
ನವದೆಹಲಿ: ಮುಖ್ಯಮಂತ್ರಿ ಆದ ಬಳಿಕ ತಮ್ಮನ್ನೇ ಟ್ರ್ಯಾಪ್ ಮಾಡಲು ಕೆಲವರು ಪ್ರಯತ್ನಿಸಿದ್ದರು ಎಂದು ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಸ್ಫೋಟಕ ಆರೋಪ ಮಾಡಿದ್ದಾರೆ. ಸಚಿವರಿಗೆ ಸ್ಟಿಂಗ್ ಆಪರೇಷನ್ ಬಗ್ಗೆ ಸಂಪುಟ ಸಭೆಯಲ್ಲಿ ಎಚ್ಚರಿಕೆ ನೀಡಿದ ವಿಚಾರಕ್ಕೆ ದೆಹಲಿಯಲ್ಲಿ ಪ್ರತಿಕ್ರಿಯಿಸಿದ ಅವರು, ಈ ಬಗ್ಗೆ ತಮ್ಮ ಬಳಿ ಸಂಪೂರ್ಣ ಮಾಹಿತಿ ಮತ್ತು ಸಾಕ್ಷ್ಯಗಳಿವೆ ಎಂದು ಹೇಳಿದ್ದಾರೆ.
ತಮ್ಮನ್ನು ಭೇಟಿಯಾಗಲು ಬಂದ ಕೆಲವರು ಚರ್ಚೆಯ ನೆಪದಲ್ಲಿ ಏನೇನು ಮಾಡಿದ್ದಾರೆ ಎಂಬುದು ಗೊತ್ತಿದೆ. ಅಗತ್ಯವಿದ್ದರೆ ಅವರ ಫೋಟೋಗಳನ್ನೂ ನೀಡುತ್ತೇನೆ. ಈ ಪ್ರಯತ್ನದ ಹಿಂದಿರುವವರು ಯಾರು ಮತ್ತು ಹಣಕಾಸಿನ ನೆರವು ನೀಡುತ್ತಿರುವವರು ಯಾರೆಂಬುದೂ ತಿಳಿದಿದೆ ಎಂದು ಡಿಕೆಶಿ ಹೇಳಿದ್ದಾರೆ.
ಜವಾಬ್ದಾರಿಯುತ ಸ್ಥಾನದಲ್ಲಿದ್ದೇನೆ:
ಮುಖ್ಯಮಂತ್ರಿಯಾಗಿ ಜವಾಬ್ದಾರಿಯುತ ಸ್ಥಾನದಲ್ಲಿರುವುದರಿಂದ ಆಧಾರವಿಲ್ಲದೆ ಮಾತನಾಡುವುದಿಲ್ಲ. ಈ ಬಗ್ಗೆ ಸಾಕ್ಷ್ಯಾಧಾರಗಳಿರುವ ಕಾರಣ ಕಾಂಗ್ರೆಸ್‌ನವರು ಎಚ್ಚರಿಕೆಯಿಂದ ಇರಬೇಕೆಂದು ಸೂಚಿಸಿದ್ದೇನೆ ಎಂದು ಶಿವಕುಮಾರ್ ತಿಳಿಸಿದ್ದಾರೆ.
ಫಾರ್ಮ್-7 ದುರ್ಬಳಕೆ ಆರೋಪ:
ಎಸ್‌ಐಆರ್ ಪ್ರಕ್ರಿಯೆಯಲ್ಲಿ ಚುನಾವಣಾ ಆಯೋಗದ ಫಾರ್ಮ್-7 ದುರ್ಬಳಕೆಯಾಗಿದೆ ಎಂಬ ಆರೋಪದ ದಾಖಲೆಗಳನ್ನು ದೆಹಲಿಗೆ ತಂದಿದ್ದು ಈ ದಾಖಲೆಗಳನ್ನು ಪಕ್ಷದ ವರಿಷ್ಠರ ಗಮನಕ್ಕೆ ತಂದು, ಪ್ರಕರಣದ ಕುರಿತು ತನಿಖೆ ನಡೆಸುವಂತೆ ಒತ್ತಾಯಿಸಲಾಗುವುದು ಎಂದಿದ್ದಾರೆ.
ಈ ಅಕ್ರಮದಲ್ಲಿ ರಾಜ್ಯಪಾಲರನ್ನು ಭೇಟಿಯಾದ ಕೆಲವು ನಾಯಕರೂ ಭಾಗಿಯಾಗಿದ್ದಾರೆ ಎಂದು ಆರೋಪಿಸಿದ ಅವರು, ತಮ್ಮ ಹೆಸರು ಬಹಿರಂಗವಾಗುವ ಭಯದಿಂದಲೇ ಕೆಲವರು ತನಿಖೆಗೆ ವಿರೋಧಿಸುತ್ತಿದ್ದಾರೆ ಎಂದು ಟೀಕಿಸಿದ್ದಾರೆ. ಕಾಂಗ್ರೆಸ್ ನಾಯಕರ ಮೇಲೆ ನಡೆದ ಪೊಲೀಸ್ ದಾಳಿಯನ್ನೂ ಅವರು ಅಮಾನವೀಯ ಎಂದು ಹೇಳಿದ್ದಾರೆ.
ಜಿಎಸ್ಟಿ ಸಭೆಯಲ್ಲಿ ರಾಜ್ಯದ ವಿಚಾರ ಪ್ರಸ್ತಾಪ:
ಕಳೆದ ಮೂರು ದಿನಗಳಿಂದ ನಡೆಯುತ್ತಿರುವ ಜಿಎಸ್ಟಿ ಸಭೆಗೆ ಇಂದು ಮುಖ್ಯಮಂತ್ರಿಗಳನ್ನು ಆಹ್ವಾನಿಸಲಾಗಿದೆ. ರಾಜ್ಯದ ಹಿತದೃಷ್ಟಿಯಿಂದ ಅಗತ್ಯವಿರುವ ಮಾಹಿತಿಯನ್ನು ಸಭೆಯಲ್ಲಿ ಮಂಡಿಸುವುದಾಗಿ ಡಿ.ಕೆ. ಶಿವಕುಮಾರ್ ತಿಳಿಸಿದ್ದಾರೆ.
ಡಿಕೆಶಿಗೆ ವಿಜಯೇಂದ್ರ ತಿರುಗೇಟು:
ಇನ್ನು ಸಚಿವರ ಸ್ಟಿಂಗ್ ಆಪರೇಷನ್ ಕುರಿತು ಡಿಕೆಶಿ ನೀಡಿದ ಎಚ್ಚರಿಕೆಗೆ ಬಿಜೆಪಿ ರಾಜ್ಯಾಧ್ಯಕ್ಷ ಬಿ.ವೈ. ವಿಜಯೇಂದ್ರ ತಿರುಗೇಟು ನೀಡಿದ್ದಾರೆ. ರಮೇಶ್ ಜಾರಕಿಹೊಳಿ ಪ್ರಕರಣದಲ್ಲಿ ಯಾರು ಸ್ಟಿಂಗ್ ಆಪರೇಷನ್ ಮಾಡಿದ್ದಾರೆ ಎಂಬುದು ರಾಜ್ಯದ ಜನರಿಗೆ ಗೊತ್ತಿದೆ ಎಂದು ಬಾಗಲಕೋಟೆಯಲ್ಲಿ ಹೇಳಿದ್ದಾರೆ.
ತಮ್ಮದೇ ಶಾಸಕರ ಮೇಲೆ ಸ್ಟಿಂಗ್ ಮಾಡುತ್ತಾರೋ, ‘ಡಿಂಗ್ ಡಿಂಗ್ ಆಪರೇಷನ್’ ಯಾರು ನಡೆಸಿದ್ದಾರೆ ಎಂಬುದೂ ಜನರಿಗೆ ತಿಳಿದಿದೆ ಎಂದು ವಿಜಯೇಂದ್ರ ವ್ಯಂಗ್ಯವಾಡಿದ್ದಾರೆ.






















