
ಮಂಗಳೂರು: ಮಳೆಯಿಂದಾಗಿ ಶಾಲೆಗಳಿಗೆ ಘೋಷಿಸಲಾಗಿದ್ದ ರಜೆಯನ್ನು ಸರಿದೂಗಿಸಲು ಮುಂಬರುವ ದಸರಾ ರಜೆ ಸಂದರ್ಭದಲ್ಲಿ ವಿಶೇಷ ತರಗತಿಗಳನ್ನು ನಡೆಸಲು ಶಾಲಾ ಶಿಕ್ಷಣ ಇಲಾಖೆ ಅನುಮತಿ ನೀಡಿದೆ. ಇದಕ್ಕೆ ಕೆಲವು ಷರತ್ತುಗಳನ್ನು ವಿಧಿಸಲಾಗಿದೆ.
ದಕ್ಷಿಣ ಕನ್ನಡ ಜಿಲ್ಲೆಯ ಶಾಲಾ ಮುಖ್ಯಸ್ಥರು ಹಾಗೂ ಕ್ಷೇತ್ರ ಶಿಕ್ಷಣಾಧಿಕಾರಿಗಳ ಮನವಿಯ ಮೇರೆಗೆ ಜಿಲ್ಲಾ ಡಿಡಿಪಿಐ ಅಕ್ಟೋಬರ್ 3ರಿಂದ 7ರವರೆಗೆ ತರಗತಿ ನಡೆಸಲು ಒಪ್ಪಿಗೆ ಸೂಚಿಸಿದ್ದಾರೆ. ಅಕ್ಟೋಬರ್ 3ರಂದು ರಜೆ ಘೋಷಿಸುವ ಶಾಲೆಗಳು ಶನಿವಾರ ಮಧ್ಯಾಹ್ನದ ಬಳಿಕ ಹೆಚ್ಚುವರಿ ತರಗತಿಗಳನ್ನು ನಡೆಸಿ ರಜೆ ಹೊಂದಾಣಿಕೆ ಮಾಡಿಕೊಳ್ಳಬೇಕು ಎಂದು ತಿಳಿಸಲಾಗಿದೆ.
ವಿಶೇಷ ತರಗತಿಗಳಿಗೆ ಮಕ್ಕಳನ್ನು ಕಳುಹಿಸಲು ಪೋಷಕರ ಲಿಖಿತ ಒಪ್ಪಿಗೆ ಕಡ್ಡಾಯವಾಗಿದೆ. ಅಲ್ಲದೆ, ಎಸ್‌ಡಿಎಂಸಿ ಸಭೆ ನಡೆಸಿ ನಿರ್ಧಾರವನ್ನು ನಡವಳಿಯಲ್ಲಿ ದಾಖಲಿಸಬೇಕು. ತರಗತಿ ನಡೆಸುವ ವಿವರಗಳನ್ನು ಸಂಬಂಧಪಟ್ಟ ಕ್ಷೇತ್ರ ಶಿಕ್ಷಣಾಧಿಕಾರಿಗಳಿಗೆ ಲಿಖಿತವಾಗಿ ಸಲ್ಲಿಸುವಂತೆ ಇಲಾಖೆ ಸೂಚಿಸಿದೆ.





















