ಭಾಗ – 681
ಭರತೇಶ ಶೆಟ್ಟಿ, ಎಕ್ಕಾರು

… ಏನಮ್ಮಾ ನಿಮ್ಮ ನಿರ್ಧಾರ? ನೀವೀಗ ಈ ರೀತಿ ಮಾಡುತ್ತಿರುವುದು ನ್ಯಾಯವೆ? ಬಾಲ್ಯದಲ್ಲಿ ಅಪ್ಪನನ್ನು ಕಳಕೊಂಡ ನಮಗೆ ಸರ್ವಸ್ವವೂ ನೀವಾಗಿ ಸಾಕಿ ಸಲಹಿದಿರಿ. ನಿಮ್ಮ ಉಪದೇಶಗಳನ್ನು ಕೇಳಿ ನೀವಂದಂತೆಯೆ ನಡೆದು ಬದುಕಿದವರು ನಾವು. ನಿಮ್ಮ ಒಪ್ಪಿಗೆ ಪಡೆದು ಕ್ಷಾತ್ರ ಧರ್ಮ ಅನುಸರಿಸಿ ಯುದ್ಧ ಮಾಡಿ ಗೆದ್ದೆವು. ಈಗ ನಿಮ್ಮ ಮಕ್ಕಳು ಸಾಮ್ರಾಜ್ಯ ಆಳುವ ಸಮಯ ರಾಜ ಮಾತೆಯಾಗಿ ನಮ್ಮೊಂದಿಗೆ ಇರಬೇಕಾದುದು ನಿಮಗೂ ಕರ್ತವ್ಯ. ಇನ್ನೂ ಒಂದು ವಿಶೇಷ ಗಮನಿಸಿದ್ದೇನೆ. ನೀವೆಲ್ಲೂ ನಿಮಗೆ ಯಾರಿಂದ ಯಾವ ರೀತಿಯ ನೋವಾಗಿದೆ ಎಂಬ ಕುರಿತು ಯೋಚಿಸಲಿಲ್ಲ. ಬದಲಾಗಿ ಕೇವಲ ನಿಮ್ಮಿಂದ ಏನು ತಪ್ಪಾಗಿದೆ? ಅದಕ್ಕೆ ಪ್ರಾಯಶ್ಚಿತ್ತವೇನು? ಎಂದಷ್ಟೇ ಯೋಚಿಸುತ್ತಿದ್ದೀರಿ. ಇದು ನಿಮ್ಮ ಹೃದಯ ವೈಶಾಲ್ಯತೆಗೂ, ನಿಷ್ಕಲ್ಮಶ ಮನಸ್ಸಿಗೂ ಹಿಡಿದ ಕನ್ನಡಿಯಂತಿದೆ. ಈಗ ನಿಮ್ಮ ಜೊತೆ ನೆಮ್ಮದಿಯಿಂದ, ಪ್ರೀತಿ ವಾತ್ಸಲ್ಯಗಳಿಂದ ಬದುಕುವ ಆಸೆ ನಮಗೂ ಇದೆಯಮ್ಮಾ! ನಮ್ಮ ಭಾವನೆಗಳಿಗೆ ಮನ್ನಣೆ ನೀಡಲಾರೆಯಾ ತಾಯಿ…?” ಎಂದು ಬೇಡಿಕೊಂಡನು. ಕುಂತಿ ಮಾರುತ್ತರ ನೀಡಲಿಲ್ಲ.
ಆಗ ದ್ರೌಪದಿ “ಅಮ್ಮಾ ಆಗ ನೀವು ಹೇಳಿದಿರಿ, ಅತ್ತೆ ಮಾವಂದಿರ ಸೇವೆ ಮಾಡುವುದು ಸೊಸೆಯ ಕರ್ತವ್ಯ ಧರ್ಮವೆಂದು. ನನಗೂ ಅದು ತಿಳಿದಿದೆ. ಆದರೆ ನೀವೀಗ ನನಗೆ ನಿಮ್ಮ ಸೇವೆ ಮಾಡುವ ಅವಕಾಶ ನೀಡಬೇಕು. ನಮ್ಮ ಜೊತೆಗೆ ನೀವು ಅರಮನೆಗೆ ಬರಬೇಕಮ್ಮ. ನಿಮ್ಮ ಆಶೋತ್ತರಗಳನ್ನು ಅನುಸರಿಸಿ ನಮಗೂ ಸೇವೆ ಮಾಡಬೇಕೆಂಬ ಆಸೆ ಇದೆಯಮ್ಮ. ಮನಸ್ಸು ಬದಲಾಯಿಸಿ ಅರಮನೆಗೆ ಬರಬೇಕು. ನಮ್ಮ ಬೇಡಿಕೆಗೆ ನೀವು ಒಲಿದು ಬರಬೇಕು” ಎಂದು ನಿವೇದಿಸಿಕೊಂಡಳು. ಆಗಲೂ ಕುಂತಿಯದು ನಿರುತ್ತರ.
ಭೀಮನು “ಅಮ್ಮಾ! ನೀನೇನಮ್ಮಾ? ನಿನಗೆ ಕೇವಲ ಕೌರವರ ಮರಣ, ಅಣ್ಣ ಕರ್ಣನ ಮರಣ ಮಾತ್ರ ಅಪರಾಧವಾಗಿ ಕಾಡುತ್ತಿದೆಯೆ? ಅಂತಹ ದುರಂತ ಯುದ್ದ ಆಗುವುದಕ್ಕೆ ಕಾರಣ ಯಾರಮ್ಮಾ? ನಿರಪರಾಧಿಗಳಾದ ನಿನ್ನ ಮೊಮ್ಮಕ್ಕಳು, ಅದೆಷ್ಟು ಮಿತ್ರ ರಾಜರೂ ಸತ್ತಿಲ್ಲವೆ? ಇಂತಹ ಮಹಾ ವಿನಾಶಕಾರಿ ರಕ್ತಪಾತಕ್ಕೆ ಕಾರಣವಾದದ್ದು ದುರ್ಯೋಧನನ ಹಠ. ಅದಕ್ಕೆ ನೀನಾಗಲಿ ನಾವಾಗಲಿ ಹೇಗೆ ಅಪರಾಧಿಗಳಾಗುತ್ತೇವೆ? ಅಣ್ಣ ಯುಧಿಷ್ಠಿರ ಏನೂ ಬೇಡ ನಮಗೆ ಕನಿಷ್ಠ ಐದು ಗ್ರಾಮ ಸಾಕು, ಹಸ್ತಿನೆಯ ಸಿಂಹಾಸನಕ್ಕೆ ನಿಷ್ಠರಾಗಿ ಇರುತ್ತೇವೆ ಎಂದು ಅಷ್ಟು ಬೇಡಿದರೂ, ಶ್ರೀಕೃಷ್ಣ ಪರಮಾತ್ಮ ಸಂಧಾನ ಮಾಡಿದರೂ ಒಪ್ಪದೆ ಉಳಿದು ಯುದ್ಧ ಬಯಸಿದ್ದು ದುರ್ಯೋಧನ. ಬೇಕಿದ್ದರೆ ಯುದ್ಧ ಮಾಡಿ ಗೆದ್ದು ಪಡೆದುಕೊಳ್ಳಲಿ ಎಂಬ ಸ್ಪಷ್ಟ ಪಂಥಾಹ್ವಾನ ನೀಡಿದವನು ಆ ದುರ್ಯೋಧನ. ಕ್ಷತ್ರಿಯರಾಗಿ ಯುದ್ಧ ಮಾಡದೆ ಹಿಂದುಳಿದರೆ ಧರ್ಮವಾಗುತ್ತಿತ್ತೇ ಅಮ್ಮಾ? ಎಲ್ಲಾ ತಿಳಿದೂ ಏನೇನೊ ಹೇಳಬೇಡಮ್ಮ. ನಮಗೆ ಅಮ್ಮ ಬೇಕು. ನೀನು ನಮ್ಮ ಜೊತೆಗಿರಬೇಕು. ಬಾ ಅಮ್ಮಾ..” ಎಂದು ಮುಗ್ಧ ಭಾವದಿಂದ ನುಡಿದು ಬೇಡಿದನು. ಆಗಲೂ ಕುಂತಿ ಸುಮ್ಮನುಳಿದಳು.
ಅರ್ಜುನನು “ಅಮ್ಮಾ! ಹುಟ್ಟಿದ ಎಳೆ ಮಗುವಿನ ಸೇವೆ, ಆಹಾರ ತಿನಿಸಿ, ಶುಚಿತ್ವಾದಿ ಕೆಲಸಗಳನ್ನು ಮಾಡುತ್ತಾ ಹೆತ್ತವರು ಮಕ್ಕಳನ್ನು ಬೆಳೆಸುತ್ತಾರೆ. ನಂತರ ಅವರು ನೀಡುವ ಸಂಸ್ಕಾರ, ವಿದ್ಯೆ ಹೆತ್ತವರ ಪ್ರೀತಿ ಸಾಂಸಾರಿಕ ಬಾಂಧವ್ಯ ಗಟ್ಟಿಗೊಳಿಸಿ ಜವಾಬ್ದಾರಿಯನ್ನು ಜಾಗೃತಿಗೊಳಿಸುತ್ತದೆ. ವೃದ್ಧಾಪ್ಯದಲ್ಲಿ ಮಾತಾಪಿತರ ಸೇವೆ ಮಾಡಬೇಕೆಂಬ ಮನಸ್ಸು ಮಕ್ಕಳದ್ದಾಗುತ್ತದೆ. ನಮಗೂ ನೀವು ಅಂತಹ ಶಿಕ್ಷಣ ನೀಡಿ ಸತ್ಪುರುಷರಾಗಿ ಬೆಳೆಸಿದ್ದೀರಿ. ಈಗ ನಿಮ್ಮ ಮಕ್ಕಳಾದ ನಾವು ಮಾತೆಯ ಸೇವಕರಾಗುವ ಕಾಲ. ನಮ್ಮನ್ನು ಮಾತೃಸೇವೆಯಿಂದ ವಂಚಿತರಾಗುವಂತೆ ಮಾಡುವುದು ನ್ಯಾಯವೇ? ವಾರ್ಧಕರಾದಾಗ (ವಯೋವೃದ್ಧರಾದಾಗ) ವಾನಪ್ರಸ್ಥ ಸ್ವೀಕರಿಸುವುದು ಧರ್ಮ. ಆದರೆ ನಿಮಗಿನ್ನೂ ಸಮಯವಿದೆಯಮ್ಮ. ತಪೋವನ ಸೇರಲೇಬಾರದು ಎಂಬ ನಿರ್ಬಂಧ ನಮ್ಮಲ್ಲಿಲ್ಲ. ಕಾಲ ಪಕ್ವವಾದಾಗ ನೀವು ಆ ತೀರ್ಮಾನ ಕೈಗೊಳ್ಳಬಹುದು. ಆದರೆ ಈಗ ನೀವು ನಮ್ಮ ಜೊತೆಗಿರುವ ಅಗತ್ಯವಿದೆ. ಅದೇ ಧರ್ಮ ಸಮ್ಮತವಾದುದು ಕೂಡ. ಅಲ್ಲಿಯ ತನಕ ನೀವು ನಮ್ಮ ಜೊತೆಗಿದ್ದು ರಾಜಮಾತೆಯಾಗಿ ಮಾರ್ಗದರ್ಶನ ನೀಡುತ್ತಾ, ರಾಜವೈಭೋಗದ ಜೀವನ ಅನುಭವಿಸಬೇಕು. ಒಂದು ವೇಳೆ ಒಪ್ಪದೆ ನೀವು ಅಕಾಲದಲ್ಲಿ ತಪೋವನ ಸೇರಿದರೆ ನಿಮ್ಮ ಪುತ್ರರು ಸಾಮ್ರಾಟರಾಗಿದ್ದು ಅಮ್ಮನನ್ನು ವಾನಪ್ರಸ್ಥಾಶ್ರಮಕ್ಕೆ ಕಳುಹಿಸಿದ್ದಾರೆ ಎಂದು ಕಂಡ ಲೋಕಗಳು ಹೇಳಲಾರವೆ? ಸಮಗ್ರವಾಗಿ ಯಾವ ವಿಭಾಗದಿಂದ ನೋಡಿದರೂ ನಿಮ್ಮ ನಿರ್ಧಾರ ಆತುರದ್ದು ಎಂಬುದಾಗಿ ಕಾಣುತ್ತಿದೆ. ಗೊಂದಲಕ್ಕೊಳಗಾಗದೆ ಅರಮನೆಯಲ್ಲಿ ನಮ್ಮ ಜೊತೆ ವಾಸಿಸಲು ನೀವು ಹಿಂದಿರುಗಬೇಕು. ಅದು ಉಚಿತವಾದ ಧರ್ಮವೂ ಆಗಿದೆ” ಎಂದು ಅರ್ಜುನನು ತನ್ನ ಅಭಿಪ್ರಾಯವನ್ನೂ, ಬೇಡಿಕೆಯನ್ನೂ ತಾಯಿ ಕುಂತಿದೇವಿಯ ಮುಂದಿರಿಸಿದನು.
ಆದರೆ ಕುಂತಿ ಒಂದೊಂದು ಮಾತು ಕೇಳುವಾಗಲೂ ಮೌನವಾಗಿದ್ದು ತಪೋವನದತ್ತ ಒಂದೊಂದು ಹೆಜ್ಜೆ ಮುಂದೆ ಮುಂದೆ ಹೋಗುತ್ತಲೆ ಇದ್ದಳು. ಇದನ್ನು ಅರಿತ ಧೃತರಾಷ್ಟ್ರ ಗಾಂಧಾರಿಯ ಮೂಲಕ ಕುಂತಿಗೆ ಅರೆಕ್ಷಣ ನಿಲ್ಲುವ ಸೂಚನೆ ನೀಡಿದನು. ಬಳಿಕ ವಿದುರ ಮತ್ತು ಸಂಜಯರನ್ನು ಕರೆದು “ನೀವಾದರು ಕುಂತಿಗೆ ತಿಳಿ ಹೇಳಿ” ಎಂದು ಬೇಡಿಕೊಂಡನು. ವಿದುರನು “ಅಮ್ಮಾ! ನಿಮ್ಮ ಮಕ್ಕಳು ಹೇಳುವುದನ್ನೆಲ್ಲಾ ಹೇಳಿದ್ದಾರೆ. ನನ್ನ ಕೋರಿಕೆಯೂ ನೀವು ಹಿಂದಿರುಗಿ ಹೋಗುವುದು ಉಚಿತ ಎಂಬುವುದಾಗಿದೆ. ನಿಮ್ಮ ಮನದಲ್ಲಿ ಆವರಿಸಿದ ಚಿಂತೆ ಧೃತರಾಷ್ಟ್ರ ಗಾಂಧಾರಿ ದಂಪತಿಗಳ ಸಹಾಯಕ್ಕೆ ತಪೋವನದಲ್ಲಿ ಯಾರಿದ್ದಾರೆ ಎಂದಲ್ಲವೆ? ಅಮ್ಮಾ ನಾನು ಮತ್ತು ಸಂಜಯ ಅವರ ಜೊತೆಯಲ್ಲಿ ಇದ್ದು ಸೇವೆ ಮಾಡುತ್ತೇವೆ. ಭವಿಷ್ಯತ್ತಿನಲ್ಲಿ ಕಾಲ ಕೂಡಿ ಬಂದಾಗ ನೀವೂ ತಪೋವನಕ್ಕೆ ಬಂದು ಜೊತೆಯಾಗಬಹುದು. ಈಗ ಮಕ್ಕಳೊಂದಿಗೆ ತೆರಳಿದರೆ ಅವರಿಗೂ ಆಧಾರವಾದೀತು. ನಾವೆಲ್ಲರೂ ಒಮ್ಮೆಲೆ ಅರಮನೆ ತೊರೆದರೆ ಮಕ್ಕಳು ಅನಾಥರಂತೆ ದುಃಖಕ್ಕೊಳಗಾಗಬಹುದು. ಹಾಗಾಗಲು ಅವಕಾಶ ಮಾಡಿ ಕೊಡದಿರಿ. ದಯೆತೋರಿ ಇನ್ನೊಮ್ಮೆ ಯೋಚಿಸಿ ಯುಕ್ತವಾದ ನಿರ್ಧಾರ ಕೈಗೊಳ್ಳಿ” ಎಂದು ಕೈಮುಗಿದು ಬೇಡಿದನು. ವಿದುರನ ಕೋರಿಕೆಗೂ ಕುಂತಿಯದ್ದು ಮೌನವೇ ಉತ್ತರವಾಗಿತ್ತು. ಆಕೆ ಮತ್ತೆ ಹೆಜ್ಜೆಯನ್ನೆತ್ತಿ ಮುಂದುವರಿಯಲು ಸಿದ್ದಳಾದಳು. ಆಗ ಸಂಜಯನು “ಹೇ ಕುಂತಿ ಮಾತೆ! ಪಾಂಡು ಚಕ್ರವರ್ತಿಯ ಕರಗ್ರಹಣ ಮಾಡಿ ನೀವು ಮಹಾರಾಣಿಯಾಗಿದ್ದವರು. ಚಕ್ರವರ್ತಿ ಧರ್ಮರಾಯನಿಗೆ ತಾಯಿಯಾಗಿ ರಾಜಮಾತೆಯೂ ಆಗಿರುವಿರಿ. ನ್ಯಾಯ ಶಾಸ್ತ್ರ ತಿಳಿಯದೆ ಇರುವವರೇನೂ ನೀವಲ್ಲ. ನ್ಯಾಯ ತೀರ್ಮಾನ ಮಾಡುವ ಸಮಯ ಬಹು ಮಂದಿಯ ಅಭಿಮತ ಏನಿದೆಯೋ ಅದನ್ನು ಸರಿಯಾದುದು ಎಂದು ಒಪ್ಪಿ ಅಂಗೀಕರಿಸುವುದು ಯುಕ್ತ ವಿಧಾನ. ಇಲ್ಲಿ ನೆರೆದಿರುವ ಪ್ರತಿಯೊಬ್ಬರ ಮತವೂ ನೀವು ಅರಮನೆಗೆ ಹಿಂದಿರುಗಬೇಕೆಂದು ಇದೆ. ಹೀಗಿರುವಾಗ ದಂಡಧರನಾಗಿದ್ದ ಪಾಂಡು ಚಕ್ರವರ್ತಿಯ ಪತ್ನಿ, ಪ್ರಸ್ತುತ ದಂಡಧರನಾಗಿರುವ ಚಕ್ರವರ್ತಿ ಧರ್ಮರಾಯನ ಮಾತೆಯಾಗಿ ನಿಮಗೆ ನಿಮ್ಮ ನಿರ್ಧಾರ ಸರಿಯೋ ತಪ್ಪೋ ಎಂದು ತೀರ್ಮಾನಿಸುವ ಜ್ಞಾನವಿದೆ. ತೀರ್ಮಾನ ತಪ್ಪಾಗಿದೆ ಎಂದು ಭಾವಿಸಿದರೆ ಪರಾಮರ್ಷಿಸುವ ಪೂರ್ಣ ಸ್ವಾತಂತ್ರ್ಯವೂ ನಿಮಗಿದೆ. ಹಾಗಾಗಿ ಮತ್ತೊಮ್ಮೆ ತರ್ಕಿಸಿ ಮುಂದುವರಿದರೆ ಒಳಿತು ಎಂದು ನಿಮ್ಮ ಈ ಸೇವಕನ ಬಿನ್ನಹ” ಎಂದು ಸಂಜಯನೂ ಧ್ವನಿಗೂಡಿಸಿದನು. ಆದರೆ ಕುಂತಿಯ ಪಾದಗಳು ಮತ್ತೊಂದು ಹೆಜ್ಜೆಯಿಡಲು ಮುಂದಾದವು.
ಇದನ್ನೆಲ್ಲಾ ಪ್ರೇಕ್ಷಕನಂತೆ ನೋಡುತ್ತಿದ್ದ ಧರ್ಮರಾಯನಿಗೆ ಅಮ್ಮ ಯಾರ ಮಾತಿಗೂ, ಯಾವ ಕಾರಣಕ್ಕೂ ತೀರ್ಮಾನ ಬದಲಿಸುವಂತೆ ಕಾಣುತ್ತಿಲ್ಲ ಎಂದು ಸ್ಪಷ್ಟವಾಗತೊಡಗಿತು. ಕೂಡಲೆ ಎರಡು ಹೆಜ್ಜೆ ಓಡುತ್ತಾ ಮುಂದೆ ಬಂದು ಮಂಡಿಯೂರಿ ಕುಳಿತು, ಶಿರಬಾಗಿ, ಕರಜೋಡಿಸಿ “ಅಮ್ಮಾ! ನಿನ್ನ ಮಗನಿಗೆ ಏನು ಅಪ್ಪಣೆಯಮ್ಮ? ಮುಂದೆ ನಾವು ಏನು ಮಾಡಬೇಕಮ್ಮಾ…. ನೀವು ನಮಗೆ ದಾರಿ ತೋರಿಸಬೇಕು?” ಎಂದು ದೀನನಾಗಿ ಪ್ರಾರ್ಥಿಸಿದನು. ಆಗ ಕುಂತಿಮಾತೆ ನಿಂತಳು, ನಿಂತು ಹಿಂದಿರುಗಿದಳು….
ಮುಂದುವರಿಯುವುದು…

























