ಭಾಗ 665
ಭರತೇಶ್ ಶೆಟ್ಟಿ,ಎಕ್ಕಾರು

ಶ್ರೀಕೃಷ್ಣನು ವಿಚಿತ್ರವಾಗಿ ಕೂಗುತ್ತಿದ್ದ ಮುಂಗುಸಿಯನ್ನು ಉದ್ದೇಶಿಸಿ “ಅಯ್ಯಾ! ಏನಾದರು ಸಮಸ್ಯೆಯಾಗಿದೆಯೆ? ಆಗಿದ್ದರೆ ತಿಳಿಸಬಹುದೆ?” ಎಂದು ಕೇಳಿದನು. ಆಗ ವಿಶೇಷ ಎಂಬಂತೆ ಮುಂಗುಸಿ ಮನುಷ್ಯ ಭಾಷೆಯಲ್ಲಿ ಎಲ್ಲರಿಗೂ ಕೇಳಿಸುವಷ್ಟು ಗಟ್ಟಿ ಸ್ವರದಲ್ಲಿ ಉತ್ತರ ನೀಡತೊಡಗಿತು. “ಯಾರೂ ಅನ್ಯಥಾ ಭಾವಿಸದಿರಿ. ನಾನೊಂದು ಸಾಮಾನ್ಯ ಮತ್ತು ಕೇವಲ ಮುಂಗುಸಿಯಷ್ಟೇ ಆಗಿದ್ದೇನೆ. ಆದರೆ ಅದೇನು ಯೋಗವೋ ತಿಳಿಯದಾಗಿದ್ದೇನೆ. ದೀರ್ಘಾಯುಷಿಯಾಗಿ ಬಹಳಷ್ಟು ವರ್ಷಗಳಿಂದ ಬದುಕಿಕೊಂಡಿದ್ದೇನೆ. ಈಗ ಇಲ್ಲಿಗೆ ಬಂದಂತೆಯೆ ಬಹಳಷ್ಟು ಕಡೆ ಹೋಗಿ ಬಂದವನು. ಅಂದರೆ ಮಹತ್ತರವಾದ ಯಾಗ ಯಜ್ಞಗಳಾಗುವಲ್ಲಿಗೆ ಹೋಗಿ ನೋಡಿ ಬಂದವನಿದ್ದೇನೆ. ಧರ್ಮರಾಯನ ಯಜ್ಞದ ಬಗ್ಗೆ ನನ್ನ ಆಕ್ಷೇಪವೇನೂ ಇಲ್ಲ. ಇಲ್ಲಿರುವ ಎಲ್ಲರೂ ಹೊಗಳುತ್ತಿರುವಂತೆ ಬಹಳಷ್ಟು ವಿಜ್ರಂಭಣೆಯಿಂದ ನಡೆದಿರುವುದು ಸತ್ಯವೇ ಹೌದು. ಯಾಕೆಂದರೆ ಆ ಎಲ್ಲ ವೈಭವಗಳನ್ನು ಕಂಡು ಪ್ರತ್ಯಕ್ಷ ಸಾಕ್ಷಿ ಎಂಬಂತೆ ನಾನೇ ಇದ್ದೇನೆ. ಇಲ್ಲಿ ಸಂಪತ್ತಿನ ಲೆಕ್ಕಾಚಾರದಲ್ಲಿ ಹೇಳುವುದಾದರೆ, ಬಹಳಷ್ಟು ದಾನಧರ್ಮಗಳು ಇನ್ನೆಲ್ಲೂ ಇಲ್ಲ ಎಂಬಷ್ಟು ಯಥೇಚ್ಚವಾಗಿ ನೀಡಲ್ಪಟ್ಟಿದೆ. ಆದರೂ ಇಲ್ಲಿ ನಡೆದ ದಾನ ಧರ್ಮಗಳು ಅಷ್ಟೇನೂ ಮಿಗಿಲಾದದ್ದು ಎಂದೆನಿಸಿಕೊಳ್ಳಲಿಲ್ಲ. ಹಾಗಾಗಿ ಬೇಸತ್ತು ನಾನು ಕೂಗಿಕೊಳ್ಳುವಂತಾಯಿತು” ಎಂದು ಹೇಳಿತು.
ಆಗ ಅಲ್ಲಿದ್ದವರೆಲ್ಲರಿಗೂ ಪರಮಾಶ್ಚರ್ಯ! ಶ್ರೀಕೃಷ್ಣ ಪರಮಾತ್ಮ ಸ್ವಯಂ ಇಲ್ಲಿರುತ್ತಾ, ಅಗ್ರಗಣ್ಯರೂ, ಮಹಾತ್ಮರೂ ಆದ ಋಷಿ ಮುನಿಗಳು ನಿರ್ದೇಶನವಿತ್ತಂತೆ ಸಾಗಿದ ಧರ್ಮರಾಜನ ಯಜ್ಞದ ಒಂದು ಭಾಗದಲ್ಲಿ ಲೋಪವಾಗಿದೆ ಎಂದು ಮುಂಗುಸಿ ಹೇಳುತ್ತಿದೆಯೆ? ಹಾಗಾಗಲು ಸಾಧ್ಯವೇ ಇಲ್ಲ. ನಾವು ನೋಡಿರುವ, ಕೇಳಿ ತಿಳಿದಿರುವ ಯಾವುದೇ ಯಾಗ ಯಜ್ಞಾದಿಗಳಿರಲಿ ಇಲ್ಲಿ ಆದಷ್ಟು ಸಂಪತ್ತು ಸಂಗ್ರಹವಾದದ್ದನ್ನೂ ನೋಡಿದವರಲ್ಲ. ಇಷ್ಟೊಂದು ದಾನ ಧರ್ಮ, ದಕ್ಷಿಣೆಗಳು ನೀಡಲ್ಪಟ್ಟುದುದನ್ನು ಹೇಳಿದವರು / ಕೇಳಿದವರೂ ಇಲ್ಲ. ಹಾಗಿರುವಾಗ ಯಕಶ್ಚಿತ್ ಒಂದು ಮುದಿ ಮುಂಗುಸಿಯ ಮಾತು ಕೇಳಿ ಅದಕ್ಕೆ ಮಹತ್ವ ನೀಡುವ ಅಗತ್ಯವಿಲ್ಲ. ಪ್ರತ್ಯಕ್ಷ ಪ್ರಮಾಣವಾಗಿ ನಾವೆಲ್ಲರೂ ಇರುವಾಗ ಒಂದು ಮುಂಗುಸಿ ಹೇಳಿದೆ ಅಂದ ಮಾತ್ರಕ್ಕೆ ಅದು ಸತ್ಯವಾಗುವುದಿಲ್ಲ…. ಹೀಗೆಲ್ಲಾ ಅಲ್ಲಿ ನೆರೆದಿದ್ದವರು ತಮ್ಮ ತಮ್ಮೊಳಗೆ ಅಭಿಪ್ರಾಯ ಪ್ರಕಟಿಸಲು ತೊಡಗಿದರು.
ಧರ್ಮರಾಯ ಸತ್ಯಾತ್ಮನೂ, ಧರ್ಮಾತ್ಮನೂ, ಪರಮ ಸಹಿಷ್ಣುವೂ, ಸಂವೇದನಾಶೀಲ ಗುಣ ಸಂಪನ್ನನೂ ಆದ ಮಹಾರಾಜನಲ್ಲವೆ! “ಅಯ್ಯೋ! ಏನಾದರೂ ಅಪಚಾರವಾಯಿತೆ? ಒಂದು ವೇಳೆ ಆಗಿದ್ದರೂ ಅದನ್ನು ಸರಿ ಪಡಿಸುವ ದಾರಿ ಯಾವುದು ವಾಸುದೇವ ಕೃಷ್ಣಾ? ಏನು ಲೋಪವಾಗಿದೆಯೊ? ತತ್ಪರಿಣಾಮ ಮತ್ತೇನು ದೋಷ ಬಾಧಿಸಲಿದೆಯೊ! ಧರ್ಮಬುದ್ಧಿಯಿಂದ ಎಲ್ಲವನ್ನೂ ಬಹಳಷ್ಟು ವಿವೇಚಿಸಿ ಮಾಡಿದವರಿದ್ದೇವೆ. ಮತ್ತೆಲ್ಲಿ, ಏನು ಕೊರತೆಯಾಗಿದೆ ಎಂದು ತಿಳಿಯದಾಗಿದೆ ಕೃಷ್ಣಾ!” ಎಂದು ಹೇಳುತ್ತಾ ಅವನತ್ತ ನೋಡಿದನು.
ಸರಿ ನಮ್ಮ ನಮ್ಮೊಳಗೆ ಗೊಂದಲ ಯಾಕೆ? ಮುಂಗುಸಿಯನ್ನು ಕೇಳಿ ನೋಡೋಣ ಎಂದು ಸಂತೈಸಿದನು ಶ್ರೀಕೃಷ್ಣ. ಬಳಿಕ “ಅಯ್ಯಾ! ನೀನು ಅಸತ್ಯವನ್ನು ಹೇಳಿರಲಾರೆ. ಅಂತಹ ಅಗತ್ಯವೂ ನಿನಗಿಲ್ಲ. ಆದರೂ ನಿನ್ನ ದೃಷ್ಟಿಯಲ್ಲಿ ಯಾವ ರೀತಿಯ ಕೊರತೆಯಾಗಿದೆ? ಪರಿಪೂರ್ಣತೆಯನ್ನು ನೀನು ಕಾಣದೆ ಹೋಗಲು ಕಾರಣವೇನು? ಯಾಕೆ ಹಾಗೆ ಹೇಳಿರುವೆ? ತಿಳಿಸಬಹುದೆ?” ಎಂದು ನೇರವಾಗಿ ಪ್ರಶ್ನಿಸಿದನು.
ಆಗ ಮುಂಗುಸಿಯು “ಹೇ ಮಹಾತ್ಮಾ! ಮೊತ್ತ ಮೊದಲಾಗಿ ಧನ್ಯತಾ ಭಾವ, ಕೃತಾರ್ಥತೆಯ ಜೊತೆ ಸಂಭ್ರಮದಲ್ಲಿರುವ ನಿಮ್ಮೆಲ್ಲರ ಮನಸ್ಸನ್ನು ಕದಡುವ ಮಾತನ್ನು ನಾನು ಹೇಳಿದ್ದೇನೆ. ಆದರೆ ನನಗೆ ಹಾಗೆ ಮಾಡುವ ಅಥವಾ ಅಂತಹ ಯಾವ ಉದ್ದೇಶವೂ ಇರಲಿಲ್ಲ. ನನಗೆ ಏನು ಅನಿಸಿತೋ ಅದು ವಿಚಾರ ಮಾಡದೆ ನನ್ನಿಂದ ಹೊರಬಂದು ಬಿಟ್ಟಿತು. ಈಗ ನೀವೆಲ್ಲರೂ ಕೇಳುತ್ತಿದ್ದೀರಿ… ಹಾಗಾಗಿ ಹೇಳುತ್ತೇನೆ ಕೇಳಿ. ನಾನು ಪರಮ ಸತ್ಯವನ್ನು ಹೇಳುತ್ತಿದ್ದೇನೆ. ನನ್ನ ಮಾತುಗಳು ನಿಮಗೆ ಬಹಳಷ್ಟು ಅಪ್ರಿಯವಾಗಿ ಪರಿಣಮಿಸಬಹುದು. ಅದಕ್ಕಾಗಿ ಮೊದಲಾಗಿ ನಿಮ್ಮಲ್ಲಿ ಕ್ಷಮೆ ಯಾಚಿಸುತ್ತಾ ಸತ್ಯವಾದುದನ್ನು ಹೇಳುತ್ತಿದ್ದೇನೆ. ಹಿಂದೆ ಒಬ್ಬ ಬೇಡಿ ತಂದು ತಿನ್ನುತ್ತಿದ್ದ ಭಿಕ್ಷುಕನಾದ ಬಡ ಬ್ರಾಹ್ಮಣನಿದ್ದ. ಒಂದು ಸಂದರ್ಭ ಆ ಬಡ ಬ್ರಾಹ್ಮಣ ಮಾಡಿದ್ದ ಅನ್ನದಾನಕ್ಕೆ ಸರಿ ಮಿಗಿಲಾದ ದಾನ ಇಲ್ಲಿ ನಡೆಯಲಿಲ್ಲ ಎಂದು ಹೇಳುತ್ತಿದ್ದೇನೆ. ನಾನು ಹಾಗೆ ಹೇಳುವುದಕ್ಕೆ ಕಾರಣವೂ ಮತ್ತು ಸಮರ್ಥವಾದ ಸಾಕ್ಷಿಯೂ ಇದೆ. ಅದನ್ನು ಅಳೆಯುವಲ್ಲಿ ನನಗೆ ಆಗುವ ಅನುಭವ ಮಾಪನವಾಗಿ ಇದೆ” ಎಂದು ನುಡಿಯಿತು.
ಈ ಮಾತು ಕೇಳುತ್ತಿದ್ದಂತೆ ಅಲ್ಲಿರುವ ಎಲ್ಲರಿಗೂ ಕುತೂಹಲ ಹದ್ದು ಮೀರಿ ಹೋಯಿತು. ಭೀಮನಿಗಂತೂ ಕೋಪ ನೆತ್ತಿಗೇರಿತ್ತು. ಒಬ್ಬ ಬಡ ಬ್ರಾಹ್ಮಣ ನೀಡಿದ ಅನ್ನದಾನ ಕೂಡ ಶ್ರೇಷ್ಟ. ಆದರೂ ನಮ್ಮಣ್ಣನ ಯಾಜಮಾನ್ಯದಲ್ಲಿ ಸಾಗಿದ ಅನ್ನದಾನದಷ್ಟು ವೈಭವಯುತವಾಗಿ, ವೈವಿಧ್ಯವಾಗಿ ಆ ಬ್ರಾಹ್ಮಣನಿಗೆ ನೀಡಲು ಸಾಧ್ಯ ಇರಲಿಕ್ಕಿಲ್ಲ. ಹಾಗಿರುವಾಗ ನನ್ನ ಅಣ್ಣನ ಯಾಗದ ಅನ್ನದಾನ ಬಡ ಬ್ರಾಹ್ಮಣನದಕ್ಕಿಂತ ನಿಕೃಷ್ಟ ಎಂದು ಹೇಳುತ್ತಿರುವ ಈ ಮುಂಗುಸಿಯ ದೀರ್ಘಾಯುಷ್ಯ ಮುಗಿದಿದೆ. ನನ್ನ ಗದೆಯ ಏಟಿಗೆ ಸಾಯಬೇಕೆಂದು ಅದರ ಹಣೆಬರಹವಿದ್ದರೆ ಅದನ್ನು ಮೀರಲು ಸಾಧ್ಯವಿಲ್ಲ. ಅಂತ್ಯಕಾಲಕ್ಕೆ ವಿಪರೀತ ಬುದ್ದಿ ಎಂಬಂತಾಗಿದೆ ಇದರ ಮಾತು. ಎಂದು ಕ್ರೋಧಾವೇಷಕ್ಕೊಳಗಾಗಿ ಗದೆ ಎತ್ತಿಕೊಂಡನು. ಆಗ ಋಷಿಮುನಿಗಳು ಕಣ್ಸನ್ನೆಯಲ್ಲಿ ಹಾಗೆ ಮಾಡದಿರು ಎಂದು ತಡೆದರು. ಇನ್ನು ಕೆಲವರು ಧರ್ಮಾತ್ಮನಾದ ಧರ್ಮರಾಜನನ್ನು ಪರೀಕ್ಷಿಸಲು ಬಂದ ದೇವತೆ ಇರಬೇಕು. ಈ ಹಿಂದೆಯೂ ಅಂತಹ ಪರೀಕ್ಷೆಗಳು ಮಹಾರಾಜನಿಗೆ ಎದುರಾಗಿವೆಯಂತೆ. ಇನ್ನು ಕೆಲವರಿಗೆ ತೀರಾ ಬೇಸರವಾಗಿ ಹತಾಶ ಭಾವ ಪ್ರಕಟಿಸಿದರು.ಆದರೂ ಸಮಕ್ಷದಲ್ಲಿ ಮಹಾರಾಜ ಧರ್ಮರಾಯ ಮತ್ತು ಶ್ರೀಕೃಷ್ಣ ಇರುವಾಗ ನಮ್ಮ ಆಕ್ರೋಶ ತೋರಿಸುವಂತಿಲ್ಲ ಎಂದು ಸಹಿಸಿಕೊಂಡು ಅನ್ಯ ಮಾರ್ಗವಿಲ್ಲದೆ ಸುಮ್ಮನಾದರು. ಇಷ್ಟೆಲ್ಲಾ ನಡೆದು ಹೋದಾಗ ಧರ್ಮಮೂರ್ತಿಯಾದ ಧರ್ಮರಾಯನಂತೂ ಕುಸಿದು ಹೋಗಿದ್ದಾನೆ. ದೈನ್ಯತಾ ಭಾವದಿಂದ ಶ್ರೀಕೃಷ್ಣನತ್ತ ನೋಡುವುದನ್ನು ಬಿಟ್ಟು ಆತನ ಬಳಿ ಪರ್ಯಾಯ ಇರಲಿಲ್ಲ. ಆಗ ಶ್ರೀಕೃಷ್ಣ ಧರ್ಮಜನನ್ನು ಸಂತೈಸುವ ಭಾವ ಬೀರುತ್ತಾ “ಹೇ ಧರ್ಮರಾಯ ವಿಷಯ ಪೂರ್ತಿಯಾಗಿ ನಾವು ಕೇಳಿಲ್ಲ. ಅರ್ಧಕ್ಕೆ ದಂಡಧರ ಚಕ್ರವರ್ತಿಯಾದ ನೀನು ಕುಗ್ಗಬಾರದು. ಯಾವುದೊ ದೈವವಾಣಿಯೊಂದು ಈ ಮುಂಗುಸಿಯ ಮುಖವಾಣಿಯಾಗಿ ಬರುತ್ತಿರುವಂತಿದೆ. ಸೈರಿಸು ವಿಚಾರಿಸಿ ತಿಳಿಯೋಣ” ಎಂದು ಹೇಳಿ ಸಮಾಧಾನ ಪಡಿಸಿದನು. ನಂತರ ಮುಂಗುಸಿಯತ್ತ ತಿರುಗಿ “ಅಯ್ಯಾ! ನೀನು ಹೇಳುತ್ತಿರುವುದು ಸತ್ಯ ಆಗಿರಬಹುದು. ಪೂರ್ಣ ವಿಚಾರ ತಿಳಿದಿರುವ ನೀನು ಸಾರಾಂಶವನ್ನಷ್ಟೆ ಹೇಳಿದರೆ ಮಹಾರಾಜ ಧರ್ಮರಾಯನಿಗೆ ಅದು ವೇದ್ಯವಾಗದು. ಹಾಗಾಗಿ ಯಾವ ಬ್ರಾಹ್ಮಣ? ಏನು ದಾನ? ವಿವರವಾಗಿ ತಿಳಿಸುವೆಯಾ! ಸತ್ಯ ಅಪ್ರಿಯವಾಗಿದ್ದರೂ ಭಯ ಪಡದಿರು. ನಿನಗಿಲ್ಲಿ ಯಾವ ರೀತಿಯ ತೊಂದರೆಯೂ ಆಗದು. ಧರ್ಮರಾಯನು ಸತ್ಯವನ್ನು ತಿಳಿಯುವ ಕುತೂಹಲಿಗನಾಗಿದ್ದಾನೆ. ಪೂರ್ಣ ವಿಚಾರ ತಿಳಿಸುವೆಯಾ?” ಎಂದು ಕೇಳಿಕೊಂಡನು. ಆಗ ಮುಂಗುಸಿ ಸವಿವರವಾಗಿ ಬ್ರಾಹ್ಮಣನ ವಿಶೇಷ ಅನ್ನದಾನದ ಕಥೆ ಹೇಳಲಾರಂಭಿಸಿತು.
ಮುಂದುವರಿಯುವುದು…..






















