ಭಾಗ – 518
ಭರತೇಶ ಶೆಟ್ಟಿ, ಎಕ್ಕಾರು

ಉದ್ದಾಲಕನು ತುಸು ಹೊತ್ತು ಶಾಪ ವಿಮೋಚನೆಯ ಬಗ್ಗೆ ತರ್ಕಿಸಿ ಪರಿಹಾರ ಮಾರ್ಗವನ್ನು ಹೇಳಿದನು “ಕಾಲಾಂತರದಲ್ಲಿ ಮಹಾತ್ಮನೋರ್ವನಿಂದ ಅಶ್ವಮೇಧ ಯಾಗ ವಿರಚಿಸಲ್ಪಡಲಿದೆ. ಆ ಯಾಗಾಶ್ವ ನಿನ್ನ ಮೇಲೇರಿ ಅಂದರೆ ಕಲ್ಲನ್ನು ಹತ್ತಿದಾಗ ಅದನ್ನು ಹಿಡಿದುಕೊಂಡರೆ, ಅದರ ರಕ್ಷಕನಾಗಿ ಪುಣ್ಯಾತ್ಮನೋರ್ವ ಜೊತೆಗೆ ಬಂದಿದ್ದು, ಸ್ವಯಂ ತಾನು ಕೈಯಾರೆ ಕುದುರೆಯನ್ನು ಬಿಡಿಸಲು ನಿನ್ನನ್ನು ಮುಟ್ಟಿ ತುರಗದ ಕಾಲುಗಳನ್ನು ಸೆಳೆದು ಬಂಧಮುಕ್ತಗೊಳಿಸಿದಾಗ ನಿನ್ನ ಶಾಪ ವಿಮೋಚನೆಯಾಗುತ್ತದೆ. ಅಲ್ಲಿಯವರೆಗೆ ನೀನು ಪ್ರತೀಕ್ಷೆಯಲ್ಲಿರಬೇಕು” ಎಂದು ನುಡಿದು ವಿರಕ್ತನಾಗಿ ಎತ್ತಲೊ ಸಾಗಿ ತಪೋ ನಿರತನಾಗಿದ್ದಾನೆ. ಹೀಗೆ ಸೌಭರಿ ಮುನಿಗಳು ಅರ್ಜುನನಿಗೆ ನೀಳವಾಗಿ ಬಿದ್ದಿರುವ ಹಾಸುಕಲ್ಲಿನ ಪೂರ್ವಾಪರ ವೃತ್ತಾಂತ ವಿವರಿಸಿದರು. “ಅರ್ಜುನಾ! ತಡಮಾಡದೆ, ಶ್ರೀಕೃಷ್ಣನನ್ನು ಧ್ಯಾನಿಸುತ್ತಾ ಖುದ್ದಾಗಿ ನೀನು ಆ ಹಾಸುಗಲ್ಲನ್ನೇರಿ ನಿನ್ನ ಕೈಯಾರೆ ಕುದುರೆಗಳ ಕಾಲನ್ನು ಹಿಡಿದೆಳೆದು ನೋಡು. ಕುದುರೆ ಬಿಡಿಸಲ್ಪಡುತ್ತದೆ. ಕಲ್ಲಾಗಿ ಬಿದ್ದಿರುವ ಚಂಡಿಯ ಶಾಪ ವಿಮೋಚನೆಯಾಗಿ ಪುನರಪಿ ಆಕೆ ಸ್ತ್ರೀರೂಪದಲ್ಲಿ ಪ್ರಕಟಳಾಗುತ್ತಾಳೆ” ಎಂದು ನಿರ್ದೇಶಿಸಿದರು.
ಅರ್ಜುನ ಸೌಭರಿ ಮುನಿವರ್ಯನಿಗೆ ವಂದಿಸಿ ಕೃತಜ್ಞತೆ ಸಲ್ಲಿಸಿದನು. ಮರಳಿ ಬಂದು ಮುನಿವರೇಣ್ಯ ನುಡಿದಂತೆ ಮಾಡಿದಾಗ ಕುದುರೆ ಚಂಗನೆ ನೆಗೆದು ಮುಂದೆ ಹೋಯಿತು. ಕಲ್ಲು ಹೆಣ್ಣಾಗಿ ರೂಪವಡೆದು ಅರ್ಜುನನೆದುರು ಕೈಮುಗಿದು ನಿಂತಿತು. ಅರ್ಜುನನೂ ಪ್ರತಿ ವಂದನೆ ಸಲ್ಲಿಸಿದನು. ಈಗ ಚಂಡಿ ಪರಿಶುದ್ಧ ಮನಸ್ಕಳಾಗಿ, ಶಾಂತ ಸ್ವಭಾದವಳಾಗಿದ್ದು ಪ್ರಬುದ್ಧ ಗುಣಸಂಪನ್ನೆಯಾಗಿದ್ದಾಳೆ. ಮತ್ತೆ ಪಾರ್ಥನಿಗೆ ಕೃತಜ್ಞತಾ ಪೂರ್ವಕ ನಮನ ಸಲ್ಲಿಸಿ ತಾನು ತಪೋಭೂಮಿಯನ್ನರಸುತ್ತಾ ಹೊರಟು ಹೋಗಿ ತಪಸ್ಸನಾಚರಿಸತೊಡಗಿದಳು.
ಪಾಂಡವರ ಅಶ್ವಮೇಧದ ಕುದುರೆ ಮುಂದೆ ಮುಂದೆ ಹೋಗುತ್ತಿದೆ. ಅನುಸರಿಸಿ ಅಗಾಧ ಸೇನೆಯೂ ಬೆಂಗಡೆಯಲ್ಲಿ ಬರುತ್ತಿದೆ. ಕುದುರೆ ಸಾಗುತ್ತಾ ಭವ್ಯ ಸುಂದರ ನಗರಿ ಚಂಪಕಾವತಿ ಪಟ್ಟಣವನ್ನು ಪ್ರವೇಶಿಸಿದೆ.
ಚಂಪಕಾವತಿ ಪಟ್ಟಣ ಸುಪ್ರಸಿದ್ಧ ನಗರಿ. ಸೌಕರ್ಯ, ಸೌಂದರ್ಯ, ಔದಾರ್ಯ, ನ್ಯಾಯ, ಧರ್ಮ, ಪ್ರಜಾಪರಿಪಾಲನೆ, ಸಮೃದ್ಧಿ, ನೆಮ್ಮದಿ ಹೀಗೆ ಸಕಲ ವಿಚಾರದಲ್ಲೂ ಔನ್ನತ್ಯವಾದ ಕೀರ್ತಿಯನ್ನು ಹೊಂದಿರುವ ಪಟ್ಟಣ. ಪರಮ ವೈಷ್ಣವನೂ, ಧರ್ಮಾತ್ಮನೂ, ನ್ಯಾಯ ಪಾಲಕನೂ, ಪ್ರಜಾಜನ ಪ್ರೀತನೂ, ಸಮರ್ಥನೂ ಆಗಿರುವ ಹಂಸಕೇತ ಚಂಪಕಾವತಿಯ ಮಹಾರಾಜ. ಆತನ ರಾಜಕೀಯ ಸಹಕಾರಿಗಳಾಗಿ ಸುಮತಿ ಮತ್ತು ಪ್ರಮತಿ ಎಂಬ ಇಬ್ಬರು ಮಂತ್ರಿಗಳು ಎರಡು ಕಣ್ಣುಗಳಂತೆ ರಾಜನಿಗೆ ಅನುಕೂಲಿಗರಾಗಿದ್ದಾರೆ. ಶಂಖ ಮತ್ತು ಲಿಖಿತ ಎಂಬ ಇಬ್ಬರು ಪುರೋಹಿತರು ಹಿತಬಯಸುವ ಸುಗುಣರಾಗಿದ್ದರು. ಅರಸನ ಸಾಂಸಾರಿಕ ಜೀವನದಲ್ಲಿ ನಾಲ್ಕು ಮಂದಿ ಗಂಡುಮಕ್ಕಳು. ರಾಜಕುಮಾರರಾದ ಸುಧನ್ವ, ಸುರಥ, ಸುದರ್ಶನ, ಸುಮರ ಎಂಬ ಹೆಸರಿನ ಇವರು ವಿಕ್ರಮಿಗಳು, ದೇವಭಕ್ತರು ಸಚ್ಚಾರಿತ್ರ್ಯವಂತರಾಗಿದ್ದು ಪ್ರಜಾರಂಜಕರಾಗಿ ತಂದೆಗೆ ತಕ್ಕ ಮಕ್ಕಳಾಗಿದ್ದರು. ಚಂಪಕಾವತಿ ಪಟ್ಟಣ ದಶದಿಕ್ಕುಗಳಲ್ಲೂ ಪ್ರಸಿದ್ಧವಾಗಿತ್ತು.
ಪಾಂಡವರ ಯಾಗಾಶ್ವ ಚಂಪಕಾವತಿಯನ್ನು ಪ್ರವೇಶಿಸಿದ ಕೂಡಲೆ ರಕ್ಷಣಾ ಭಟರು ಅದನ್ನು ಬಂಧಿಸಿ ರಾಜಾಂಗಣಕ್ಕೆ ತಂದು ಮಹಾರಾಜನಿಗೆ ವಿಚಾರ ಮುಟ್ಟಿಸಿದರು. ಮಹಾರಾಜ ಹಂಸಕೇತ ಕುದುರೆಯ ಹಣೆಲಿಖಿತವನ್ನು ಓದಿ ಇದು ಅಶ್ವಮೇಧದ ಕುದುರೆ ಎಂದು ತಿಳಿದುಕೊಂಡನು. ಪರಮ ಹರಿ ಭಕ್ತನಾದ ಹಂಸಕೇತನಿಗೆ ಪಾಂಡವರು ಮಾಡುತ್ತಿರುವ ಪುಣ್ಯಪ್ರದ ಅಶ್ವಮೇಧ ಯಾಗದ ಬಗ್ಗೆ ಗೌರವ ಮೂಡಿತು. ಧರ್ಮರಾಯನ ಬಗ್ಗೆ ಮೊದಲಿನಿಂದಲೂ ಉತ್ತಮ ಸದಭಿಪ್ರಾಯ ಹೊಂದಿದ್ದು, ತನ್ನ ದೇವರು ಸಾಕ್ಷಾತ್ ಶ್ರೀಹರಿ ಅವರ ಜೊತೆಗಿದ್ದಾನೆ ಎಂಬ ಸತ್ಯ ಗೊತ್ತಿದ್ದ ಕಾರಣ ಇನ್ನೂ ಹೆಚ್ಚಿನದ್ದಾದ ಒಲವು ಮನಮಾಡಿತು. ಯಾಗಕ್ಕೆ ಪೂರಕವಾಗಿ ಕಪ್ಪಕಾಣಿಕೆಯಿತ್ತು ಸಹಭಾಗಿಗಳಾಗಬಹುದು. ಆದರೆ ರಾಜಧರ್ಮ ಪ್ರಕಾರ ಕ್ಷತ್ರಿಯರಾದ ನಾವು ಆರೀತಿ ಮಾಡಿದರೆ ಕ್ಷಾತ್ರಧರ್ಮಕ್ಕೆ ಅಪಚಾರವಾದೀತು. ಹಾಗಿರುವಾಗ ಶರಣಾಗತಿಯ ವಿಚಾರ ಬೇಡ, “ಕುದುರೆಯನ್ನು ಲಾಯದಲ್ಲಿ ಕಟ್ಟಿಹಾಕಿ. ಆ ಅರ್ಜುನ ಬಂದರೆ ಬರಲಿ ನೋಡೋಣ” ಎಂದು ತನ್ನ ಆಸ್ಥಾನಿಕರಿಗೆ, ಸೇವಕರಿಗೆ ವಿವರಿಸಿ ಆಜ್ಞೆ ಮಾಡಿದನು.
ಮುಂದುವರಿಯುವುದು….






















