
ಬೆಂಗಳೂರು: ರಾಜ್ಯ ಸರ್ಕಾರವು ಕ್ರೀಡಾ ಕ್ಷೇತ್ರದಲ್ಲಿ ಸಾಧನೆ ಮಾಡಿದ ಪ್ರತಿಭಾವಂತರಿಗೆ ರಾಜ್ಯ ಸಿವಿಲ್ ಸೇವೆಗಳ ನೇಮಕಾತಿಯಲ್ಲಿ ಶೇ.2ರಷ್ಟು ಮೀಸಲಾತಿ ಕಲ್ಪಿಸಲು ಮಹತ್ವದ ನಿರ್ಧಾರ ಕೈಗೊಂಡಿದ್ದು ಈ ಸಂಬಂಧ ‘ಕರ್ನಾಟಕ ನಾಗರಿಕ ಸೇವಾ (ಸಾಮಾನ್ಯ) ನೇಮಕಾತಿ (ತಿದ್ದುಪಡಿ) ನಿಯಮಗಳು, 2026’ಕ್ಕೆ ಸಚಿವ ಸಂಪುಟ ಸಭೆಯಲ್ಲಿ ಅನುಮೋದನೆ ದೊರೆತಿದೆ.
ಅಥ್ಲೆಟಿಕ್ಸ್, ಅರ್ಚರಿ, ಬಾಸ್ಕೆಟ್ಬಾಲ್, ಬಾಕ್ಸಿಂಗ್, ಸ್ವಿಮ್ಮಿಂಗ್, ಫುಟ್ಬಾಲ್, ಜಿಮ್ನಾಸ್ಟಿಕ್ಸ್, ಹಾಕಿ, ಕಬಡ್ಡಿ, ರೈಫಲ್ ಶೂಟಿಂಗ್, ವಾಲಿಬಾಲ್, ಭಾರ ಎತ್ತುವಿಕೆ, ರೆಸ್ಲಿಂಗ್, ಜೂಡೋ, ಕ್ರಿಕೆಟ್, ಖೋ ಖೋ ಹಾಗೂ ಬ್ಯಾಡ್ಮಿಂಟನ್ ಸೇರಿದಂತೆ 20ಕ್ಕೂ ಹೆಚ್ಚು ಕ್ರೀಡೆಗಳನ್ನು ಈ ಯೋಜನೆಯಡಿ ಒಳಗೊಂಡಿದ್ದು ರಾಷ್ಟ್ರೀಯ ಮತ್ತು ಅಂತಾರಾಷ್ಟ್ರೀಯ ಮಟ್ಟದಲ್ಲಿ ಕರ್ನಾಟಕವನ್ನು ಪ್ರತಿನಿಧಿಸಿ ಸಾಧನೆ ಮಾಡಿದ ಕ್ರೀಡಾಪಟುಗಳಿಗೆ ಸರ್ಕಾರಿ ನೇಮಕಾತಿಯಲ್ಲಿ ಶೇ.2 ಮೀಸಲಾತಿಯ ಲಾಭ ದೊರೆಯಲಿದೆ.
ಇದರ ಜೊತೆಗೆ, ಕ್ರೀಡಾಪಟುಗಳು ಪಡೆದಿರುವ ಪದಕಗಳ ಆಧಾರದ ಮೇಲೆ ನೇಮಕಾತಿಯಲ್ಲಿ ಅಂಕಗಳನ್ನು ನೀಡುವ ವ್ಯವಸ್ಥೆಯನ್ನೂ ಸರ್ಕಾರ ಜಾರಿಗೆ ತರುತ್ತಿದ್ದು ಒಲಿಂಪಿಕ್ ಸ್ಪರ್ಧೆಗಳಲ್ಲಿ ಚಿನ್ನ, ಬೆಳ್ಳಿ ಮತ್ತು ಕಂಚಿನ ಪದಕ ವಿಜೇತರಿಗೆ ಕ್ರಮವಾಗಿ 75, 74 ಹಾಗೂ 73 ಅಂಕಗಳನ್ನು ನೀಡಲಾಗುತ್ತದೆ. ಇದೇ ಮಾನದಂಡ ಗ್ರ್ಯಾಂಡ್ಸ್ಲ್ಯಾಮ್ ಸ್ವಿಮ್ಮಿಂಗ್, ಡೇವಿಸ್ ಕಪ್, ಗ್ರ್ಯಾಂಡ್ ಮಾಸ್ಟರ್ ಚೆಸ್, ವಿಂಬಲ್ಡನ್, ಕಾಮನ್ವೆಲ್ತ್ ಮತ್ತು ಸಾರ್ಕ್ ಚಾಂಪಿಯನ್ಶಿಪ್ ಸ್ಪರ್ಧೆಗಳಿಗೂ ಅನ್ವಯವಾಗಲಿದೆ.





















