
ಹಾವೇರಿ: ನವರಾತ್ರಿ ಪ್ರಯುಕ್ತ ರಾಣೇಬೆನ್ನೂರಿನ ದೇವರಗುಡ್ಡದಲ್ಲಿ ನಡೆದ ಐತಿಹಾಸಿಕ ಮಾಲತೇಶ ದೇವರ ಕಾರ್ಣಿಕೋತ್ಸವದಲ್ಲಿ ಗೊರವಯ್ಯ ನಾಗಪ್ಪ ಅಜ್ಜ ಉರ್ಮಿ ಅವರು, ‘ಕೆಂಪುಕೋಟೆಯ ಮೇಲೆ ಮುತ್ತು ಚೆಲ್ಲಿತ್ತಲೇ ಪರಾಕ್’ ಎಂದು ವರ್ಷದ ಕಾರ್ಣಿಕ ನುಡಿದಿದ್ದಾರೆ.
ಒಂಬತ್ತು ದಿನಗಳ ಉಪವಾಸ ವ್ರತದ ಬಳಿಕ 15 ಅಡಿ ಎತ್ತರದ ಬಿಲ್ಲನ್ನೇರಿ ಗೊರವಯ್ಯ ಭವಿಷ್ಯ ನುಡಿದಿದ್ದು, ಅವರ ಕಾರ್ಣಿಕದ ಮಾತು ಭಕ್ತರಲ್ಲಿ ಕುತೂಹಲ ಮೂಡಿಸಿದೆ.
ಕಾರ್ಣಿಕದ ‘ಕೆಂಪುಕೋಟೆ’ ಎಂಬ ಪದವನ್ನು ದೆಹಲಿ ಮತ್ತು ದೇಶದ ಆಡಳಿತ ವ್ಯವಸ್ಥೆಗೆ ಸಂಬಂಧಿಸಿದ ರಾಜಕೀಯ ಬೆಳವಣಿಗೆಗಳ ಸೂಚನೆಯೆಂದು ಕೆಲವರು ವಿಶ್ಲೇಷಿಸಿದ್ದಾರೆ. ಇನ್ನು ‘ಮುತ್ತು ಚೆಲ್ಲಿತ್ತಲೇ’ ಎಂಬ ನುಡಿ ಉತ್ತಮ ಮಳೆ, ಸಮೃದ್ಧ ಬೆಳೆ ಹಾಗೂ ಜನರ ಬದುಕಿನಲ್ಲಿ ಸಂಪತ್ತು ಮತ್ತು ನೆಮ್ಮದಿ ಹೆಚ್ಚಾಗುವ ಸಂಕೇತವೆಂದು ಅರ್ಥೈಸಲಾಗಿದೆ.






















