
ನವದೆಹಲಿ: ಉತ್ತರಾಖಂಡದಲ್ಲಿ ಮಲ್ಲಿಕಾರ್ಜುನ ಖರ್ಗೆಯವರ ರ್ಯಾಲಿ ನಡೆದ ಸ್ಥಳವನ್ನು ಶುದ್ಧೀಕರಣಗೊಳಿಸಿದ ಘಟನೆಯನ್ನು ಟೀಕಿಸಿದ್ದಕ್ಕಾಗಿ ತಮ್ಮ ವಿರುದ್ಧ ದಾಖಲಾಗಿರುವ ಎಫ್ಐಆರ್ಗೆ ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಪ್ರತಿಕ್ರಿಯಿಸಿದ್ದಾರೆ. ತಮ್ಮ ವಿರುದ್ಧ ದಾಖಲಾಗುವ ಪ್ರತಿಯೊಂದು ಪ್ರಕರಣವೂ ಎದೆಯ ಮೇಲಿನ ಪದಕದಂತಿದ್ದು, ಕೇಸುಗಳು ಹೆಚ್ಚಿದಷ್ಟೂ ಮೆಡಲ್ಗಳೂ ಹೆಚ್ಚುತ್ತವೆ ಎಂದು ಹೇಳಿದ್ದಾರೆ.
ಎಫ್ಐಆರ್ ವಿರುದ್ಧ ಕಾಂಗ್ರೆಸ್ ನಾಯಕರು ತೀವ್ರ ಆಕ್ರೋಶ ವ್ಯಕ್ತಪಡಿಸಿದ್ದಾರೆ. ಎಫ್ಐಆರ್ ರದ್ದಾಗುವವರೆಗೂ ಹೋರಾಟ ಮುಂದುವರಿಸುವುದಾಗಿ ಕೆ.ಸಿ. ವೇಣುಗೋಪಾಲ್ ಹೇಳಿದ್ದಾರೆ. ಇದು ಬಿಜೆಪಿಯ ಸಾಮಾಜಿಕ ನ್ಯಾಯವೇ ಎಂದು ಕುಮಾರಿ ಸೆಲ್ಜಾ ಪ್ರಶ್ನಿಸಿದ್ದು, ಶುದ್ಧೀಕರಣ ನಡೆಸಿದವರ ವಿರುದ್ಧ ಏಕೆ ಕ್ರಮ ಕೈಗೊಂಡಿಲ್ಲ ಎಂದು ಪವನ್ ಖೇರಾ ಕೇಳಿದ್ದಾರೆ.
ರಾಹುಲ್ ದಲಿತ ವಿರೋಧಿ: ಬಿಜೆಪಿ
ವಯನಾಡಿನಲ್ಲಿ ಪ್ರಿಯಾಂಕಾ ಗಾಂಧಿ ನಾಮಪತ್ರ ಸಲ್ಲಿಸುವ ವೇಳೆ ಖರ್ಗೆಯವರನ್ನು ಎರಡನೇ ಸಾಲಿನ ಕುರ್ಚಿಯಲ್ಲಿ ಕೂರಿಸಲಾಗಿತ್ತು ಎಂದು ಬಿಜೆಪಿ ವಕ್ತಾರ ಗೌರವ್ ಭಾಟಿಯಾ ಆರೋಪಿಸಿದ್ದಾರೆ. ಕಾಂಗ್ರೆಸ್ ನಾಯಕ ಉದಿತ್ ರಾಜ್ ಅವರು ರಾಮನಾಥ್ ಕೋವಿಂದ್ ಮತ್ತು ದ್ರೌಪದಿ ಮುರ್ಮು ವಿರುದ್ಧ ಆಕ್ಷೇಪಾರ್ಹ ಹೇಳಿಕೆ ನೀಡಿದಾಗ ರಾಹುಲ್ ಗಾಂಧಿ ಮೌನವಾಗಿದ್ದರು. ಅವರೇ ದೇಶದ ದೊಡ್ಡ ದಲಿತ ವಿರೋಧಿ ಎಂದು ಅವರು ಟೀಕಿಸಿದ್ದಾರೆ.






















































































