
ಬೆಂಗಳೂರು: ರಾಜ್ಯದ ಗೃಹಲಕ್ಷ್ಮೀ ಯೋಜನೆಯ ಫಲಾನುಭವಿಗಳಿಗೆ ಶೀಘ್ರದಲ್ಲೇ 33ನೇ ಕಂತಿನ ಹಣ ಬಿಡುಗಡೆಯಾಗುವ ನಿರೀಕ್ಷೆ ಮೂಡಿದೆ. ಡಿಕೆ ಶಿವಕುಮಾರ್ ನೇತೃತ್ವದಲ್ಲಿ ಸೋಮವಾರ ನಡೆದ ಗ್ಯಾರಂಟಿ ಅನುಷ್ಠಾನ ಪ್ರಾಧಿಕಾರದ ಸಭೆಯಲ್ಲಿ ಮುಂದಿನ ಕಂತಿನ ಹಣ ಬಿಡುಗಡೆ ಕುರಿತು ಚರ್ಚೆಯಾಗಿದ್ದು, ಫಲಾನುಭವಿಗಳಿಗೆ ಶೀಘ್ರದಲ್ಲೇ ಹಣ ಜಮೆಯಾಗುವ ಸಾಧ್ಯತೆ ಇದೆ.
ಸಭೆಯಲ್ಲಿ ಗೃಹಲಕ್ಷ್ಮೀ ಸೇರಿದಂತೆ ಪ್ರಮುಖ ಗ್ಯಾರಂಟಿ ಯೋಜನೆಗಳ ಅನುಷ್ಠಾನ ಮತ್ತು ಫಲಾನುಭವಿಗಳ ಅರ್ಹತೆ ಪರಿಶೀಲನೆ ಕುರಿತು ಚರ್ಚೆ ನಡೆಸಲಾಯಿತು. ಅನರ್ಹರು ಯೋಜನೆಗಳ ಲಾಭ ಪಡೆಯುತ್ತಿದ್ದಾರೆ ಎಂಬ ಆರೋಪದ ಹಿನ್ನೆಲೆಯಲ್ಲಿ ಸರ್ಕಾರ ಮರುಪರಿಶೀಲನೆಗೆ ಮುಂದಾಗಿದೆ.
1.17 ಕೋಟಿ ಮನೆಗಳ ಪರಿಶೀಲನೆ ಪೂರ್ಣ
ಗೃಹಜ್ಯೋತಿ ಯೋಜನೆಯಡಿ ಜುಲೈ 1ರಿಂದ ಆರಂಭವಾದ ಪರಿಶೀಲನೆಯಲ್ಲಿ ಒಟ್ಟು 1.67 ಕೋಟಿ ಮನೆಗಳ ಪೈಕಿ 1.17 ಕೋಟಿ ಮನೆಗಳ ಸಮೀಕ್ಷೆ ಪೂರ್ಣಗೊಂಡಿದೆ. ಸುಮಾರು 3 ಲಕ್ಷ ಫಲಾನುಭವಿಗಳು ಸ್ವಯಂಪ್ರೇರಿತವಾಗಿ ಯೋಜನೆಯಿಂದ ಹೊರಗುಳಿಯಲು ಸಿದ್ಧರಾಗಿದ್ದಾರೆ ಎನ್ನಲಾಗಿದೆ. ಪರಿಶೀಲನಾ ಅವಧಿಯನ್ನು ಸೆಪ್ಟೆಂಬರ್ 30ರವರೆಗೆ ವಿಸ್ತರಿಸಲಾಗಿದೆ.
ಗೃಹಜ್ಯೋತಿ ಮತ್ತು ಗೃಹಲಕ್ಷ್ಮೀ ಜೊತೆಗೆ ಅನ್ನಭಾಗ್ಯ ಯೋಜನೆಯ ಫಲಾನುಭವಿಗಳ ಅರ್ಹತೆಯನ್ನೂ ಪರಿಶೀಲಿಸುವ ಕುರಿತು ಸರ್ಕಾರ ಚರ್ಚೆ ನಡೆಸುತ್ತಿದೆ.
4 ಸಾವಿರಕ್ಕೂ ಹೆಚ್ಚು ಸದಸ್ಯರ ಸಮಾವೇಶ
ಗ್ಯಾರಂಟಿ ಅನುಷ್ಠಾನ ಪ್ರಾಧಿಕಾರದ ರಾಜ್ಯ, ಜಿಲ್ಲಾ ಮತ್ತು ತಾಲೂಕು ಮಟ್ಟದ 4 ಸಾವಿರಕ್ಕೂ ಹೆಚ್ಚು ಸದಸ್ಯರ ಸಮಾವೇಶವನ್ನು ಶೀಘ್ರದಲ್ಲೇ ನಡೆಸಲು ನಿರ್ಧರಿಸಲಾಗಿದೆ. ಗ್ರಾಮ ಪಂಚಾಯಿತಿ ಮಟ್ಟದಲ್ಲೂ ಸಮಿತಿಗಳನ್ನು ರಚಿಸುವ ಕುರಿತು ಸರ್ಕಾರ ಚಿಂತನೆ ನಡೆಸಿದ್ದು, ಒಂದು ಗ್ರಾಮ ಪಂಚಾಯಿತಿ ವ್ಯಾಪ್ತಿಯಲ್ಲಿ ಆರು ಸದಸ್ಯರಂತೆ ರಾಜ್ಯಾದ್ಯಂತ ಸುಮಾರು 36 ಸಾವಿರ ಸದಸ್ಯರ ನೇಮಕಾತಿ ಸಾಧ್ಯತೆ ಇದೆ.






















































































