
ನಾಸಿಕ್: ದೇಶಾದ್ಯಂತ ಚರ್ಚೆಗೆ ಕಾರಣವಾದ NEET-UG 2026 ಪ್ರಶ್ನೆಪತ್ರಿಕೆ ಸೋರಿಕೆ ಪ್ರಕರಣಕ್ಕೆ ಸಂಬಂಧಿಸಿದಂತೆ ಮಹಾರಾಷ್ಟ್ರದ ನಾಸಿಕ್‌ನಲ್ಲಿ ಒಬ್ಬ ವಿದ್ಯಾರ್ಥಿಯನ್ನು ಪೊಲೀಸರು ಬಂಧಿಸಿದ್ದಾರೆ.
ನಗರದ ಇಂದಿರಾನಗರ ಪ್ರದೇಶದ ನಿವಾಸಿ ಶುಭಂ ಖೈರ್ನಾರ್ ಎಂಬಾತನನ್ನು ಅಪರಾಧ ವಿಭಾಗದ ಪೊಲೀಸರು ಮಂಗಳವಾರ ಬಂಧಿಸಿದ್ದು, ರಾಜಸ್ಥಾನ ಪೊಲೀಸರಿಂದ ದೊರೆತ ಮಾಹಿತಿಯ ಆಧಾರದಲ್ಲಿ ಕಾರ್ಯಾಚರಣೆ ನಡೆಸಲಾಗಿದೆ.
ಸೋರಿಕೆಯಾದ ಪ್ರಶ್ನೆಪತ್ರಿಕೆಯನ್ನು ಟೆಲಿಗ್ರಾಂ ಮೂಲಕ ಪಡೆದು, ಹರಿಯಾಣದ ವ್ಯಕ್ತಿಗಳಿಗೆ ಮಾರಾಟ ಮಾಡಿದ ಆರೋಪ ಈತನ ಮೇಲಿದೆ. ಈ ಪ್ರಕರಣದಲ್ಲಿ ಭಾಗಿಯಾದಕ್ಕಾಗಿ ಸುಮಾರು 10 ಲಕ್ಷ ರೂ. ಪಡೆದಿದ್ದಾನೆ ಎಂದು ಹೇಳಲಾಗಿದೆ.
ಈವರೆಗೆ ಪ್ರಕರಣ ಸಂಬಂಧ ಎರಡು ರಾಜ್ಯಗಳಲ್ಲಿ ಒಟ್ಟು 9 ಮಂದಿಯನ್ನು ಬಂಧಿಸಲಾಗಿದ್ದು, 45ಕ್ಕೂ ಹೆಚ್ಚು ಜನರನ್ನು ವಿಚಾರಣೆಗೆ ಒಳಪಡಿಸಲಾಗಿದೆ. 30 ವರ್ಷದ ಶುಭಂ ಖೈರ್ನಾರ್ ಭೋಪಾಲ್‌ನಲ್ಲಿ ವೈದ್ಯಕೀಯ ಶಿಕ್ಷಣ ಪಡೆದಿದ್ದು ಮೂಲತಃ ನಾಸಿಕ್ ಜಿಲ್ಲೆಯ ನಂದಗಾಂವ್ ತಾಲೂಕಿನವನಾದ ಆತ, ಸದ್ಯ ಕುಟುಂಬದೊಂದಿಗೆ ಇಂದಿರಾನಗರದಲ್ಲಿ ವಾಸಿಸುತ್ತಿದ್ದನು.
ಪರೀಕ್ಷೆಗೆ ಕೆಲವು ದಿನಗಳ ಮೊದಲು ಈತನಿಗೆ ‘ಗೆಸ್ ಪೇಪರ್’ನ ಭೌತಿಕ ಪ್ರತಿ ಸಿಕ್ಕಿತ್ತು ಎನ್ನಲಾಗಿದೆ. ಬಳಿಕ ಅದರ ಸಾಫ್ಟ್ ಕಾಪಿಯನ್ನು ಹರಿಯಾಣದ ವ್ಯಕ್ತಿಗೆ ಕಳುಹಿಸಿದ್ದಾನೆ ಎಂದು ತನಿಖೆಯಲ್ಲಿ ತಿಳಿದುಬಂದಿದೆ.
ಪೊಲೀಸರಿಂದ ತಪ್ಪಿಸಿಕೊಳ್ಳಲು ಆತ ತನ್ನ ತಲೆಕೂದಲು ಕತ್ತರಿಸಿಕೊಂಡು ರೂಪ ಬದಲಿಸಿಕೊಂಡಿದ್ದರೂ, ಹಳೆ ಫೋಟೋಗಳು ಸಹಾಯದಿಂದ ಪೊಲೀಸರು ಆತ ದೇವಸ್ಥಾನಕ್ಕೆ ತೆರಳುತ್ತಿದ್ದ ವೇಳೆ ಬಂಧಿಸಿದ್ದಾರೆ.
ಈ ಜಾಲದ ಹಿಂದೆ ಮನೀಶ್ ಯಾದವ್ ಎಂಬಾತ ಪ್ರಮುಖ ಸಂಚುಕೋರನಾಗಿದ್ದಾನೆ ಎಂದು ಶಂಕಿಸಲಾಗಿದೆ. ಈಗಾಗಲೇ ಆತನನ್ನು ಕಸ್ಟಡಿಗೆ ಪಡೆದುಕೊಂಡಿದ್ದು, ಪ್ರಶ್ನೆಪತ್ರಿಕೆ ಹಂಚಿಕೆ ಆರೋಪದಲ್ಲಿ ರಾಕೇಶ್ ಮಂಡವಾರಿಯಾ ಎಂಬಾತನನ್ನೂ ಬಂಧಿಸಲಾಗಿದೆ.
ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡಿದ್ದ “ಗೆಸ್ ಪೇಪರ್” ಮತ್ತು ಮೂಲ ಪ್ರಶ್ನೆಪತ್ರಿಕೆಯಲ್ಲಿ ಹೋಲಿಕೆ ಕಂಡುಬಂದ ಹಿನ್ನೆಲೆ, ಕೇಂದ್ರ ಸರ್ಕಾರ NEET-UG 2026 ಪರೀಕ್ಷೆಯನ್ನು ರದ್ದುಪಡಿಸಿದೆ. ಪ್ರಕರಣದ ತನಿಖೆಯನ್ನು ಸಿಬಿಐಗೆ ವಹಿಸಲಾಗಿದ್ದು, ಪರೀಕ್ಷೆಯನ್ನು ಮರು ನಡೆಸಲು NTA ತೀರ್ಮಾನಿಸಿದೆ.






















