
ಬೆಂಗಳೂರು: ವ್ಯಕ್ತಿಯೊಬ್ಬರ ಅನುಮತಿಯಿಲ್ಲದೆ ಅವರ ಖಾಸಗಿ ಫೋಟೋ ಅಥವಾ ವಿಡಿಯೊಗಳನ್ನು ಸಾಮಾಜಿಕ ಜಾಲತಾಣ ಅಥವಾ ಇತರೆ ವೇದಿಕೆಗಳಲ್ಲಿ ಹಂಚಿಕೊಂಡರೆ ತಕ್ಷಣವೇ ಎಫ್‌ಐಆರ್ ದಾಖಲಿಸಬೇಕು ಎಂದು ರಾಜ್ಯ ಪೊಲೀಸ್ ಮಹಾನಿರ್ದೇಶಕ ಹಾಗೂ ಐಜಿಪಿ ಎಂ.ಎ. ಸಲೀಮ್ ಆದೇಶ ಹೊರಡಿಸಿದ್ದಾರೆ.
ಸೆಕ್ಸ್ಟಾರ್ಷನ್, ಆನ್‌ಲೈನ್ ಬ್ಲ್ಯಾಕ್‌ಮೇಲ್ ಹಾಗೂ ರಿವೆಂಜ್ ಪೋರ್ನೋಗ್ರಫಿ ಸಂಬಂಧಿತ ದೂರುಗಳನ್ನು ವಿಳಂಬ ಮಾಡುವುದು ಅಥವಾ ತಿರಸ್ಕರಿಸುವಂತಿಲ್ಲ ಎಂದು ಸ್ಪಷ್ಟಪಡಿಸಲಾಗಿದೆ. ಚಿತ್ರ ತೆಗೆಯಲು ನೀಡಿದ ಒಪ್ಪಿಗೆ ಮತ್ತು ಅದನ್ನು ಹಂಚಿಕೊಳ್ಳಲು ನೀಡುವ ಒಪ್ಪಿಗೆ ಎರಡು ಬೇರೆ ವಿಚಾರಗಳಾಗಿವೆ ಎಂದು ತಿಳಿಸಲಾಗಿದೆ.
ಸಂತ್ರಸ್ತರು ಮೊದಲು ಚಿತ್ರೀಕರಣಕ್ಕೆ ಒಪ್ಪಿದ್ದರೂ, ಅವರ ಅನುಮತಿಯಿಲ್ಲದೆ ಖಾಸಗಿ ದೃಶ್ಯಗಳನ್ನು ಹಂಚಿಕೊಳ್ಳುವುದು ಅಪರಾಧವಾಗಿದ್ದು, ಇಂತಹ ಪ್ರಕರಣಗಳಲ್ಲಿ ಕ್ರಮ ಕೈಗೊಳ್ಳದ ಅಧಿಕಾರಿಗಳ ವಿರುದ್ಧ ಶಿಸ್ತು ಕ್ರಮ ಜರುಗಿಸಲಾಗುವುದು ಎಂದು ಎಚ್ಚರಿಕೆ ನೀಡಲಾಗಿದೆ.

































