
ಬೆಂಗಳೂರು: ‘ಕಾಂತಾರ’ ಬಳಿಕ ನಟ, ನಿರ್ದೇಶಕ ಹಾಗೂ ನಿರ್ಮಾಪಕ ರಿಷಬ್ ಶೆಟ್ಟಿ ಹೊಸ ಸಿನಿಮಾಗೆ ಸಿದ್ಧತೆ ನಡೆಸುತ್ತಿದ್ದಾರೆ. ಈ ಚಿತ್ರಕ್ಕಾಗಿ ಹೊಸ ಪ್ರತಿಭೆಗಳ ಹುಡುಕಾಟ ಆರಂಭಿಸಿದ್ದು, ಆಡಿಷನ್ಗೆ ಅವಕಾಶ ನೀಡಿದ್ದಾರೆ.
‘ರಿಷಬ್ ಶೆಟ್ಟಿ ಫಿಲ್ಮ್ಸ್’ ಮೂಲಕ ಹೊಸ ಪ್ರತಿಭೆಗಳಿಗೆ ಸಿನಿಮಾ ರಂಗದಲ್ಲಿ ಅವಕಾಶ ಕಲ್ಪಿಸಲಾಗುತ್ತಿದೆ. ಈ ಕುರಿತು ಎಕ್ಸ್ನಲ್ಲಿ ಮಾಹಿತಿ ಹಂಚಿಕೊಂಡಿರುವ ರಿಷಬ್, ‘ನಮ್ಮನ್ ನೋಡ್ಲಿಕ್ಕೆ ನೀವ್ ಬಂದಿದಿರಿ ನಿಮ್ಮನ್ ನೋಡ್ಲಿಕ್ಕೆ ನಾವ್ ಬರ್ತಿದ್ದೇವೆ. ರಿಷಬ್ ಶೆಟ್ಟಿ ಫಿಲಂಸ್ ಕಡೆಯಿಂದ ಪ್ರತಿಭಾವಂತರಿಗೆ ಸುವರ್ಣ ಅವಕಾಶ’ ಎಂದು ಪೋಸ್ಟ್ ಮಾಡಿದ್ದಾರೆ.
ಸಿನಿಮಾ ರಂಗದ ನಿಮ್ಮ ಪಯಣ ಇಲ್ಲಿಂದಲೇ ಆರಂಭವಾಗಬಹುದು. ಒಂದು ಹೊಸ ಕಥೆ ರೂಪುಗೊಳ್ಳುತ್ತಿದ್ದು, ‘ರಿಷಬ್ ಶೆಟ್ಟಿ ಫಿಲ್ಮ್ಸ್’ನ ಈ ರೋಚಕ ಹೊಸ ಯೋಜನೆಗೆ ನಾವು ಹೊಸ ಪ್ರತಿಭೆಗಳನ್ನು ಹುಡುಕುತ್ತಿದ್ದೇವೆ. ನಿಮ್ಮಲ್ಲಿ ಅದಕ್ಕೆ ಬೇಕಾದ ಸಾಮರ್ಥ್ಯವಿದೆ ಎಂದು ನಿಮಗೆ ಅನ್ನಿಸಿದರೆ, ಸಿನಿಮಾ ಜಗತ್ತಿಗೆ ಕಾಲಿಡಲು ಇದೊಂದು ಉತ್ತಮ ಅವಕಾಶವಾಗಬಹುದು. ಬನ್ನಿ, ಈ ಪಯಣದ ಭಾಗವಾಗಿ,” ಎಂದು ರಿಷಬ್ ಹೇಳಿದ್ದಾರೆ.
ಅಕ್ಟೋಬರ್ 2ರಂದು ಬೆಂಗಳೂರಿನ ಜಯನಗರ 4ನೇ ಬ್ಲಾಕ್ನ ವಿಜಯ ಕಾಲೇಜಿನಲ್ಲಿ ಬೆಳಗ್ಗೆ 9ರಿಂದ ಸಂಜೆ 6ರವರೆಗೆ ಆಡಿಷನ್ ನಡೆಯಲಿದೆ. ಕನ್ನಡವನ್ನು ನಿರರ್ಗಳವಾಗಿ ಮಾತನಾಡುವ ಹಾಗೂ ಉತ್ತರ ಕರ್ನಾಟಕದ ಆಡುಭಾಷೆ ಬಳಸಬಲ್ಲ ಅಭ್ಯರ್ಥಿಗಳಿಗೆ ಆದ್ಯತೆ ನೀಡಲಾಗುತ್ತದೆ ಎಂದು ಮಾಹಿತಿ ನೀಡಿದ್ದಾರೆ.































































































































