
ಬೆಂಗಳೂರು: ವಿಧಾನಸೌಧದ ಭವ್ಯ ಮೆಟ್ಟಿಲುಗಳ ಮೇಲೆ ನವೆಂಬರ್ 9ರಂದು ಆಯೋಜಿಸಲು ಉದ್ದೇಶಿಸಿದ್ದ ‘ಉರ್ದು ಹಬ್ಬ’ಕ್ಕೆ ಬಿಜೆಪಿ ಹಾಗೂ ಕನ್ನಡಪರ ಸಂಘಟನೆಗಳಿಂದ ವಿರೋಧ ವ್ಯಕ್ತವಾದ ಬೆನ್ನಲ್ಲೇ ರಾಜ್ಯ ಸರ್ಕಾರ ತನ್ನ ನಿರ್ಧಾರದಿಂದ ಹಿಂದೆ ಸರಿದಿದೆ.
ಈ ಕುರಿತು ಸ್ಪಷ್ಟನೆ ನೀಡಿರುವ ಮುಖ್ಯಮಂತ್ರಿಗಳ ಕಚೇರಿ, ವಿಧಾನಸೌಧದ ಮೆಟ್ಟಿಲುಗಳ ಮೇಲೆ ಯಾವುದೇ ಖಾಸಗಿ ಅಥವಾ ಸರ್ಕಾರಿಯೇತರ ಕಾರ್ಯಕ್ರಮಗಳಿಗೆ ಅವಕಾಶ ನೀಡುವುದಿಲ್ಲ ಎಂದು ಗುರುವಾರ ಅಧಿಕೃತ ಪ್ರಕಟಣೆ ಹೊರಡಿಸಿದೆ. ಕಾರ್ಯಕ್ರಮಕ್ಕೆ ಸರ್ಕಾರ ಯಾವುದೇ ಅನುಮತಿ ನೀಡಿಲ್ಲ ಎಂದು ತಿಳಿಸಿದೆ.
ಇದಕ್ಕೂ ಮುನ್ನ ಸಚಿವ ಯು.ಟಿ. ಖಾದರ್ ಅವರು ನವೆಂಬರ್ 9ರಂದು ಉರ್ದು ದಿನಾಚರಣೆ ಅಂಗವಾಗಿ ವಿಧಾನಸೌಧದ ಮೆಟ್ಟಿಲುಗಳ ಮೇಲೆ ‘ಉರ್ದು ಹಬ್ಬ’ ನಡೆಯಲಿದೆ ಎಂದು ಘೋಷಿಸಿದ್ದರು.
ಸಚಿವರ ಹೇಳಿಕೆಗೆ ಬಿಜೆಪಿ ಹಿರಿಯ ಶಾಸಕ ಸುರೇಶ್ ಕುಮಾರ್ ಆಕ್ಷೇಪ ವ್ಯಕ್ತಪಡಿಸಿ, ವಿಧಾನಸೌಧವನ್ನು ನಿರ್ದಿಷ್ಟ ಸಮುದಾಯದ ಓಲೈಕೆಗೆ ಬಳಸಿಕೊಳ್ಳಬಾರದು. ಸರ್ಕಾರ ಕೂಡಲೇ ಈ ನಿರ್ಧಾರವನ್ನು ಹಿಂಪಡೆಯಬೇಕು ಎಂದು ಆಗ್ರಹಿಸಿದ್ದರು.





















