
ಬೆಂಗಳೂರು: ಸ್ವಂತ ದುಡಿಮೆಯಿಂದ ಜೀವನ ನಿರ್ವಹಿಸುವ ಸಾಮರ್ಥ್ಯ ಹೊಂದಿರುವ ಹಾಗೂ ಆರ್ಥಿಕವಾಗಿ ಸ್ವಾವಲಂಬಿಯಾಗಿರುವ ಪತ್ನಿಗೆ ಪತಿಯಿಂದ ಜೀವನಾಂಶ ಪಡೆಯುವ ಅರ್ಹತೆ ಇಲ್ಲ ಎಂದು ಕರ್ನಾಟಕ ಹೈಕೋರ್ಟ್ ಮಹತ್ವದ ತೀರ್ಪು ನೀಡಿದೆ. ಪತ್ನಿಯು ತನ್ನನ್ನು ತಾನು ಪೋಷಿಸಿಕೊಳ್ಳಲು ಸಾಧ್ಯವಾಗದಿದ್ದರೆ ಮಾತ್ರ ಜೀವನಾಂಶಕ್ಕೆ ಅರ್ಹತೆ ಇರುತ್ತದೆ ಎಂದು ನ್ಯಾಯಾಲಯ ಸ್ಪಷ್ಟಪಡಿಸಿದೆ.
ಪತಿಯು ಮಾಸಿಕ 20 ಸಾವಿರ ರೂ. ಜೀವನಾಂಶ ನೀಡಬೇಕೆಂದು ಕೌಟುಂಬಿಕ ನ್ಯಾಯಾಲಯ ನೀಡಿದ್ದ ಆದೇಶ ಪ್ರಶ್ನಿಸಿ ಸಲ್ಲಿಸಲಾದ ಅರ್ಜಿಯ ವಿಚಾರಣೆ ನಡೆಸಿದ ನ್ಯಾಯಮೂರ್ತಿ ಚಿಲಕೂರು ಸುಮಾಲತಾ ಅವರ ಪೀಠ ಈ ಆದೇಶ ನೀಡಿದೆ.
ಪತಿಯ ಆದಾಯ ಪತ್ನಿಗಿಂತ ಹೆಚ್ಚಿದ್ದರೂ, ಆಕೆ ಉತ್ತಮ ಶಿಕ್ಷಣ ಪಡೆದು ತಿಂಗಳಿಗೆ 54,700 ರೂ. ಗಳಿಸುತ್ತಿದ್ದರೆ ಹಾಗೂ ಸ್ವತಂತ್ರವಾಗಿ ಜೀವನ ನಡೆಸುವ ಸಾಮರ್ಥ್ಯ ಹೊಂದಿದ್ದರೆ, ಆಕೆಯನ್ನು ಪತಿಯ ಮೇಲೆ ಅವಲಂಬಿತಳು ಎಂದು ಪರಿಗಣಿಸಲು ಸಾಧ್ಯವಿಲ್ಲ. ಆರ್ಥಿಕ ಸ್ವಾವಲಂಬನೆ ಜೀವನಾಂಶ ನಿರಾಕರಣೆಗೆ ಸೂಕ್ತ ಆಧಾರವಾಗಬಹುದು ಎಂದು ನ್ಯಾಯಪೀಠ ಅಭಿಪ್ರಾಯಪಟ್ಟಿದೆ.
ಈ ಪ್ರಕರಣದಲ್ಲಿ ಪತಿ ಕಂಪ್ಯೂಟರ್ ಸೈನ್ಸ್ ಎಂಜಿನಿಯರ್ ಆಗಿದ್ದು, ವಾರ್ಷಿಕ 40 ಲಕ್ಷ ರೂ. ಆದಾಯ ಹೊಂದಿದ್ದರು. ಐಟಿ ಕ್ಷೇತ್ರದಲ್ಲಿ ಕೆಲಸ ಮಾಡುತ್ತಿದ್ದ ಪತ್ನಿಯ ವಾರ್ಷಿಕ ಆದಾಯ 10 ಲಕ್ಷ ರೂ. ಆಗಿತ್ತು. ಅಲ್ಲದೆ, ತನ್ನ ಆದಾಯದಿಂದಲೇ ತಿಂಗಳಿಗೆ 35 ಸಾವಿರ ರೂ. ಖರ್ಚು ಮಾಡಿ ಪೋಷಕರನ್ನು ನೋಡಿಕೊಳ್ಳುತ್ತಿರುವುದಾಗಿ ಪತ್ನಿ ವಿಚಾರಣೆ ವೇಳೆ ತಿಳಿಸಿದ್ದರು.
ಇದನ್ನು ಪರಿಗಣಿಸಿದ ಹೈಕೋರ್ಟ್, ಪೋಷಕರನ್ನು ಪೋಷಿಸುವಷ್ಟು ಆರ್ಥಿಕ ಸಾಮರ್ಥ್ಯ ಹೊಂದಿರುವ ಮಹಿಳೆಗೆ ತನ್ನ ಜೀವನ ನಿರ್ವಹಣೆಗಾಗಿ ಪತಿಯ ನೆರವು ಅಗತ್ಯವಿದೆ ಎಂಬ ವಾದವನ್ನು ಒಪ್ಪಲು ಸಾಧ್ಯವಿಲ್ಲ ಎಂದು ಹೇಳಿದೆ.
ಇದೇ ವೇಳೆ, ದಂಪತಿಗಳ ನಡುವೆ ಭವಿಷ್ಯದಲ್ಲಿ ರಾಜಿ ಸಂಧಾನಕ್ಕೆ ಅವಕಾಶ ಉಳಿಯಬೇಕು ಎಂಬ ಉದ್ದೇಶದಿಂದ, ಪತಿಯು ಈಗಾಗಲೇ ಪತ್ನಿಗೆ ಪಾವತಿಸಿರುವ ಜೀವನಾಂಶದ ಹಣವನ್ನು ವಾಪಸ್ ಪಡೆಯಲು ಯಾವುದೇ ಕಾನೂನು ಕ್ರಮ ಕೈಗೊಳ್ಳಬಾರದು ಎಂದು ನ್ಯಾಯಾಲಯ ಸೂಚಿಸಿದೆ.

























