
ನವದೆಹಲಿ: ಕಾಕ್ರೋಚ್ ಜನತಾ ಪಾರ್ಟಿ (CJP) ವಕ್ತಾರ ಸೌರವ್ ದಾಸ್ ಅವರು ತಮ್ಮ ಮನೆ ವಿಳಾಸ ಸೇರಿದಂತೆ ವೈಯಕ್ತಿಕ ಮಾಹಿತಿಯನ್ನು ಸಾರ್ವಜನಿಕವಾಗಿ ಬಹಿರಂಗಪಡಿಸಿದ ಆರೋಪದ ಮೇಲೆ ಬಲಪಂಥೀಯ ನಿರೂಪಕ ಅಭಿಜಿತ್ ಅಯ್ಯರ್ ಮಿತ್ರ ಹಾಗೂ ಕೆಲವು ಕಾನೂನು ಮತ್ತು ಮಾಧ್ಯಮ ಪೋರ್ಟಲ್‌ಗಳ ವಿರುದ್ಧ ದೆಹಲಿ ಹೈಕೋರ್ಟ್‌ಗೆ ಅರ್ಜಿ ಸಲ್ಲಿಸಿದ್ದಾರೆ.
ತಮ್ಮ ಗೌಪ್ಯತೆಯ ಹಕ್ಕಿಗೆ ಗಂಭೀರ ಧಕ್ಕೆಯಾಗಿದೆ ಎಂದು ದಾಸ್ ಅರ್ಜಿಯಲ್ಲಿ ಆರೋಪಿಸಿದ್ದಾರೆ. ಕಳೆದ ವರ್ಷದಿಂದ ಗ್ರೇಟರ್ ಕೈಲಾಶ್‌ನಲ್ಲಿ ಬಾಡಿಗೆ ಮನೆಯಲ್ಲಿ ವಾಸಿಸುತ್ತಿದ್ದು, ತಮ್ಮ ವಿಳಾಸದ ಜೊತೆಗೆ ಪೋಷಕರ ವಿವರ, ಹಿನ್ನೆಲೆ ಹಾಗೂ ಲೈಂಗಿಕತೆಯಂತಹ ಖಾಸಗಿ ಮಾಹಿತಿಯನ್ನೂ ಪ್ರತಿವಾದಿಗಳು ಪ್ರಕಟಿಸಿದ್ದಾರೆ ಎಂದು ಹೇಳಿದ್ದಾರೆ.
ಕೆಲವರು ತಮ್ಮ ವಸತಿ ಆವರಣಕ್ಕೆ ಅನಧಿಕೃತವಾಗಿ ಪ್ರವೇಶಿಸಿ ಮನೆಯ ಒಳಭಾಗವನ್ನು ಚಿತ್ರೀಕರಿಸಿ, ಆ ದೃಶ್ಯಗಳನ್ನು ‘ಎಕ್ಸ್’ನಲ್ಲಿ ಹಂಚಿಕೊಂಡಿದ್ದಾರೆ ಎಂದೂ ದಾಸ್ ಆರೋಪಿಸಿದ್ದಾರೆ.
ತಮ್ಮ ಗೌಪ್ಯತೆ, ಘನತೆ ಹಾಗೂ ಭದ್ರತೆಯನ್ನು ರಕ್ಷಿಸುವಂತೆ ನ್ಯಾಯಾಲಯವನ್ನು ಅವರು ಕೋರಿದ್ದಾರೆ. ತಮ್ಮ ವಸತಿ ವಿವರಗಳ ಪ್ರಕಟಣೆ ಮತ್ತು ಹಂಚಿಕೆಗೆ ತಡೆ ನೀಡುವುದು, ಈಗಾಗಲೇ ಪ್ರಸಾರವಾಗಿರುವ ವೀಡಿಯೊಗಳು ಹಾಗೂ ಪೋಸ್ಟ್‌ಗಳನ್ನು ತೆಗೆದುಹಾಕುವಂತೆ ಎಕ್ಸ್ ಮತ್ತು ಗೂಗಲ್‌ಗೆ ನಿರ್ದೇಶನ ನೀಡುವಂತೆ ಮನವಿ ಮಾಡಿದ್ದಾರೆ. ಅಲ್ಲದೆ, ಗೌಪ್ಯತೆ ಉಲ್ಲಂಘನೆಗಾಗಿ ಪರಿಹಾರವನ್ನೂ ಕೋರಿದ್ದಾರೆ.
ಪತ್ರಕರ್ತರಾಗಿ ಹಾಗೂ ರಾಜಕೀಯ ಚಟುವಟಿಕೆಗಳಲ್ಲಿ ತೊಡಗಿಸಿಕೊಂಡಿರುವ ಹಿನ್ನೆಲೆಯಲ್ಲಿ ಈ ಹಿಂದೆ ಬೆದರಿಕೆಗಳು ಮತ್ತು ದ್ವೇಷ ಭಾಷಣಕ್ಕೆ ಗುರಿಯಾಗಿದ್ದಾಗಿ ದಾಸ್ ತಿಳಿಸಿದ್ದಾರೆ. ಮನೆಯ ನಿಖರ ವಿಳಾಸ ಬಹಿರಂಗವಾಗುತ್ತಿರುವುದು ತಮ್ಮ ಮತ್ತು ನಿವಾಸದ ಸುತ್ತಮುತ್ತಲಿನವರ ಸುರಕ್ಷತೆಗೆ ಗಂಭೀರ ಅಪಾಯ ಉಂಟುಮಾಡಬಹುದು ಎಂದು ಅವರು ಆತಂಕ ವ್ಯಕ್ತಪಡಿಸಿದ್ದಾರೆ.






















