ಭಾಗ – 563
ಭರತೇಶ ಶೆಟ್ಟಿ, ಎಕ್ಕಾರು

ಆದಿಶೇಷನ ಆಸ್ಥಾನದಲ್ಲಿ ಪುಂಡರೀಕ ತನ್ನ ಸಮಯಕ್ಕಾಗಿ ಕಾದು ಕುಳಿತಿದ್ದನು. ಸರತಿ ಬಂದಾಗ ಸರ್ಪರಾಜನಿಗೆ ವಂದಿಸಿದನು. “ಸ್ವಾಮೀ ನಾನು ಮಹತ್ತರವಾದ ಕಾರ್ಯಕ್ಕಾಗಿ ನಿಮ್ಮ ಬಳಿ ಬಂದಿದ್ದೇನೆ. ಭೂಲೋಕದಲ್ಲಿ ಶ್ರೀಹರಿಯೇ ಕೃಷ್ಣನಾಗಿ ಅವತರಿಸಿರುವುದು ನಮಗೆಲ್ಲ ತಿಳಿದ ವಿಚಾರ. ಅರ್ಜುನನ್ನು ತನ್ನ ಕರ್ತವ್ಯವಾದ ಪಾಲನೆ, ಭೂಭಾರಹರಣ, ಯುಗಚಕ್ರ ಚಲನೆಗೆ ಸಹಕಾರಿಯಾಗಿ ಬಳಸಿಕೊಂಡು ಮಹಾಸಂಗ್ರಾಮವನ್ನೇ ನಡೆಸಿದ. ಪರಿಣಾಮ ಭೀಷ್ಮ, ದ್ರೋಣಾದಿ ಹಿರಿಯರೂ, ಕೌರವರೂ, ಮಿತ್ರ ರಾಜರೂ, ಅಗಣಿತ ಸೇನೆಯೆಲ್ಲವೂ ನಾಶಗೊಂಡು ಪಾಂಡವರು ಜಯಶಾಲಿಗಳಾದರು. ಆದರೆ ಈ ಜಯ ಸಂಪಾದನೆಗಾಗಿ ಬಂಧುಗಳನ್ನೇ ಕೊಲ್ಲಬೇಕಾಗಿ ಬಂದುದರಿಂದ ಪಾಂಡವರಿಗೆ ಬಂಧುಹತ್ಯಾ ದೋಷದ ಬಗ್ಗೆ ಭಯವಾಗತೊಡಗಿತು. ಶ್ರೀಕೃಷ್ಣನ ಸೂಚನೆಯಂತೆ ದೋಷ ನಿವಾರಣೆಗಾಗಿ ಅಶ್ವಮೇಧ ಯಾಗ ಮಾಡಲು ತೀರ್ಮಾನಿಸಿದರು. ಅಂತೆಯೇ ಹೊರಟ ತುರಗ ಬಹಳಷ್ಟು ರಾಜ್ಯಗಳನ್ನು ಪ್ರವೇಶಿಸಿ ಕಪ್ಪ ಸಂಗ್ರಹಣೆ ಮಾಡುತ್ತಾ ಮಣಿಪುರಕ್ಕೂ ಬಂತು. ಬಬ್ರುವಾಹನನಿಂದ ಬಂಧಿತವಾದ ಕುದುರೆಯನ್ನು ಬಿಡಿಸುವಲ್ಲಿ ಸಾಗಿದ ಯುದ್ಧದಲ್ಲಿ ಕೃಷ್ಣಸಖನಾದ ಪಾರ್ಥ ಮರಣವನ್ನಪ್ಪಿದ್ದಾನೆ. ಅರ್ಜುನನ ಮರಣಕ್ಕೆ ಮಾಹಿಷ್ಮತಿಯ ರಾಣಿ ಜ್ವಾಲೆಯೇ ಪರೋಕ್ಷ ಕಾರಣವಾಗಿದ್ದಾಳೆ. ಗಂಗಾದೇವಿಯ ಮನಸ್ಸನ್ನು ಕದಡಿ, ಗಂಗೆಯ ಪುತ್ರನಾದ ಭೀಷ್ಮಾಚಾರ್ಯರನ್ನು ಕೊಂದ ಅರ್ಜುನನಿಗೇನೂ ಮಾಡದೆ ನಿನ್ನ ಪುತ್ರ ಭೀಷ್ಮನ ನಿಷ್ಕಳಂಕ ಸಚ್ಚಾರಿತ್ರ್ಯಕ್ಕೆ ಅನ್ಯಾಯ, ಅಪಚಾರ ಎಸಗಿರುವೆ. ನೀನೂ ಒಬ್ಬಳು ತಾಯಿಯೋ? ಪುತ್ರ ವಿಯೋಗದ ದುಃಖ ನಿನ್ನನ್ನು ತಟ್ಟಲಿಲ್ಲ ಎಂದರೆ ಜಗದ ಮಾತೆಯರಲ್ಲೇ ನೀನು ಕಳಂಕಿತೆ ಎಂಬಿತ್ಯಾದಿ ಚುಚ್ಚು ನುಡಿಗಳಿಂದ ಕೆರಳಿಸಿದ ಪರಿಣಾಮ ಅರ್ಜುನ ಶಾಪಗ್ರಸ್ಥನಾದ. ಗಂಗೆಯ ಶಾಪದಂತೆ ತನ್ನ ಮಗನಾದ ಬಬ್ರುವಾಹನನ ಕೈಯಲ್ಲಿ ಅರ್ಜುನ ಸತ್ತು ಧರೆಗುರುಳಿದ್ದಾನೆ. ಅರ್ಜುನ ನಮಗೂ ಸಂಬಂಧಿಯಲ್ಲವೇ? ನಮ್ಮ ಉಲೂಪಿಗೆ ಗಂಡನೂ, ಇರಾವಂತನಿಗೆ ತಂದೆಯೂ ಆಗಿದ್ದಾನೆ. ಹಾಗಾಗಿ ನಿಮ್ಮ ಸನ್ನಿಧಾನದಲ್ಲಿ ನನ್ನ ಪ್ರಾರ್ಥನೆ, ನಮ್ಮವನೇ ಆಗಿರುವ ಅರ್ಜುನನ ಪ್ರಾಣ ಉಳಿಸಲು ಸಂಜೀವಕ ಮಣಿಯನ್ನು ದಯಪಾಲಿಸಬೇಕು. ಅರ್ಜುನ ಸಂಬಂಧದಲ್ಲಿ ನಿಮಗೆ ಅಳಿಯನು, ಶ್ರೀಕೃಷ್ಣನ ಸಖನು, ದೇವರಾಜ ಇಂದ್ರನ ಪುತ್ರನು ಮಾತ್ರವಲ್ಲ ಧರ್ಮ ಮೂರ್ತಿಯಾದ ಯುಧಿಷ್ಟಿರನ ಸೋದರನಾಗಿದ್ದಾನೆ. ಹಾಗಾಗಿ ಅರ್ಜುನನ್ನು ಬದುಕಿಸಲು ಸಂಜೀವಕ ಮಣಿಯನ್ನು ತಾವು ನೀಡಿದರೆ ಮಹದುಪಕಾರವಾಗುತ್ತದೆ” ಎಂದು ಸವಿವರವಾಗಿ ತಿಳಿ ಹೇಳಿದ ಪುಂಡರೀಕ, ಈ ವಿಚಾರಕ್ಕೆ ಉಲೂಪಿ ಸಾಕ್ಷಿಯಾಗಿ ಕಳುಹಿಸಿದ್ದ ಆಕೆಯ ಕಂಠಾಭರಣಗಳನ್ನು ಆದಿಶೇಷನ ಮುಂದೆ ಇಟ್ಟು ಬೇಡಿದನು.
ಆದಿಶೇಷನು ಪುತ್ರಿ ಉಲೂಪಿಯ ಕಂಠಭೂಷಣ, ಕರ್ಣಾಭರಣಗಳನ್ನು ನೋಡಿಯೇ ಗುರುತಿಸಿದನು. ತನ್ನ ಮಗಳ ಗಂಡ ಮಡಿದ ವಿಚಾರ ನಿಜವೆಂದರಿತು ಮರುಗಿದನು. ಕೂಡಲೇ ತನ್ನ ಆಸ್ಥಾನದಲ್ಲಿರುವ ತಕ್ಷಕನೇ ಮೊದಲಾದ ನಾಗರಾಜರನ್ನು ಕರೆದು “ಪುಂಡರೀಕನು ನಿವೇದಿಸಿಕೊಂಡಿರುವ ವಿಚಾರದಲ್ಲಿ ನ್ಯಾಯವಿದೆ. ನಮಗೆ ಸಂಬಂಧಿಯೇ ಆಗಿರುವ ಕಾರಣ ಅರ್ಜುನ ಅನ್ಯನಾಗಲಾರ. ಹಾಗಾಗಿ ಆತನ ಪುನಶ್ಚೇತನಕ್ಕಾಗಿ ಸಂಜೀವಕ ಮಣಿ ನೀಡುವುದಾದರೆ ನನ್ನ ಆಕ್ಷೇಪವಿಲ್ಲ. ಮಾತ್ರವಲ್ಲದೆ ಅರ್ಜುನ ಹರಿಭಕ್ತ, ಉತ್ತಮ ವ್ಯಕ್ತಿ, ದೇವರಾಜ ಇಂದ್ರನ ಮಗ ಎಲ್ಲಕ್ಕಿಂತ ಹೆಚ್ಚಾಗಿ ನಮಗೆ ಅಳಿಯನೇ ಆಗಿದ್ದಾನೆ. ಈ ಕುರಿತಾಗಿ ನಿಮ್ಮ ಅಭಿಪ್ರಾಯವೇನೆಂದು ತಿಳಿಸಿ” ಎಂದನು.
ಆಗ ಸಮಯ ಸಾಧಕನೂ ದುಷ್ಟನೂ ಆಗಿರುವ ಧೃತರಾಷ್ಟ್ರ ಎಂಬ ಸರ್ಪರಾಜನೋರ್ವ ಎದ್ದು ಆಕ್ಷೇಪಿಸಿದನು “ಹೇ! ನಾಗೇಂದ್ರ, ಸಂಜೀವಕ ಮಣಿ ಇರುವುದು ನಮ್ಮ ನಾಗ ಸಂಕುಲದ ವಿನಿಯೋಗಕ್ಕೆ. ನಮ್ಮ ಸಂಕಷ್ಟ ನಿವಾರಣೆಗೆ ಇರುವುದನ್ನು ಪ್ರಪಂಚಕ್ಕೆ ಪರಿಚಯಿಸಿದರೆ ಅನಾಹುತಗಳಿಗೆ ಕಾರಣವಾದೀತು. ಮಾತ್ರವಲ್ಲ ಸ್ವಭಾವತಃ ಮನುಷ್ಯರು ದುರುಳರು, ಕೃತಘ್ನರು, ನೀಚರು. ಯಾರೇ ಉಪಕಾರ ಮಾಡಿದರೂ ತಮ್ಮ ಕೆಲಸ ಕೈಗೂಡಿದ ಬಳಿಕ ತಿರುಗಿ ನಿಲ್ಲುತ್ತಾರೆ. ಅದು ಮನುಷ್ಯರ ಹುಟ್ಟುಗುಣ. ಈಗ ನೀನು ಉಪಕಾರ ಬುದ್ದಿಯಿಂದ ಸಂಜೀವಕ ಮಣಿ ನೀಡಿದರೆ ತಮ್ಮ ಕೆಲಸ ಪೂರೈಸಿ ಮರಳಿ ತಂದೊಪ್ಪಿಸುತ್ತಾರೆ ಎಂಬ ಭರವಸೆ ಇದೆಯೇ? ಉಪಕಾರ ಸ್ಮರಣೆಯೇ ಇಲ್ಲದ ಮನುಷ್ಯರ ಸಹವಾಸ ನಮಗೆ ಬೇಡವೇ ಬೇಡ. ಉಪಕಾರ ಬೇಡುವಾಗ ಸಜ್ಜನರಾಗಿಯೇ ಇರುತ್ತಾರೆ. ಆದರೆ ತಮ್ಮ ಕಾರ್ಯ ಸಾಧನೆ ಆದ ಕೂಡಲೆ ಮರೆತು ವೈರಿಗಳಾಗಿ ಬಿಡುತ್ತಾರೆ. ಹಾಗಾಗಿ ಸಂಜೀವಕ ಮಣಿಯನ್ನು ನೀಡುವುದು ಬೇಡ. ನೀಡಿದರೆ ನಮಗೆ ಆಪತ್ತು ಕಟ್ಟಿಟ್ಟ ಬುತ್ತಿ” ಎಂದನು.


































