ಯುವ ದಸರಾ ವೇದಿಕೆಯಲ್ಲಿ ದರ್ಶನ್ ಪರ ಧನ್ವೀರ್ ಹೇಳಿಕೆ

ಚಾಮರಾಜನಗರ: ಚಾಮರಾಜನಗರದಲ್ಲಿ ನಡೆದ ಯುವ ದಸರಾ ಕಾರ್ಯಕ್ರಮದಲ್ಲಿ ನಟ ಧನ್ವೀರ್ ಗೌಡ ಅವರು ನಟ ದರ್ಶನ್ ಪರವಾಗಿ ನೀಡಿದ ಹೇಳಿಕೆಗಳು ಇದೀಗ ಚರ್ಚೆಗೆ ಗ್ರಾಸವಾಗಿವೆ.
ಜಿಲ್ಲಾ ದಸರಾ ಮಹೋತ್ಸವದ ವೇದಿಕೆಗೆ ದರ್ಶನ್ ಆಪ್ತ ಧನ್ವೀರ್ ಗೌಡ ಆಗಮಿಸುತ್ತಿದ್ದಂತೆ ಅಭಿಮಾನಿಗಳು ‘ಡಿ ಬಾಸ್, ಡಿ ಬಾಸ್’ ಎಂದು ಘೋಷಣೆ ಕೂಗಿ ಸ್ವಾಗತಿಸಿದರು.
ಬಳಿಕ ಮಾತನಾಡಿದ ಧನ್ವೀರ್, ಅಭಿಮಾನಿಗಳ ಪ್ರೀತಿ ಮತ್ತು ಪ್ರೋತ್ಸಾಹಕ್ಕೆ ಧನ್ಯವಾದ ತಿಳಿಸಿದರು. ತಾಯಿ ಚಾಮುಂಡೇಶ್ವರಿಯ ಆಶೀರ್ವಾದ ಎಲ್ಲರ ಮೇಲಿರಲಿ ಎಂದು ಹಾರೈಸಿದ ಅವರು, ಮಾದಪ್ಪನ ಬೆಟ್ಟದ ಮೇಲಿನ ತಮ್ಮ ಅಭಿಮಾನವನ್ನೂ ವ್ಯಕ್ತಪಡಿಸಿದರು.
ಇದೇ ವೇಳೆ ದರ್ಶನ್ ವಿರೋಧಿಗಳಿಗೆ ತಿರುಗೇಟು ನೀಡಿದ ಅವರು, “ಎಷ್ಟೇ ಕೂಗ್ರಿ, ಏನೇ ಮಾಡ್ರಿ. ಯಾವ ನಾಯಿ ನರಿಗಳು ಏನೇ ಕುತಂತ್ರ ಮಾಡಿದ್ರೂ ಅವರನ್ನು ಏನು ಮಾಡಲಿಕ್ಕೆ ಆಗಲ್ಲ” ಎಂದು ಹೇಳಿದರು. ದರ್ಶನ್ ಆದಷ್ಟು ಬೇಗ ಹೊರಬರಲಿದ್ದು, ಅಭಿಮಾನಿಗಳ ಪ್ರೀತಿ ಮತ್ತು ಬೆಂಬಲ ಸದಾ ಅವರೊಂದಿಗಿರಲಿ ಎಂದು ಮನವಿ ಮಾಡಿದರು.
ಧನ್ವೀರ್ ಅವರ ಮಾತುಗಳಿಗೆ ಅಭಿಮಾನಿಗಳು ಜೋರಾಗಿ ಘೋಷಣೆ ಕೂಗಿದರು. ಆದರೆ, ಸಿನಿಮಾ ವೇದಿಕೆಯಲ್ಲಿ ಇಂತಹ ಹೇಳಿಕೆ ನೀಡಿದ್ದರೆ ಆಕ್ಷೇಪವಿರುತ್ತಿರಲಿಲ್ಲ. ಯುವ ದಸರಾ ವೇದಿಕೆಯಲ್ಲಿ ಈ ವಿಚಾರ ಪ್ರಸ್ತಾಪಿಸಿರುವುದು ಇದೀಗ ಪರ-ವಿರೋಧ ಚರ್ಚೆಗೆ ಕಾರಣವಾಗಿದೆ.






















