ಹೋರಾಟ ಅಂತ್ಯಗೊಳಿಸಿದ ಕರವೇ

ಬೆಂಗಳೂರು: ಕನ್ನಡಿಗರ ಭಾಷಾಪ್ರೇಮವನ್ನು ಪಹಲ್ಗಾಮ್ ಭಯೋತ್ಪಾದನೆಗೆ ಹೋಲಿಕೆ ಮಾಡಿ ವಿವಾದಕ್ಕೆ ಸಿಲುಕಿದ್ದ ಬಾಲಿವುಡ್ ಗಾಯಕ ಸೋನು ನಿಗಮ್, ಇದೀಗ ಕನ್ನಡಿಗರಲ್ಲಿ ಬೇಷರತ್ ಕ್ಷಮೆಯಾಚಿಸಿದ್ದಾರೆ. ಈ ಕುರಿತು ಕರ್ನಾಟಕ ರಕ್ಷಣಾ ವೇದಿಕೆ ರಾಜ್ಯಾಧ್ಯಕ್ಷ ಟಿ.ಎ. ನಾರಾಯಣ ಗೌಡ ಅವರು ಸಾಮಾಜಿಕ ಜಾಲತಾಣದಲ್ಲಿ ವಿಡಿಯೋ ಹಂಚಿಕೊಂಡಿದ್ದಾರೆ.
ಸೋನು ನಿಗಮ್ ತಮ್ಮೊಂದಿಗೆ ಮಾತನಾಡಿದ್ದು, ತಮ್ಮ ಹೇಳಿಕೆಯಿಂದ ಕನ್ನಡಿಗರ ಮನಸ್ಸಿಗೆ ನೋವಾಗಿದೆ ಎಂಬುದನ್ನು ಅರ್ಥಮಾಡಿಕೊಂಡಿದ್ದಾರೆ ಎಂದು ನಾರಾಯಣ ಗೌಡ ತಿಳಿಸಿದ್ದಾರೆ. ಸೋನು ನಿಗಮ್ ಅವರ ಹಾಡುಗಳನ್ನು ಕನ್ನಡಿಗರು ಇಷ್ಟಪಟ್ಟಿದ್ದು, ಅವರ ವಿರುದ್ಧ ವೈಯಕ್ತಿಕ ದ್ವೇಷವಿರಲಿಲ್ಲ. ಆದರೆ, ವಿವಾದಾತ್ಮಕ ಹೇಳಿಕೆಯಿಂದಾಗಿ ಪ್ರತಿಭಟನೆ ನಡೆಸುವುದು ಅನಿವಾರ್ಯವಾಗಿತ್ತು. ಇದೀಗ ಅವರು ಕ್ಷಮೆ ಕೇಳಿರುವುದರಿಂದ ಹೋರಾಟವನ್ನು ಅಂತ್ಯಗೊಳಿಸುವುದಾಗಿ ಅವರು ಹೇಳಿದ್ದಾರೆ.
ಘಂಟಸಾಲ, ಪಿ.ಬಿ. ಶ್ರೀನಿವಾಸ್, ಯೇಸುದಾಸ್, ಎಸ್. ಜಾನಕಿ, ವಾಣಿ ಜಯರಾಮ್ ಮತ್ತು ಚಿತ್ರಾ ಸೇರಿದಂತೆ ಹಲವು ಗಾಯಕರು ಕನ್ನಡಿಗರಲ್ಲದಿದ್ದರೂ ಕನ್ನಡಿಗರ ಪ್ರೀತಿಗೆ ಪಾತ್ರರಾಗಿದ್ದಾರೆ. ಸೋನು ನಿಗಮ್ ಕೂಡ ಕನ್ನಡ ಸಂಗೀತ ಕ್ಷೇತ್ರಕ್ಕೆ ಕೊಡುಗೆ ನೀಡಿದ ಪ್ರಮುಖ ಗಾಯಕರಲ್ಲಿ ಒಬ್ಬರು. ಈ ಘಟನೆಯನ್ನು ಮರೆತು, ಅವರು ಮತ್ತಷ್ಟು ಕನ್ನಡ ಹಾಡುಗಳನ್ನು ಹಾಡಲಿ ಹಾಗೂ ಕರ್ನಾಟಕದಲ್ಲಿ ಅವರ ಕಾರ್ಯಕ್ರಮಗಳು ನಡೆಯಲಿ ಎಂದು ನಾರಾಯಣ ಗೌಡ ಆಶಿಸಿದ್ದಾರೆ.
ವಿಡಿಯೋದಲ್ಲಿ ಮಾತನಾಡಿರುವ ಸೋನು ನಿಗಮ್, ಕನ್ನಡಿಗರ ಮನಸ್ಸಿಗೆ ನೋವುಂಟು ಮಾಡುವುದು ತಮ್ಮ ಉದ್ದೇಶವಾಗಿರಲಿಲ್ಲ ಎಂದು ಸ್ಪಷ್ಟಪಡಿಸಿದ್ದಾರೆ. ನಾರಾಯಣ ಗೌಡ ಅವರೊಂದಿಗೆ ಮಾತನಾಡಿದ್ದು, ತಮ್ಮ ಮಾತುಗಳಿಂದ ಯಾರಿಗಾದರೂ ನೋವಾಗಿದ್ದರೆ ಕ್ಷಮಿಸುವಂತೆ ಮನವಿ ಮಾಡಿದ್ದಾರೆ. ಕನ್ನಡಿಗರು ತಮಗೆ ಅಪಾರ ಪ್ರೀತಿ ನೀಡಿದ್ದಾರೆ. ಅಪಾರ್ಥದಿಂದ ಆ ಪ್ರೀತಿ ದೂರವಾಗಬಾರದು ಎಂದು ಹೇಳಿ ಮತ್ತೊಮ್ಮೆ ಕ್ಷಮೆಯಾಚಿಸಿದ್ದಾರೆ.






















