
ನವದೆಹಲಿ: ಜಾಗತಿಕ ತೈಲ ಮತ್ತು ಅನಿಲ ಪೂರೈಕೆಯ ಮೇಲಿನ ಒತ್ತಡದ ನಡುವೆ, ಕೇಂದ್ರ ಸರ್ಕಾರ ಎಲ್‌ಪಿಜಿ ಮತ್ತು ಪಿಎನ್‌ಜಿ ಸಂಪರ್ಕಗಳಿಗೆ ಸಂಬಂಧಿಸಿದಂತೆ ಹೊಸ ನಿಯಮ ಜಾರಿಗೆ ತಂದಿದೆ. ಇನ್ನು ಮುಂದೆ ಒಂದೇ ಮನೆಯಲ್ಲಿ ಎಲ್‌ಪಿಜಿ ಸಿಲಿಂಡರ್ ಮತ್ತು ಪಿಎನ್‌ಜಿ ಸಂಪರ್ಕ ಎರಡನ್ನೂ ಒಟ್ಟಿಗೆ ಬಳಸಲು ಅವಕಾಶ ಇರುವುದಿಲ್ಲ ಎಂದು ತಿಳಿಸಲಾಗಿದೆ.
ಮಧ್ಯಪ್ರಾಚ್ಯದಲ್ಲಿ ಹೆಚ್ಚುತ್ತಿರುವ ಉದ್ವಿಗ್ನತೆ, ವಿಶೇಷವಾಗಿ ಹಾರ್ಮುಝ್ ಜಲಸಂಧಿಯ ಸುತ್ತಲಿನ ಪರಿಸ್ಥಿತಿ, ಜಾಗತಿಕ ಇಂಧನ ಪೂರೈಕೆಗೆ ಆತಂಕ ಮೂಡಿಸಿದೆ. ತೈಲ ಮತ್ತು ಅನಿಲ ಆಮದುಗಳ ಮೇಲೆ ಅವಲಂಬಿತವಾಗಿರುವ ಭಾರತಕ್ಕೆ ಇದರಿಂದ ಪೂರೈಕೆ ಸಮಸ್ಯೆಯ ಭೀತಿ ಎದುರಾಗಿದ್ದು ಈ ಹಿನ್ನೆಲೆಯಲ್ಲಿ “ಒಂದು ಮನೆ – ಒಂದು ಅನಿಲ ಸಂಪರ್ಕ” ಎಂಬ ನಿಯಮವನ್ನು ಸರ್ಕಾರ ಜಾರಿಗೆ ತಂದಿದೆ.
ಹೀಗಾಗಿ ಈಗಾಗಲೇ ಪಿಎನ್‌ಜಿ ಬಳಸುತ್ತಿರುವ ಮನೆಗಳು ಎಲ್‌ಪಿಜಿ ಸಂಪರ್ಕವನ್ನು ಹಿಂತಿರುಗಿಸಬೇಕಾಗುತ್ತದೆ ಎಂದು ತೈಲ ಕಂಪನಿಗಳಿಗೆ ಸೂಚನೆ ನೀಡಲಾಗಿದೆ. ನಕಲಿ ಸಂಪರ್ಕಗಳನ್ನು ತಡೆಯುವುದು ಹಾಗೂ ಎಲ್‌ಪಿಜಿ ಅವಲಂಬಿತ ಮನೆಗಳಿಗೆ ಸಮರ್ಪಕ ಪೂರೈಕೆ ಖಚಿತಪಡಿಸುವ ಉದ್ದೇಶದಿಂದ ಈ ಕ್ರಮ ಕೈಗೊಳ್ಳಲಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ಅನಿಲ ಕಂಪನಿಗಳು ಈಗಾಗಲೇ ಗ್ರಾಹಕರಿಗೆ ಸಂದೇಶ ಕಳುಹಿಸಲು ಆರಂಭಿಸಿದ್ದು ಪಿಎನ್‌ಜಿ ಸಂಪರ್ಕ ಹೊಂದಿರುವವರು ತಮ್ಮ ಎಲ್‌ಪಿಜಿ ಸಂಪರ್ಕದ ಸ್ಥಿತಿಯನ್ನು ಪರಿಶೀಲಿಸಿ ಅಗತ್ಯವಿದ್ದರೆ ರದ್ದುಪಡಿಸುವಂತೆ ಸೂಚಿಸಲಾಗಿದೆ. ನಿಯಮ ಉಲ್ಲಂಘಿಸಿದರೆ ಎಲ್‌ಪಿಜಿ ಸಂಪರ್ಕ ಕಡಿತ, ರೀಫಿಲಿಂಗ್ ಸೇವೆ ಸ್ಥಗಿತ ಹಾಗೂ ದಂಡದಂತಹ ಕ್ರಮಗಳನ್ನು ಕೈಗೊಳ್ಳಬಹುದು ಎಂದು ಎಚ್ಚರಿಕೆ ನೀಡಲಾಗಿದೆ.
ಗ್ರಾಹಕರು ತಮ್ಮ ಮೊಬೈಲ್ ಸಂಖ್ಯೆ ಅಥವಾ ಎಲ್‌ಪಿಜಿ ಐಡಿ ಮೂಲಕ ಅಧಿಕೃತ ಪೋರ್ಟಲ್‌ನಲ್ಲಿ ಸಂಪರ್ಕ ವಿವರಗಳನ್ನು ಪರಿಶೀಲಿಸಬಹುದು. ಇಂಡೇನ್, HP ಗ್ಯಾಸ್ ಮತ್ತು ಭಾರತ್ ಗ್ಯಾಸ್ ವೆಬ್‌ಸೈಟ್‌ಗಳಲ್ಲಿಯೂ ಈ ಮಾಹಿತಿ ಲಭ್ಯವಿದೆ.
ಪಿಎನ್‌ಜಿ ಪೈಪ್‌ಲೈನ್ ಮೂಲಕ ಮನೆಗಳಿಗೆ ನೇರವಾಗಿ ಪೂರೈಕೆಯಾಗುವುದರಿಂದ ಇದು ಹೆಚ್ಚು ಸ್ಥಿರ ವ್ಯವಸ್ಥೆ ಎಂದು ಪರಿಗಣಿಸಲಾಗಿದೆ. ನಗರ ಪ್ರದೇಶಗಳಲ್ಲಿ ಹೆಚ್ಚಿನ ಮನೆಗಳು ಪಿಎನ್‌ಜಿಗೆ ಬದಲಾಯಿಸಲು ಸರ್ಕಾರ ಪ್ರೋತ್ಸಾಹ ನೀಡುತ್ತಿದೆ.





















