ಥೆಗಳು ಇರಲಿಲ್ಲ. ಚಿಕ್ಕ ರಾಜ್ಯವಾದರೂ ಸಂಪದ್ಭರಿತವಾಗಿ ಧರ್ಮಿಷ್ಠರೂ, ರಾಷ್ಟ್ರ ಭಕ್ತರೂ, ರಾಷ್ಟ್ರೀಯತಾವಾದಿ ಪ್ರಜೆಗಳಿಂದ ತುಂಬಿದ್ದು ಇಂತಹ ವ್ಯವಸ್ಥೆಗಳು ಅನಗತ್ಯವಾಗಿದ್ದವು. ಸೈನ್ಯ ಯಾಕೆ ಬೇಕು? ರಾಜ್ಯದ ಪ್ರತಿಯೊಬ್ಬ ಪ್ರಜೆಯೂ ಸಮರಕಲೆ ಪಾರಂಗತನಾಗಿ, ಆಯುಧ ಸಂಗ್ರಹ ಮಾಡಿಕೊಂಡು ನಾಗರಿಕ ಸೇನೆಯಾಗಿ ಅಗತ್ಯಕಾಲದಲ್ಲಿ ರಾಜ್ಯಕ್ಕೆ ರಾಜ್ಯವೆ ಸೈನ್ಯವಾಗುತ್ತಿತ್ತು. ನ್ಯಾಯಾಂಗ ವ್ಯವಸ್ಥೆ ಬೇಕಾಗಿರಲಿಲ್ಲ. ಕಾರಣ ಪ್ರಜೆಗಳು ನೈತಿಕವಲ್ಲದ ಯಾವ ಆಚಾರ ವಿಚಾರವನ್ನೂ ಯೋಚಿಸುತ್ತಿರಲಿಲ್ಲ‌. ರಕ್ಷಣಾ ಭಟರು, ಕಾವಲು ಪಡೆ ಬೇಕಾಗಿರಲಿಲ್ಲ. ಯಾಕೆಂದರೆ ಪ್ರಜೆಗಳು ಅಂತಹ ಜವಾಬ್ದಾರಿಯನ್ನು ಅನುಕ್ಷಣವೂ ಮೀರದೆ ಪಾಲಿಸುತ್ತಿದ್ದರು. ಧರ್ಮಪರಾಯಣರಾಗಿ, ನಿಷ್ಠಾವಂತರಾಗಿ, ಪ್ರಾಮಾಣಿಕ ಬದುಕನ್ನು ಜೀವಿಸುವ ಪ್ರಜೆಗಳಿಂದ ಭೂಸ್ವರ್ಗವಾಗಿತ್ತು ಚಂಪಕಾವತಿ. ಜನರು ವೃತ್ತಿಯಾಗಿ ಕೃಷಿ, ಕುಶಲಕರ್ಮಿಗಳು, ವಿದ್ವಾಂಸರು, ಗೋಪಾಲಕ ಹೀಗೆ ಬಹುವಿಧ ವೃತ್ತಿಪರರಾಗಿದ್ದರೂ, ಪ್ರವೃತ್ತಿಯಲ್ಲಿ ರಾಜ್ಯಕ್ಕೆ ಬೇಕಾದ ಸರ್ವ ಮೂಲಭೂತ ಮಾನವ ಸಂಪನ್ಮೂಲವಾಗಿದ್ದರು‌. ಯಾವ ರಾಜ್ಯದಲ್ಲಿ ಹುಟ್ಟಿದ ಮಗುವಿಗೆ ಸಂಸ್ಕಾರ, ಧರ್ಮ, ನಿಷ್ಠೆ, ಆಚಾರದ ಶಿಕ್ಷಣ ಮೌಲ್ಯಾಧಾರಿತ ಶಿಕ್ಷಣ ನೀಡಲಾಗುತ್ತದೋ ಅಂತಹ ರಾಜ್ಯದಲ್ಲಿ ನಿಯಂತ್ರಕ ವ್ಯವಸ್ಥೆಗಳಾದ ರಕ್ಷಣೆ, ಸೇನೆ, ನ್ಯಾಯ ವ್ಯವಸ್ಥೆ ಬೇಕಾಗದು ಎಂಬ ಸತ್ಯಕ್ಕೆ ಚಂಪಕಾವತಿ ನಿದರ್ಶನವಾಗಿತ್ತು.

ಹೀಗಿರುವ ಚಂಪಕಾವತಿ ರಾಜ್ಯದೆಲ್ಲೆಡೆ ಸುದ್ದಿ ಹಬ್ಬಿತು, ನಾಳೆ ಪಾಂಡವರ ಸೇನೆಯನ್ನು ಎದುರಿಸಲು ಸಮಸ್ತ ರಾಜ್ಯ ಸೇನೆಯಾಗಬೇಕು. ಎಲ್ಲಾ ಮನೆಯಲ್ಲೂ ಮಕ್ಕಳು, ಸ್ತ್ರೀಯರು, ವಯೋವೃದ್ಧರು ಅವರವರ ಮನೆಯ ಪುರುಷರು, ಯುವಕರನ್ನು ಯುದ್ಧಕ್ಕೆ ಸಜ್ಜುಗೊಳಿಸತೊಡಗಿದರು. ನವವಧುವಿಗೂ ತನ್ನ ಗಂಡ ಯುದ್ದಕ್ಕೆ ಹೋಗುತ್ತಾನೆಂಬ ಭಯವಿಲ್ಲ. ಚಿಕ್ಕ ಮಗುವಿನ ತಾಯಿಗೂ ತನ್ನ ಗಂಡನಿಗೆ ಯುದ್ಧದಲ್ಲೇನಾಗುವುದು? ಮುಂದೆ ನಮ್ಮ ಗತಿಯೇನು! ಎಂಬ ಆತಂಕವಿಲ್ಲ. ವೃದ್ಧಾಪ್ಯದಲ್ಲಿರುವ ಮಾತಾ ಪಿತರೂ ನಿಸ್ವಾರ್ಥ ಬುದ್ಧಿಯಿಂದ ತಮ್ಮ ಮಗನನ್ನು ಹರಸಿ ಯುದ್ಧಕ್ಕೆ ಹೊರಡಿಸುತ್ತಿದ್ದಾರೆ. ರಾಷ್ಟ್ರ ರಕ್ಷಣೆಯನ್ನು ಮೀರಿ ತಮ್ಮ ಸ್ವಂತ ಸ್ವಾರ್ಥದ ಗುಣವೇ ಇಲ್ಲದೆ ಚಂಪಕಾವತಿ ಮೌಲ್ಯದಲ್ಲಿ ಮೇರು ರಾಷ್ಟ್ರವಾಗಿ ಈ ಹೊತ್ತು ಗೋಚರಿಸುತ್ತಿದೆ. ಆ ರಾಜ್ಯದಲ್ಲಿ ರೂಢಿಯಾಗಿ ಪಾಲಿಸುತ್ತಾ ಬಂದ ನಿಯಮವೊಂದಿತ್ತು. ಏನೆಂದರೆ ಯಾರು ರಾಷ್ಟ್ರಕ್ಕೆ ಅಗತ್ಯವಾಗಿರುವ ಕಾಲದಲ್ಲಿ ಸೈನಿಕನಾಗಿ ಬಾರದೆ ಹಿಂದುಳಿಯುತ್ತಾರೋ ಅಂತಹ ವ್ಯಕ್ತಿಯನ್ನು ನಿರ್ದಾಕ್ಷಿಣ್ಯದಿಂದ ಸಜೀವವಾಗಿ ಕುದಿಯುವ ಎಣ್ಣೆಯ ಕೊಪ್ಪರಿಗೆಗೆ ಹಾಕಿ ಶಿಕ್ಷಿಸಲಾಗುವುದೆಂದು. ಆದರೆ ಅಂತಹ ಸ್ವಭಾವದ ಪ್ರಜೆಗಳು ಆ ರಾಜ್ಯದಲ್ಲಿ ಇಲ್ಲವೆಂದು ಭಾವಿಸಬಹುದು.

ಮಹಾರಾಜ ಹಂಸಧ್ವಜನು ಕುದುರೆಯನ್ನು ಬಂಧಿಸಿ ಕಟ್ಟಿ ಹಾಕಿದನು. ಪ್ರಾಜ್ಞನಾದ ದೂತನನ್ನು ನೇಮಿಸಿ ಪಾಂಡವ ಪ್ರಮುಖನಾಗಿ ಸೇನೆಯ ಜೊತೆ ಬಂದಿರುವ ಅರ್ಜುನನ ಬಳಿ ಕಳುಹಿಸಿದನು. “ಕುದುರೆಯನ್ನು ಕಟ್ಟಿದ್ದೇವೆ. ಬೇಕಿದ್ದರೆ ಕಾದಾಡಿ ಬಿಡಿಸಿಕೊಳ್ಳಬಹುದು” ಎಂಬ ಸಂದೇಶ ಅಲ್ಲಿಗೆ ರವಾನಿಸಲ್ಪಟ್ಟಿತು.

ಚಂಪಕಾವತಿಯ ಮನೆಗಳಲ್ಲಿ ಈಗ ಉಳಿದಿರುವವರು ಮಕ್ಕಳು, ಮಹಿಳೆಯರು, ವೃದ್ಧರು ಮತ್ತು ರೋಗಿಗಳು. ಉಳಿದ ಗಂಡಸರೆಲ್ಲರೂ ಸೈನಿಕರಾಗಿ ಬಂದು ಅರಮನೆಯ ಬಳಿ ಸೇರಿದ್ದಾರೆ. ಆನೆ, ಕುದುರೆ, ರಥ, ಆಯುಧಗಳನ್ನು ತುಂಬಿದ ಬಂಡಿಗಳು ಸಿದ್ಧವಾಗಿದೆ. ವಾರ್ಷಿಕ ಉತ್ಸವದಲ್ಲಿ ಭಾಗಿಯಾಗುವವರಂತೆ ಎಲ್ಲರೂ ಹರ್ಷಚಿತ್ತರಾಗಿ, ಮಂದಸ್ಮಿತರಾಗಿ ಕಂಗೊಳಿಸುತ್ತಿದ್ದಾರೆ. ದೇವಭಕ್ತಿಯೋ, ದೇಶಭಕ್ತಿಯೋ ಅಂತೂ ಭಕ್ತಿ ಪಾರಮ್ಯದ ಅಲೆ ಅಬ್ಬರಿಸುತ್ತಿದೆ. ಸ್ವತಃ ರಾಜ ಹಂಸಧ್ವಜ, ಆತನ ಮಕ್ಕಳು, ಮಂತ್ರಿಗಳು, ಸೇನಾಪತಿ ಹೀಗೆ ಯಾರೊಬ್ಬರೂ ಉಳಿಯದೆ ಬಂದು ಸೇರಿದ್ದಾರೆ.

ಹಂಸಧ್ವಜನ ಮಗ ಸುಧನ್ವನೂ ಭಕ್ತ ಭಾಗವತ, ಧರ್ಮಿಷ್ಠ, ವೀರಾಗ್ರಣಿ. ಆತನೂ ಎಲ್ಲಾ ಕಡೆ ಒಂದು ಸುತ್ತು ತಿರುಗಿ, ಯುದ್ಧ ಸಿದ್ಧತೆಗಳನ್ನು ಸೂಕ್ಷ್ಮವಾಗಿ ಪರಿಶೀಲಿಸಿ ಕತ್ತಲಾಗುವ ಹೊತ್ತಿಗೆ ನಾಳಿನ ಸೂರ್ಯೋದಯದಿಂದ ಆರಂಭವಾಗುವ ನಿಶ್ಚಿತ ಯುದ್ಧಕ್ಕೆ ಸರ್ವ ಸನ್ನದ್ಧನಾಗಿದ್ದನು. ಸೇನಾಧಿಪತಿ, ಉಪಸೇನಾಧಿಪತಿ ನೇಮಕವಾಗಿದ್ದು ನಾಳೆಯ ಯುದ್ಧ ತಂತ್ರಗಳೂ ಸಮಾಲೋಚನೆಯಾಗಿದ್ದವು.

ಹೀಗಿರಲು ರಾತ್ರಿಯಾಗುತ್ತಿದ್ದಂತೆ ಸುಧನ್ವ ತನ್ನ ತಾಯಿಗೆ ವಂದಿಸಿ ಆಶೀರ್ವಾದ ಪಡೆದು, ನವ ವಿವಾಹಿತೆ ಪತ್ನಿ ಪ್ರಭಾವತಿಯನ್ನು ಕಂಡು ಮಾತಾಡಿಸಿ ಬರಲು ಅರಮನೆಯತ್ತ ಹೊರಟನು.

ಮುಂದುವರಿಯುವುದು…

spot_imgspot_img
spot_imgspot_img
spot_imgspot_img
spot_imgspot_img
spot_imgspot_img
spot_imgspot_img
spot_imgspot_img
spot_imgspot_img
spot_imgspot_img
spot_imgspot_img
spot_imgspot_img
spot_imgspot_img
spot_imgspot_img
spot_imgspot_img
spot_imgspot_img
spot_imgspot_img
spot_imgspot_img
spot_imgspot_img
spot_imgspot_img
spot_imgspot_img
RELATED ARTICLES

LEAVE A REPLY

Please enter your comment!
Please enter your name here

- Advertisment -
Google search engine

Most Popular

Recent Comments

You cannot copy content of this page