
ರಾಯಚೂರು: ಲಿಂಗಸಗೂರು–ಬಳ್ಳಾರಿ ಪಾದಯಾತ್ರೆ ಆರಂಭಕ್ಕೂ ಮುನ್ನ ಮಾತನಾಡಿದ ವಿಧಾನಸಭೆ ವಿಪಕ್ಷ ನಾಯಕ ಆರ್. ಅಶೋಕ್, ರಾಜ್ಯ ಕಾಂಗ್ರೆಸ್ ಸರ್ಕಾರದ ವಿರುದ್ಧ ತೀವ್ರ ವಾಗ್ದಾಳಿ ನಡೆಸಿದರು. ನಾಗೇಂದ್ರ ರಾಜೀನಾಮೆ ಪ್ರತಿಪಕ್ಷಗಳ ಹೋರಾಟದ ಫಲ ಎಂದು ಹೇಳಿದ ಅವರು, ಕೆಪಿಎಸ್ಸಿ ಹಗರಣದಲ್ಲಿ ಹಲವು ಕಾಂಗ್ರೆಸ್ ನಾಯಕರು ಹಾಗೂ ಸಚಿವರು ಭಾಗಿಯಾಗಿದ್ದು, ಶಾರ್ಕ್ ಮೀನುಗಳು ಹಾಗೂ ತಿಮಿಂಗಲಗಳು ಹೊರಬರಬೇಕು ಎಂದು ಒತ್ತಾಯಿಸಿದರು. ನಾಗೇಂದ್ರ ವಿಕೆಟ್ ಪತನದ ಬಳಿಕ ಈ ಹಗರಣದಲ್ಲಿ ಮತ್ತೊಂದು ವಿಕೆಟ್ ಬೀಳುವ ಸಾಧ್ಯತೆ ಇದೆ ಎಂದರು.
ರಾಜ್ಯದಲ್ಲಿ 175 ತಾಲೂಕುಗಳನ್ನು ಬರಪೀಡಿತ ಎಂದು ಘೋಷಿಸಬೇಕಾಗಿದ್ದರೂ ಸರ್ಕಾರ ಕೇವಲ 101 ತಾಲೂಕುಗಳನ್ನು ಮಾತ್ರ ಘೋಷಿಸಿದೆ. ಇದು ಸರ್ಕಾರದ ಆರ್ಥಿಕ ಕೊರತೆಯನ್ನು ತೋರಿಸುತ್ತಿದೆ ಎಂದು ಅಶೋಕ್ ಆರೋಪಿಸಿದರು. ರೇಷನ್ ಕಾರ್ಡ್ ಸಮಸ್ಯೆ, ಗೃಹಲಕ್ಷ್ಮಿ ಯೋಜನೆಯ ಹಣ ಬಾಕಿ ಸೇರಿದಂತೆ ಹಲವು ಜನಸಾಮಾನ್ಯರ ಸಮಸ್ಯೆಗಳ ಕುರಿತು ಹೋರಾಟ ನಡೆಸಲಾಗುತ್ತಿದೆ ಎಂದರು.
ಮುಖ್ಯಮಂತ್ರಿ ಗದಗ ಜಿಲ್ಲೆಗೆ ಬರ ಅಧ್ಯಯನಕ್ಕೆ ತೆರಳುತ್ತಿರುವ ಬಗ್ಗೆ ಪ್ರತಿಕ್ರಿಯಿಸಿದ ಅವರು, ಬಿಜೆಪಿ ಹೋರಾಟ ಆರಂಭಿಸಿದ ಬಳಿಕ ಸಿಎಂ ಬರ ಅಧ್ಯಯನಕ್ಕೆ ಮುಂದಾಗಿರುವುದು ಕೇವಲ ನಾಟಕ ಎಂದು ಟೀಕಿಸಿದರು.






















































































