
ನವದೆಹಲಿ: ಪ್ರತಿಭಟನೆ ಮತ್ತು ಧರಣಿಗಳಿಂದ ಏನನ್ನೂ ಸಾಧಿಸಲು ಸಾಧ್ಯವಿಲ್ಲ. ರಾಜಕೀಯ ನಾಯಕರು ಜನರ ಸಮಸ್ಯೆಗಳಿಗೆ ಸ್ಪಂದಿಸಿ, ಜನಕಲ್ಯಾಣದತ್ತ ಗಮನ ಹರಿಸಬೇಕು ಎಂದು ಕೇಂದ್ರ ಗೃಹ ಸಚಿವ ಅಮಿತ್ ಶಾ ಗುರುವಾರ ಹೇಳಿದ್ದಾರೆ.
ದೆಹಲಿಯ ಹೊರವಲಯದಲ್ಲಿ ₹ 8,941 ಕೋಟಿ ವೆಚ್ಚದ ದೆಹಲಿ ಜಲ ಮಂಡಳಿಯ 33 ಯೋಜನೆಗಳಿಗೆ ಚಾಲನೆ ಹಾಗೂ ಶಂಕುಸ್ಥಾಪನೆ ನೆರವೇರಿಸಿ ಮಾತನಾಡಿದ ಅವರು, ಮತಗಳ್ಳತನ ಮತ್ತು ಮತದಾರರ ಪಟ್ಟಿಯ ವಿಶೇಷ ತೀವ್ರ ಪರಿಷ್ಕರಣೆ (SIR) ಕುರಿತು ಆರೋಪ ಮಾಡುತ್ತಿರುವ ಕಾಂಗ್ರೆಸ್ ಹಾಗೂ ಆಮ್ ಆದ್ಮಿ ಪಕ್ಷದ (ಎಎಪಿ) ವಿರುದ್ಧ ಟೀಕಾಪ್ರಹಾರ ನಡೆಸಿದರು.
ರಾಜಕೀಯ ತಂತ್ರಗಾರಿಕೆ ಮತ್ತು ಗುಂಪುಗಳ ಬಲಪ್ರದರ್ಶನದಿಂದ ಜನರ ತೀರ್ಪನ್ನು ಪ್ರಶ್ನಿಸಲು ಸಾಧ್ಯವಿಲ್ಲ. ಚುನಾವಣೆಯಲ್ಲಿ ಗೆಲ್ಲಲು ಜನರ ಬಳಿಗೆ ತೆರಳಿ ಅವರ ಸಮಸ್ಯೆಗಳನ್ನು ಅರ್ಥಮಾಡಿಕೊಳ್ಳಬೇಕು. ಆಡಳಿತಕ್ಕೆ ಆದ್ಯತೆ ನೀಡದಿದ್ದರೆ ಪ್ರತಿಪಕ್ಷಗಳು ಉಳಿದಿರುವ ರಾಜಕೀಯ ನೆಲೆಯನ್ನೂ ಕಳೆದುಕೊಳ್ಳಲಿವೆ ಎಂದು ಎಚ್ಚರಿಸಿದರು.
ಬಿಜೆಪಿ ಚುನಾವಣೆಯಲ್ಲಿ ಗೆದ್ದಾಗಲೆಲ್ಲ ಪ್ರತಿಪಕ್ಷಗಳು ಫಲಿತಾಂಶವನ್ನು ಪ್ರಶ್ನಿಸುತ್ತಿವೆ. ಸೋಲನ್ನು ಮುಚ್ಚಿಹಾಕಲು ಮತಗಳ್ಳತನದ ಆರೋಪವನ್ನು ಬಳಸಿಕೊಳ್ಳುತ್ತಿವೆ ಎಂದು ಅಮಿತ್ ಶಾ ದೂರಿದರು. ಈ ಆರೋಪಗಳ ಮೂಲಕ ಒಳನುಸುಳುಕೋರರ ಮತಗಳನ್ನು ಉಳಿಸಲು ಪ್ರಯತ್ನಿಸಲಾಗುತ್ತಿದೆ ಎಂದೂ ಟೀಕಿಸಿದರು.
2014ರಲ್ಲಿ ಬಿಜೆಪಿ ಕೇಂದ್ರದಲ್ಲಿ ಅಧಿಕಾರಕ್ಕೆ ಬರುವ ಮೊದಲೇ ಕಾಂಗ್ರೆಸ್ ಹಲವು ರಾಜ್ಯಗಳಲ್ಲಿ ಚುನಾವಣಾ ಸೋಲುಗಳನ್ನು ಕಂಡಿತ್ತು. ಕೇರಳ, ಹಿಮಾಚಲ ಪ್ರದೇಶ ಮತ್ತು ತೆಲಂಗಾಣದಲ್ಲಿ ಪ್ರತಿಪಕ್ಷಗಳು ಗೆದ್ದಾಗಲೂ ಇದೇ ಇವಿಎಂಗಳು ಹಾಗೂ ಚುನಾವಣಾ ಆಯೋಗ ಇದ್ದವು ಎಂದು ಶಾ ಹೇಳಿದರು. ಸೋತಾಗ ಚುನಾವಣಾ ಆಯೋಗವನ್ನು ಟೀಕಿಸುವ ಪ್ರತಿಪಕ್ಷಗಳು, ನ್ಯಾಯಾಲಯದ ತೀರ್ಪು ತಮ್ಮ ಪರವಾಗಿದ್ದಾಗ ಮಾತ್ರ ಅದನ್ನು ಸ್ವಾಗತಿಸುತ್ತವೆ ಎಂದು ವ್ಯಂಗ್ಯವಾಡಿದರು.
ಬಿಜೆಪಿ ಮುಂದಿನ 30 ವರ್ಷಗಳ ಕಾಲ ಅಧಿಕಾರದಲ್ಲಿರಲಿದೆ ಎಂದು ವಿಶ್ವಾಸ ವ್ಯಕ್ತಪಡಿಸಿದ ಶಾ, ಪ್ರತಿಪಕ್ಷಗಳ ನಕಾರಾತ್ಮಕ ರಾಜಕಾರಣವೇ ಅವುಗಳ ಅಧಿಕಾರದ ಹಾದಿಗೆ ಅಡ್ಡಿಯಾಗಲಿದೆ ಎಂದರು. ಕಾಂಗ್ರೆಸ್ ಮತ್ತು ಎಎಪಿ ತಾವು ಆಡಳಿತ ನಡೆಸುತ್ತಿರುವ ರಾಜ್ಯಗಳಲ್ಲಿ ಜನಕಲ್ಯಾಣ ಹಾಗೂ ಆಡಳಿತ ಸುಧಾರಣೆಗೆ ಒತ್ತು ನೀಡಬೇಕು ಎಂದು ಸಲಹೆ ನೀಡಿದರು.
ದೆಹಲಿಯ ಪರಿಸರ ಸಮಸ್ಯೆಗಳಿಗೆ ಹಿಂದಿನ ಸರ್ಕಾರಗಳೇ ಕಾರಣ:
ಯಮುನಾ ನದಿಗೆ ಒಳಚರಂಡಿ ಮತ್ತು ಕೈಗಾರಿಕಾ ತ್ಯಾಜ್ಯ ಸೇರುತ್ತಿರುವುದಕ್ಕೆ ಹಿಂದಿನ ಕಾಂಗ್ರೆಸ್ ಹಾಗೂ ಎಎಪಿ ಸರ್ಕಾರಗಳೇ ಕಾರಣ ಎಂದು ಅಮಿತ್ ಶಾ ಆರೋಪಿಸಿದರು. ನದಿಯನ್ನು ಸ್ವಚ್ಛಗೊಳಿಸಲು ಕೇಂದ್ರ ಸರ್ಕಾರದೊಂದಿಗೆ ದೆಹಲಿ, ಹರಿಯಾಣ ಮತ್ತು ಉತ್ತರ ಪ್ರದೇಶ ಸರ್ಕಾರಗಳು ಜಂಟಿಯಾಗಿ ಕಾರ್ಯನಿರ್ವಹಿಸುತ್ತಿವೆ ಎಂದರು.
2029ರ ಮೇ ವೇಳೆಗೆ ಸ್ವಚ್ಛ ಯಮುನೆಯೊಂದಿಗೆ ಜನರ ಮುಂದೆ ಬರಲಿದ್ದೇವೆ. ಪ್ರತಿ ಮನೆಗೂ ಒಳಚರಂಡಿ ಸಂಪರ್ಕ ಹಾಗೂ ಶುದ್ಧ ಕುಡಿಯುವ ನೀರು ಒದಗಿಸುವ ಉದ್ದೇಶದಿಂದ ಮೂರು ವರ್ಷಗಳ ಯೋಜನೆ ರೂಪಿಸಲಾಗಿದೆ. ಈಗ ಆರಂಭಿಸಿರುವ ಯೋಜನೆಗಳು ಈ ಗುರಿ ಸಾಧಿಸಲು ನೆರವಾಗಲಿವೆ ಎಂದು ತಿಳಿಸಿದರು.
ದೆಹಲಿಯ ಕಸದ ಗುಡ್ಡಗಳ ಕುರಿತು ಮಾತನಾಡಿದ ಅವರು, ಎರಡು ಕೋಟಿಗೂ ಹೆಚ್ಚು ಟನ್ ತ್ಯಾಜ್ಯ ತೆರವುಗೊಳಿಸಿ 100 ಎಕರೆ ಭೂಮಿಯನ್ನು ಮುಕ್ತಗೊಳಿಸಲಾಗಿದೆ. ಮುಂದಿನ ಎರಡು ವರ್ಷಗಳಲ್ಲಿ ಈ ಪ್ರದೇಶಗಳನ್ನು ಉದ್ಯಾನವನಗಳಾಗಿ ಪರಿವರ್ತಿಸಲಾಗುವುದು ಎಂದರು.
ಪಂಜಾಬ್ನಲ್ಲಿ ಮಾದಕವಸ್ತು ಸಮಸ್ಯೆ ನಿಯಂತ್ರಿಸಲು ಎಎಪಿ ವಿಫಲ:
ಪಂಜಾಬ್ನಲ್ಲಿ ಮಾದಕವಸ್ತುಗಳ ದುರ್ಬಳಕೆಯನ್ನು ತಡೆಯುವಲ್ಲಿ ಎಎಪಿ ಸರ್ಕಾರ ವಿಫಲವಾಗಿದೆ ಎಂದು ಅಮಿತ್ ಶಾ ಟೀಕಿಸಿದರು. 2029ರ ವೇಳೆಗೆ ರಾಜ್ಯದಲ್ಲಿ ಎನ್ಡಿಎ ಸರ್ಕಾರ ಅಧಿಕಾರಕ್ಕೆ ಬರಲಿದ್ದು, ಮಾದಕವಸ್ತುಗಳ ಅಕ್ರಮ ವ್ಯಾಪಾರವನ್ನು ಸಂಪೂರ್ಣವಾಗಿ ನಿರ್ಮೂಲನೆ ಮಾಡಲಾಗುವುದು ಎಂದು ಹೇಳಿದರು.






















